ಪತ್ರಕರ್ತರ ಸಮಸ್ಯೆ ಬಗೆಹರಿಸಲು ಸಹಕಾರ: ಅಬ್ಬಯ್ಯ

KannadaprabhaNewsNetwork | Published : May 11, 2025 11:46 PM
Follow Us

ಸಾರಾಂಶ

ಪತ್ರಕರ್ತರು ತಮ್ಮ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಒಂದು ಸಭೆ ಏರ್ಪಡಿಸಿ, ಸರ್ಕಾರ ಮಟ್ಟದಲ್ಲಿ ಆಗುವ ಸಹಕಾರದ ಕುರಿತಂತೆ ಚರ್ಚಿಸಿ ಸಮಾಧಾನ ಕಂಡುಕೊಳ್ಳೋಣ.

ಹುಬ್ಬ‍ಳ್ಳಿ: ಇತ್ತೀಚಿಗೆ ಪತ್ರಿಕಾ ಮಾಧ್ಯಮದ ಬೆಳವಣಿಗೆ ಕುಂಠಿತವಾಗಿದ್ದು, ಆದರೂ ಬಹಳಷ್ಟು ಸಂಕಷ್ಟಗಳ ಮಧ್ಯೆ ಪ್ರಾಮಾಣಿಕತೆಯಿಂದ ಕಾರ್ಯ ಮಾಡುತ್ತಿದೆ. ಬಹಳಷ್ಟು ಪತ್ರಕರ್ತರು ಆರ್ಥಿಕ ಸಂಕಷ್ಟದಲ್ಲಿ ಜೀವನ ಕಳೆಯುತ್ತಿದ್ದಾರೆ. ಸರ್ಕಾರಗಳು ಪತ್ರಕರ್ತರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕು ಎಂದು ಶಾಸಕ ಪ್ರಸಾದ್‌ ಅಬ್ಬಯ್ಯ ಹೇಳಿದರು.

ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕುಟುಂಬ ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ತಮ್ಮ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಒಂದು ಸಭೆ ಏರ್ಪಡಿಸಿ, ಸರ್ಕಾರ ಮಟ್ಟದಲ್ಲಿ ಆಗುವ ಸಹಕಾರದ ಕುರಿತಂತೆ ಚರ್ಚಿಸಿ ಸಮಾಧಾನ ಕಂಡುಕೊಳ್ಳೋಣ ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ಮಹಾದೇ‍ವ ಹೆಗ್ಗಣ್ಣವರ ಮಾತನಾಡಿ, ಪತ್ರಕರ್ತ ಸಂಘದ ಕುಟುಂಬ ಮಿಲನ ಕಾರ್ಯಕ್ರಮ ಮಾದರಿ. ನಿತ್ಯ ಸುದ್ದಿ ಜಂಜಾಟದಲ್ಲಿರುವ ಪತ್ರಕರ್ತ ಮಿತ್ರರು ಒಂದು ದಿನ ಹೀಗೆ ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಬೆರೆಯುವುದು ಉತ್ತಮ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಲ್ಲಿ ಉತ್ತಮ ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಸದಸ್ಯರಿಗೆ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕ್ರಿಕೆಟ್‌ ಪಂದ್ಯದಲ್ಲಿ ರನ್ನರ್‌ಅಪ್‌ ಆದ "ಕನ್ನಡಪ್ರಭ " ತಂಡಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಟ್ರೋಫಿ ಮತ್ತು ನಗದು ಬಹುಮಾನ ವಿತರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಕನ್ನಡಪ್ರಭ ಛಾಯಾಗ್ರಾಹಕ ಈರಪ್ಪ ನಾಯ್ಕರ್‌ ಸೇರಿದಂತೆ ಹಲವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.