ಹಾಲು ಉದ್ಯಮ ಬೆಳೆಸಲು ರೈತರ ಸಹಕಾರ ಅಗತ್ಯ

KannadaprabhaNewsNetwork | Published : Jun 3, 2024 12:30 AM

ಸಾರಾಂಶ

ವಿಶ್ವ ಹಾಲು ದಿನಾಚರಣೆ ಅಂಗವಾಗಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ನಂದಿನಿ ಹಾಲು, ಬಿಸ್ಕೆಟ್ ಹಾಗೂ ಹಣ್ಣು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುವಿಶ್ವ ಹಾಲು ದಿನಾಚರಣೆ ಅಂಗವಾಗಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ನಂದಿನಿ ಹಾಲು, ಬಿಸ್ಕೆಟ್ ಹಾಗೂ ಹಣ್ಣು ವಿತರಿಸಲಾಯಿತು.ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತಾಧಿಕಾರಿ ಡಾ. ಉಮೇಶ್ ಜಿ ಮಾತನಾಡಿ, ಜಾಗತಿಕವಾಗಿ ಹಾಲಿನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಾಲು ವಿತರಣೆ ಮಾಡಲಾಗುತ್ತಿದ್ದು, ಜಾಗತಿಕ ಹಾಲಿನ ಮಹತ್ವ ತಿಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.2001ರಿಂದ ಎಫ್‌ಎಒರವರು ಈ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಹಾಲಿನ ಉದ್ಯಮ ಮತ್ತು ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗುತ್ತಿದೆ. ಜತೆಗೆ ಜನರಲ್ಲಿ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಸಹ ಇದರ ಧ್ಯೇಯವಾಗಿದೆ ಎಂದು ಹೇಳಿದರು.ತುಮಕೂರು ಹಾಲು ಒಕ್ಕೂಟದ ವತಿಯಿಂದ ಪ್ರತಿನಿತ್ಯ 9,01,300 ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಜಿಲ್ಲೆಯಲ್ಲಿ 1345 ಸಹಕಾರ ಸಂಘಗಳು ಅಸ್ತಿತ್ವದಲ್ಲಿವೆ. ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಆರೋಗ್ಯ ಯೋಜನೆಯ ಸದುಪಯೋಗವನ್ನು ಹಾಲು ಉತ್ಪಾದಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಜಿ. ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಒಕ್ಕೂಟದ ವತಿಯಿಂದ ಉಚಿತವಾಗಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಾಲು, ಬಿಸ್ಕೆಟ್ ವಿತರಣೆ ಮಾಡಲಾಗಿದೆ ಎಂದರು.ತುಮುಲ್‌ನಿಂದ 6.50 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ನಮ್ಮ ಒಕ್ಕೂಟದ ಹಾಲು ಶಾಲಾ ಮಕ್ಕಳಿಗೆ ನೀಡುವ ಕ್ಷೀರಭಾಗ್ಯ ಯೋಜನೆಗೂ ಬಳಕೆಯಾಗುತ್ತಿದೆ. ಸರ್ಕಾರದ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿರುವುದಿಂದ ತುಮುಲ್‌ಗೆ ಹಾಲು ಯಥೇಚ್ಛವಾಗಿ ಬರುತ್ತಿದೆ ಎಂದು ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಗೆ ಆಗಮಿಸಿದ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತಾಧಿಕಾರಿ ಡಾ. ಉಮೇಶ್ ಜಿ., ವ್ಯವಸ್ಥಾಕ ನಿರ್ದೇಶಕ ಶ್ರೀನಿವಾಸನ್ ಜಿ., ಪ್ರಧಾನ ವ್ಯವಸ್ಥಾಪಕ ತಿಮ್ಮನಾಯಕ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ವಿದ್ಯಾನಂದ್, ಗಿರೀಶ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೇಗ್ ಸಿ.ಐ. ಜಿಲ್ಲಾಸ್ಪತ್ರೆ ರೋಗಿಗಳಿಗೆ ನಂದಿನಿ ಹಾಲು, ಬಿಸ್ಕೆಟ್ ಹಾಗೂ ಹಣ್ಣು ಹಂಪಲನ್ನು ವಿತರಿಸಿದರು. ತುಮುಲ್ ಉಪವ್ಯವಸ್ಥಾಪಕ ಚಂದ್ರಶೇಖರ್ ಕೇದನುರಿ, ಮಂಜುನಾಥ್ ನಾಯಕ್, ಟಿ.ಕೆ. ರವಿಕಿರಣ್ ಸೇರಿದಂತೆ ಹಾಲು ಒಕ್ಕೂಟದ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

Share this article