ಕನ್ನಡಪ್ರಭ ವಾರ್ತೆ ಮದ್ದೂರು
ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ಬಗ್ಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ನೀಡಿರುವ ಲಘು ಹೇಳಿಕೆ ವಿರೋಧಿಸಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಪ್ರತಿಭಟನೆಗಿಳಿದ ಕಾರ್ಯಕರ್ತರು, ಸಚಿವ ರಾಜಣ್ಣ ವಿರುದ್ಧ ಘೋಷಣೆ ಕೂಗಿದರು. ಸಚಿವ ರಾಜಣ್ಣ ಸ್ವಾಮೀಜಿ ಪೀಠ ಬಿಟ್ಟು ಕೊಡುವಂತೆ ಉದ್ಧಟತನದ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು.
ಬೆಂಗಳೂರಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ವೇಳೆ ಚಂದ್ರಶೇಖರನಾಥ ಸ್ವಾಮೀಜಿ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟು ಕೊಡುವಂತೆ ನೀಡಿದ ಸಲಹೆಗೆ ಲಘುವಾಗಿ ರಾಜಣ್ಣ ಮಾತನಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ .ಉಮಾಶಂಕರ್ ಮಾತನಾಡಿ, ಚಂದ್ರಶೇಖರನಾಥ ಸ್ವಾಮೀಜಿ ಎಲ್ಲಾ ಪಕ್ಷದ ರಾಜಕಾರಣಿಗಳು ಸಿಎಂ ಸ್ಥಾನದ ಅಧಿಕಾರ ಅನುಭವಿಸಿದ್ದಾರೆ. ಆದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತ್ರ ಮುಖ್ಯಮಂತ್ರಿಯಾಗಿಲ್ಲ. ಹೀಗಾಗಿ ಅವರಿಗೆ ಸ್ಥಾನ ಬಿಟ್ಟು ಕೊಡುವಂತೆ ಹೇಳಿದ್ದಾರೆ, ಈ ವಿಚಾರವನ್ನೇ ಗುರಿಯಾಗಿಟ್ಟುಕೊಂಡು ಸಚಿವ ರಾಜಣ್ಣ ಸ್ವಾಮೀಜಿ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ. ಸಚಿವ ರಾಜಣ್ಣ ಈ ಕೂಡಲೇ ಚಂದ್ರಶೇಖರ ನಾಥ ಶ್ರೀಗಳ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಸಚಿವರು ಮಂಡ್ಯ ಜಿಲ್ಲೆಗೆ ಕಾಲಿಡದಂತೆ ದಿಗ್ಬಂಧನ ವಿಧಿಸುವುದಾಗಿ ಎಚ್ಚರಿಸಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಚಂದುಪುರ ಶಿವಲಿಂಗೇಗೌಡ ಮಾತನಾಡಿ, ಸ್ವಾಮೀಜಿ ವೇದಿಕೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ದಡಿ ನೀಡಿದ ಅಭಿಪ್ರಾಯಕ್ಕೆಸಚಿವ ರಾಜಣ್ಣ ಒಕ್ಕಲಿಗರ ಮಠ ಹಾಗೂ ನಾಯಕರ ಬಗ್ಗೆ ಲಘುವಾಗಿ ಮಾತನಾಡಿರುವುದು ಅವರ ಒಕ್ಕಲಿಗರ ವಿರೋಧಿ ಧೋರಣೆಯನ್ನು ಪ್ರತಿಬಿಂಬಿಸಿದೆ ಎಂದು ಕಿಡಿಕಾರಿದರು.ಸಚಿವ ರಾಜಣ್ಣ ಈ ಕೂಡಲೇ ತಮ್ಮ ಉದ್ಧಟತನದ ಹೇಳಿಕೆಗೆ ಸ್ವಾಮೀಜಿ ಹಾಗೂ ಒಕ್ಕಲಿಗ ಜನಾಂಗದಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಒಕ್ಕಲಿಗರ ಪ್ರತಿರೋಧಕ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ, ರಕ್ಷಣಾ ವೇದಿಕೆ ಅಶೋಕ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ, ಸಂಗೊಳ್ಳಿ ರಾಯಣ್ಣ ಸಂಘಟನೆಯ ಮಾ.ನ. ಪ್ರಸನ್ನ ಕುಮಾರ್,ಮುಖಂಡರಾದ ನಾರಾಯಣ್, ಹಾಗಲಹಳ್ಳಿ ಬಸವರಾಜು, ಕರಟಗೆರೆ ವಸಂತ, ದೊಡ್ಡರಸಿನಕೆರೆ ಶಿವು ಸೇರಿ ಹಲವರು ಭಾಗವಹಿಸಿದ್ದರು.