ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕಾನೂನು ಅರಿವು ನೆರವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರ ಹೊನೋಲೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯು ನಿರ್ಮೂಲನೆಯಾಗಬೇಕಾದರೆ ಸಂಘ-ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಹಕಾರ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರ ಹೊನೋಲೆ ಅವರು ಹೇಳಿದರು.
ತಾಲೂಕಿನ ಕಂದಕೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ, ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಹಾಗೂ ಯಾದಗಿರಿ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಸೊಸೈಟಿ, ಸಾರ್ವಜನಿಕರ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ 1098 ಕರುನಾಡ ಕಾರ್ಮಿಕರ ವೇದಿಕೆ, ಯಾದಗಿರಿ ಧನ್ವಂತರಿ ಟ್ರಸ್ಟ್ ವತಿಯಿಂದ ನಡೆದ ಕಾನೂನು ಅರಿವು ನೆರವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನಾಡಿದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರಿಗೆ ದಂಡ ಮತ್ತು ಜೈಲು ಶಿಕ್ಷೆ ಇದೆ ಎಂದು ಎಚ್ಚರಿಕೆ ನೀಡಿದ ಅವರು, ಶಿಕ್ಷಣವು ಪ್ರತಿಯೊಬ್ಬ ಮಕ್ಕಳ ಮೂಲಭೂತ ಹಕ್ಕು ಎಂದು ಯಾವುದೇ ಮಕ್ಕಳ ಸಾಧನೆಗೆ ಬಡತನ ಅಡ್ಡಿಯಾಗಬಾರದು ಎಂದರು.
ಶಿಶು ಯೋಜನಾಭಿವೃದ್ಧಿ ಅಧಿಕಾರಿ ಶರಣಬಸಪ್ಪ ಬೆಳಗುಂಪಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ನಿಖರವಾದ ಗುರಿ ಇಟ್ಟುಕೊಂಡಲ್ಲಿ ಮಾತ್ರ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ ಎಂದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ 20,000 ರು.ಗಳಿಂದ 50,000 ರು.ಗಳ ವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಿಲ್ಲೆಯಲ್ಲಿ ನಿರಂತರವಾಗಿ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಗುರುಮಠಕಲ್ ಆರಕ್ಷಕ ವೃತ್ತ ನಿರೀಕ್ಷಕ ಸಂಜೀವಕುಮಾರ ಮಾತನಾಡಿ, ಮಕ್ಕಳ ರಕ್ಷಣೆಯ ಹಕ್ಕುಗಳ ಪ್ರತಿಯೊಬ್ಬ ಪಾಲಕರ ಹೋಣೆಯಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಂಕರಮ್ಮ ಮ್ಯಾಕಲ್, ಕಂದಕೂರು ಪಿಡಿಒ ಮಹ್ಮದ್ ಅಲಿ, ಮುಖ್ಯಗುರು ಎಸ್.ಎಂ. ಭೂತಲ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶಂಕರ ಸೋನಾರ್, ಕರುನಾಡು ಕಾರ್ಮಿಕರ ವೇದಿಕೆಯ ಜಿಲ್ಲಾಧ್ಯಕ್ಷ ಕಾಶೀನಾಥ ಕಣೀಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗರೆಡ್ಡಿ ಮುನಗಲ್ ಇತರರಿದ್ದರು. ಗಣಿತ ಶಿಕ್ಷಕ ನಾಗಪ್ಪ ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಮಧುಮತಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.