ಧಾರವಾಡ: ಸರ್ಕಾರದ ವಿವಿಧ ಯೋಜನೆಗಳನ್ನು ಗ್ರಾಪಂ ಹಂತದಲ್ಲಿ ಅನುಷ್ಠಾನಗೊಳಿಸಲು ಸ್ಥಳೀಯ ಆಡಳಿತ, ಜನರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಒಳಗೊಳ್ಳುವಿಕೆ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ಟಿ. ಕೆ. ಅಭಿಪ್ರಾಯಪಟ್ಟರು.
ಹಳ್ಳಿಗಳಲ್ಲಿ ನೀರು ನಿರ್ವಹಣೆ, ಜಲಜೀವನ ಮಿಷನ್, ನರೇಗಾ ಯೋಜನೆ ಅನುಷ್ಠಾನ ಮಾಡಲು ಇಲಾಖೆ ತುಂಬಾ ಶ್ರಮ ವಹಿಸಿದೆ. ಆದರೆ ಜನರ ಸಹಭಾಗಿತ್ವ ನಿರೀಕ್ಷಿತ ಪ್ರಮಾಣದಲ್ಲಿ ಇರದೇ ಇರುವುದರಿಂದ ಅಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯುಂಟಾಗುತ್ತಿದೆ ಎಂದರು.
ಗ್ರಾಪಂ ಮಟ್ಟದ ನೀರು ಮತ್ತು ನೈರ್ಮಲೀಕರಣ ಸಮಿತಿ (ವಿಲೇಜ್ ವಾಟರ್ ಆ್ಯಂಡ್ ಸ್ಯಾನಿಟೇಶನ್ ಕಮಿಟಿ) ಇನ್ನೂ ಚೆನ್ನಾಗಿ ಕಾರ್ಯುನಿರ್ವಹಿಸಬೇಕಿದೆ ಎಂದು ವಿವರಿಸಿದರು.ಕಸ ವಿಲೇವಾರಿ ಕುರಿತಂತೆ ಜಿಲ್ಲೆಯ ಒಟ್ಟು 446 ಗ್ರಾಪಂಗಳಲ್ಲಿ 134 ಗ್ರಾಪಂಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಶುದ್ದ ಕುಡಿಯುವ ನೀರು ಪೂರೈಸುವ ಮಹತ್ವದ ಜಲಜೀವನ ಮಿಷನ್ ಯೋಜನೆ ನಮ್ಮದು ಎಂಬ ಭಾವನೆ ಎಲ್ಲ ಗ್ರಾಮಸ್ಥರಲ್ಲಿ ಬರಬೇಕು. ನಳ ಕೀಳುವ ಅನಧಿಕೃತವಾಗಿ ನಳ ಜೋಡಿಸಿಕೊಳುವ, ಪೈಪ್‌ಲೈನ್ ಗಟಾರಗಳನ್ನಾಗಿಸುವ ಕಾರ್ಯ ಮಾಡಬಾರದು ಎಂದು ವಿನಂತಿಸಿದರು.
ಯುಬಿಎ ಕೋಶಗಳು ದತ್ತು ಗ್ರಾಮಗಳನ್ನು ಸರ್ವ ರೀತಿಯಲ್ಲಿ ಮಾದರಿಯಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಅದಕ್ಕೆ ಜಿಲ್ಲಾ ಪಂಚಾಯಿತಿಯ ಸಂಪೂರ್ಣ ಸಹಕಾರ ಇರಲಿದೆ ಎಂದರು.
ಹೈದರಾಬಾದ್ ಎನ್.ಐ.ಆರ್.ಡಿ.ಪಿ.ಆರ್. ವಿಷಯತಜ್ಞ ಡಾ. ಆರ್. ರಮೇಶ ಉಪನ್ಯಾಸ ನೀಡಿದರು.
ಕವಿವಿ ಉನ್ನತ ಭಾರತ ಅಭಿಯಾನ ಸಂಯೋಜಕ ಡಾ. ಚೇತನ ಜೆ.ಡಿ. ವಂದಿಸಿದರು.