ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬ್ಯಾಂಕುಗಳ ಸಹಕಾರ ಅಗತ್ಯ

KannadaprabhaNewsNetwork |  
Published : Jun 21, 2026, 02:00 AM IST
ಕ್ಯಾಪ್ಷನ19ಕೆಡಿವಿಜಿ33 ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಬ್ಯಾಂಕರ್ಸ್ ಜಿಲ್ಲಾ ಸಲಹೆಗಾರರ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್ ಗಳು ಆದ್ಯತೆ ಮೇಲೆ ಪರಿಗಣಿಸಿ ವಿದ್ಯಾರ್ಥಿಗಳಿಗೆ ಸಾಲ ನೀಡಬೇಕು ಹಾಗೂ ಸಿಎಸ್‌ಆರ್ ಯೋಜನೆಯಡಿ ಬ್ಯಾಂಕ್‌ಗಳು ಬೇರೆ ಉದ್ದೇಶಕ್ಕೆ ಬಳಸದೇ ಶಾಲೆಗಳ ಅಭಿವೃದ್ಧಿಗೆ ನೀಡುವಂತೆ ದಾವಣಗೆರೆ ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

- ಶೈಕ್ಷಣಿಕ ಸಾಲಕ್ಕೆ ಆದ್ಯತೆ ನೀಡಿ: ಸಂಸದೆ ಡಾ.ಪ್ರಭಾ ಸಲಹೆ । ಸಿಎಸ್‌ಆರ್ ಯೋಜನೆಯಡಿ ಶಾಲೆಗಳ ಅಭಿವೃದ್ಧಿಗೆ ಕ್ರಮವಹಿಸಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್ ಗಳು ಆದ್ಯತೆ ಮೇಲೆ ಪರಿಗಣಿಸಿ ವಿದ್ಯಾರ್ಥಿಗಳಿಗೆ ಸಾಲ ನೀಡಬೇಕು ಹಾಗೂ ಸಿಎಸ್‌ಆರ್ ಯೋಜನೆಯಡಿ ಬ್ಯಾಂಕ್‌ಗಳು ಬೇರೆ ಉದ್ದೇಶಕ್ಕೆ ಬಳಸದೇ ಶಾಲೆಗಳ ಅಭಿವೃದ್ಧಿಗೆ ನೀಡುವಂತೆ ದಾವಣಗೆರೆ ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ಯಾಂಕರ್ಸ್ ಜಿಲ್ಲಾ ಸಲಹೆಗಾರರ ಸಮಿತಿ ಸಭೆ ಹಾಗೂ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್‌ಗಳ ಗಣನೀಯ ಪ್ರಗತಿ ಕಂಡುಬಂದಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 1533 ಶೈಕ್ಷಣಿಕ ಸಾಲಗಳನ್ನು ಮಂಜೂರು ಮಾಡಲಾಗಿದ್ದು, ಒಟ್ಟು ₹62.55 ಕೋಟಿ ಸಾಲ ನೀಡಲಾಗಿದೆ. ಪೋಷಕರು ಈ ಹಿಂದೆ ಸಾಲ ಪಡೆದು ಬಾಕಿ ಉಳಿಸಿಕೊಂಡಿದ್ದಾರೆ ಅಥವಾ ಡಿಫಾಲ್ಟರ್ ಆಗಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ನಿರಾಕರಿಸುವಂತಿಲ್ಲ ಎಂದು ಬ್ಯಾಂಕರ್‌ಗಳಿಗೆ ಸೂಚಿಸಿದರು.

ದಾವಣಗೆರೆ ಜಿಲ್ಲೆಯ ಎಲ್ಲ ದ್ವಿತೀಯ ಪಿಯುಸಿ ಮತ್ತು ಪದವಿ ಕಾಲೇಜುಗಳ ಅಂಕಿಅಂಶ ಪಡೆದು, ಬ್ಯಾಂಕುಗಳಿಗೆ ನಿರ್ದಿಷ್ಟ ಶಾಲೆಗಳನ್ನು ನಿಯೋಜಿಸಲಾಗುವುದು. ಬ್ಯಾಂಕ್ ಅಧಿಕಾರಿಗಳು ಆಯಾ ಶಾಲೆಗಳಿಗೆ ಭೇಟಿ ನೀಡಿ ಹಣಕಾಸು ಸಾಕ್ಷರತೆ ಮತ್ತು ಶೈಕ್ಷಣಿಕ ಸಾಲಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಹಿರೇಮಠ್ ಮಾತನಾಡಿ, ಶೈಕ್ಷಣಿಕ ಸಾಲ ವಿತರಣೆಗೆ ಸಂಬಂಧಿಸಿದಂತೆ ಎಲ್ಲ ಬ್ಯಾಂಕುಗಳಿಗೂ ಐ.ಬಿ.ಎ. ನಿಯಮಾವಳಿಗಳು ಅನ್ವಯಿಸುತ್ತವೆ. ಈ ಯೋಜನೆಯಡಿ ₹7.5 ಲಕ್ಷವರೆಗಿನ ಶೈಕ್ಷಣಿಕ ಸಾಲಕ್ಕೆ ಯಾವುದೇ ರೀತಿಯ ಆಧಾರ ಅಥವಾ ಜಾಮೀನು ಪಡೆಯುವಂತಿಲ್ಲ. ಅವರ ಕೋರ್ಸ್‌ನ ಶುಲ್ಕದ ರಚನೆಗೆ ಅನುಗುಣವಾಗಿ ಸಾಲ ನೀಡಬೇಕಾಗುತ್ತದೆ. ಮ್ಯಾನೇಜ್‌ಮೆಂಟ್ ಅಥವಾ ಪೇಮೆಂಟ್ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ₹4 ಲಕ್ಷವರೆಗಿನ ಸಾಲಕ್ಕೆ ಯಾವುದೇ ಶ್ಯೂರಿಟಿ ಅಗತ್ಯವಿಲ್ಲ. ಆದರೆ, ₹4 ಲಕ್ಷ ಮೇಲ್ಪಟ್ಟ ಸಾಲಕ್ಕೆ ನಿಯಮಾನುಸಾರ ಶ್ಯೂರಿಟಿ ಕಡ್ಡಾಯ ಎಂದು ಹೇಳಿದರು.

ಐ.ಬಿ.ಎ. ಪಟ್ಟಿಯಲ್ಲಿರುವ ದೇಶದ 500 ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಶ್ಯೂರಿಟಿ ಇಲ್ಲದೆಯೇ ₹50 ಲಕ್ಷವರೆಗೆ ಶೈಕ್ಷಣಿಕ ಸಾಲ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆ ಬಗ್ಗೆ ಗ್ರಾಪಂ ಮಟ್ಟದಲ್ಲಿ ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಹಳ್ಳಿಹಳ್ಳಿಗಳಲ್ಲಿಯೂ ಈ ಕುರಿತು ಹೆಚ್ಚು ಪ್ರಚಾರ ನೀಡಿ ಜಾಗೃತಿ ಮೂಡಿಸಲಾಗುವುದು. ಈ ಯೋಜನೆಯ ಪ್ರಯೋಜನ ಪ್ರತಿಯೊಬ್ಬರಿಗೂ ತಲುಪಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಎಫ್‌ಐಡಿಡಿ ಉಪ ವ್ಯವಸ್ಥಾಪಕ ಭೀಮ್ ಚೌದರಿ, ಕೆನರಾ ಬ್ಯಾಂಕಿನ ಎಜಿಎಂ ವಿಜೇಶ್ ಕುಮಾರ್ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌-1) * ಬೇರೆ ಜಿಲ್ಲೆಗಳಿಗೆ ಹಣ ವರ್ಗಾಯಿಸಲು ಅವಕಾಶವಿಲ್ಲ ಡಾ.ಪ್ರಭಾ ಮಾತನಾಡಿ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಲಭ್ಯವಿರುವ ನಿಧಿಯನ್ನು ಬ್ಯಾಂಕುಗಳು ಮತ್ತು ಕಂಪನಿಗಳು ತಾವು ಕಾರ್ಯನಿರ್ವಹಿಸುವ ಜಿಲ್ಲೆಯ ವ್ಯಾಪ್ತಿಯಲ್ಲೇ ಬಳಸಬೇಕು, ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಡಿಸಿಸಿಒ ಸಭೆಯ ನಿರ್ದೇಶನದಂತೆ, ಬ್ಯಾಂಕ್ ಅಥವಾ ಕಂಪನಿಗಳು ತಮ್ಮ ಗ್ರಾಹಕರನ್ನು ಹೊಂದಿರುವ ಹಾಗೂ ಲಾಭ ಗಳಿಸುವ ಜಿಲ್ಲೆಯಲ್ಲೇ ಕಡ್ಡಾಯವಾಗಿ ಶೇ.2ರಷ್ಟು ಸಿಎಸ್‌ಆರ್ ಹಣ ವ್ಯಯಿಸಬೇಕು. ಇದನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ಹಣ ವರ್ಗಾಯಿಸಲು ಅವಕಾಶವಿಲ್ಲ ಎಂದು ತಿಳಿಸಿದರು. ಬ್ಯಾಂಕುಗಳು ಶಾಖೆಗಳಿರುವ ವ್ಯಾಪ್ತಿಯಲ್ಲೇ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಈ ನಿಧಿಯನ್ನು ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಾಣ, ಲ್ಯಾಬ್ ಉಪಕರಣಗಳ ಪೂರೈಕೆ ಅಥವಾ ವಿಶೇಷ ಚೇತನ ಫಲಾನುಭವಿಗಳ ಕಲ್ಯಾಣಕ್ಕಾಗಿ ಬಳಸಲು ಯೋಜಿಸಬೇಕು. ಎಲ್ಲ ಬ್ಯಾಂಕುಗಳ ಸಿ.ಎಸ್.ಆರ್. ನಿಧಿಯ ಲಭ್ಯತೆ ಸಂಪೂರ್ಣ ಪಟ್ಟಿ ಸಿದ್ಧಪಡಿಸಿ ಸಿಇಒ ಅವರಿಗೆ ನೀಡುವಂತೆ ಸೂಚನೆ ನೀಡಿದರು. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ₹436 ವಾರ್ಷಿಕ ಪ್ರೀಮಿಯಂನಲ್ಲಿ ₹2 ಲಕ್ಷದ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. 18 ರಿಂದ 50 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆಯು ತಮ್ಮ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಮೂಲಕ ಈ ಯೋಜನೆ ಪಡೆಯಬಹುದು. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಭಾರತ ಸರ್ಕಾರದ ಅಪಘಾತ ವಿಮಾ ಯೋಜನೆಯಾಗಿದೆ. ವಾರ್ಷಿಕ ಕೇವಲ ₹20 ಪ್ರೀಮಿಯಂನಲ್ಲಿ ₹2 ಲಕ್ಷ ಆಕಸ್ಮಿಕ ಮರಣ ಅಥವಾ ಶಾಶ್ವತ ಅಂಗವೈಕಲ್ಯದ ರಕ್ಷಣೆ ನೀಡುತ್ತದೆ. 18 ರಿಂದ 70 ವರ್ಷ ವಯಸ್ಸಿನ ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆದಾರರು ಇದಕ್ಕೆ ಅರ್ಹರಾಗಿದ್ದಾರೆ, ಅಟಲ್‌ ಪಿಂಚಣಿ ಯೋಜನೆ ಎನ್ನುವುದು ಭಾರತ ಸರ್ಕಾರದ ನಿವೃತ್ತಿ ವೇತನ ಯೋಜನೆಯಾಗಿದೆ. ಅಸಂಘಟಿತವಲಯದ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಒದಗಿಸುತ್ತದೆ. 18 ರಿಂದ 40 ವರ್ಷದೊಳಗಿನ ಭಾರತೀಯರು ತಮ್ಮ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆದು, ವಯಸ್ಸಿಗೆ ಅನುಗುಣವಾಗಿ ಪ್ರೀಮಿಯಂ ಪಾವತಿಸಿ 60 ವರ್ಷದ ನಂತರ ₹1000 ರಿಂದ ₹5000 ವರೆಗೆ ಖಚಿತ ಪಿಂಚಣಿ ಪಡೆಯಬಹುದು. ಈ ಯೋಜನೆಗಳ ಪ್ರಯೋಜನ ಬ್ಯಾಂಕ್ ಖಾತೆದಾರರು ಪಡೆದುಕೊಳ್ಳಲು ವಿಶೇಷ ಅಭಿಯಾನ ನಡೆಸುವಂತೆ ತಿಳಿಸಿದರು.

- - -

(ಬಾಕ್ಸ್‌-2) * ವಿವಿಧ ಯೋಜನೆಗಳಡಿ ಆರ್ಥಿಕ ನೆರವು

ನಬಾರ್ಡ್‌ ಡಿಡಿಎಂ ರೇಷ್ಮಾ ರೇಖಾ ಮಾತನಾಡಿ, ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಜಿಲ್ಲೆಯಲ್ಲಿ ಸಾಲ ವಿತರಣೆಗಾಗಿ ಬೆಳೆ ಸಾಲ, ಜಲ ಸಂಪನ್ಮೂಲ ಅಭಿವೃದ್ಧಿ, ಕೃಷಿ ಯಾಂತ್ರೀಕರಣ, ತೋಟಗಾರಿಕೆ, ಪಶುಸಂಗೋಪನೆ (ಡೈರಿ, ಕೋಳಿ, ಕುರಿ/ ಮೇಕೆ ಸಾಕಣೆ), ಮೀನುಗಾರಿಕೆ ಹಾಗೂ ಗೋದಾಮು ಮತ್ತು ಶೀತಲಗೃಹಗಳಂತಹ ಕೃಷಿ ಮೂಲಸೌಕರ್ಯಗಳು. ಗ್ರಾಮೀಣ ಕೈಗಾರಿಕೆಗಳು, ಸಣ್ಣ ಉದ್ಯಮಗಳು ಮತ್ತು ಕೈಮಗ್ಗ ವಲಯಕ್ಕೆ ದುಡಿಯುವ ಬಂಡವಾಳ ಮತ್ತು ದೀರ್ಘಾವಧಿ ಸಾಲ ಸೌಲಭ್ಯ. ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ಬಡ್ಡಿ ದರದಲ್ಲಿ ವಸತಿ ನಿರ್ಮಾಣಕ್ಕಾಗಿ ಆದ್ಯತೆಯ ಮೇರೆಗೆ ಸಾಲ. ಗ್ರಾಮೀಣ ಭಾಗದಲ್ಲಿ ಶಾಲೆಗಳು, ಕುಡಿಯುವ ನೀರು, ಸ್ವಚ್ಛತೆ ಹಾಗೂ ಸೌರಶಕ್ತಿ ಆಧಾರಿತ ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದರು.

ಜಿಲ್ಲೆಯ ರೈತರು, ಸಣ್ಣ ಉದ್ಯಮಿಗಳು ಹಾಗೂ ಸಾರ್ವಜನಿಕರು ಬ್ಯಾಂಕುಗಳ ಮೂಲಕ ಸಿಗುವ ಈ ಆದ್ಯತಾ ವಲಯದ ಸಾಲ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಕೃಷಿಕ್ ಆಪ್ ಬಳಸಿ ಸರ್ಕಾರದ ವಿವಿಧ ಕೃಷಿ ಸಾಲ ಯೋಜನೆಗಳು ಹಾಗೂ ಸಬ್ಸಿಡಿಗಳ ಮಾಹಿತಿ ಸುಲಭವಾಗಿ ಪಡೆದುಕೊಳ್ಳಬಹುದು. ಕೃಷಿಕ್ ಆ್ಯಪ್ ನೇರವಾಗಿ ಬ್ಯಾಂಕುಗಳ ಮಾದರಿಯಲ್ಲಿ ಅರ್ಹ ರೈತರು ಸರ್ಕಾರದ ಆರ್ಥಿಕ ನೆರವು ಪಡೆಯಬಹುದು, ಆ್ಯಪ್ ನಲ್ಲಿರುವ ''''ಸರ್ಕಾರಿ ಯೋಜನೆಗಳು'''' ವಿಭಾಗದ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್, ಶೂನ್ಯ ಬಡ್ಡಿ ದರದ ಬೆಳೆ ಸಾಲ ಹಾಗೂ ಪಶು ಸಂಗೋಪನೆ ಸಾಲಗಳ ಸಂಪೂರ್ಣ ವಿವರಗಳನ್ನು ಪಡೆಯಬಹುದು ಎಂದರು.

- - -

-19ಕೆಡಿವಿಜಿ33:

ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಬ್ಯಾಂಕರ್ಸ್ ಜಿಲ್ಲಾ ಸಲಹೆಗಾರರ ಸಮಿತಿ ಸಭೆ ಹಾಗೂ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗಳ ಎಲ್‌ಕೆಜಿ–ಯುಕೆಜಿಗೆ ಉತ್ತಮ ಸ್ಪಂದನೆ
ಶಿಥಿಲಾವಸ್ಥೆ ತಲುಪಿದ ಶಿರಸಿ ಪೊಲೀಸ್ ವಸತಿಗೃಹ, ಸೋರುವ ಮನೆಯಲ್ಲೇ ವಾಸ