ಸಹಕಾರಿ ತೊಟ್ಟಿಲು ಅವಿಭಜಿತ ಧಾರವಾಡ ಜಿಲ್ಲೆ

KannadaprabhaNewsNetwork |  
Published : Jun 03, 2026, 02:00 AM IST
ವಿದ್ಯಾವರ್ಧಕ ಸಂಘದಲ್ಲಿ ಎಸ್‌.ಎಂ. ಹೊಳೆಯಣ್ಣವರ ದತ್ತಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ಮಾತ್ರ ಸಹಕಾರಿ ಕ್ಷೇತ್ರವು ಉತ್ತರೋತ್ತರ ಅಭಿವೃದ್ಧಿ ಹೊಂದಲು ಸಾಧ್ಯ. ವ್ಯಕ್ತಿಗಾಗಿ ಸಮಾಜ, ಸಮಾಜಕ್ಕಾಗಿ ವ್ಯಕ್ತಿ ಎಂಬುವುದು ಸಹಕಾರಿ ತತ್ವವಾಗಿದೆ.

ಧಾರವಾಡ:

ಭಾರತದಲ್ಲಿಯೇ ಪ್ರಥಮ ಸಹಕಾರಿ ಸಂಘವು ಅವಿಭಜಿತ ಧಾರವಾಡ ಜಿಲ್ಲೆಯ ಕಣಗಿನಹಾಳದಲ್ಲಿ ರೈತನ ಪತ್ತಿನ ಸಹಕಾರಿ ಸಂಘದ ಹೆಸರಿನಿಂದ 1905ರಲ್ಲಿ ಆರಂಭವಾಯಿತು. ಹೀಗಾಗಿ ಅವಿಭಜಿತ ಜಿಲ್ಲೆಯನ್ನು ಸಹಕಾರಿ ತೊಟ್ಟಿಲು ಎಂದು ಕರೆಯುತ್ತಾರೆ. ಇದು ಕರ್ನಾಟಕಕ್ಕೆ ಹೆಮ್ಮೆ ಹಾಗೂ ಅಭಿಮಾನ ಪಡುವ ಸಂಗತಿ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.

ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ನಡೆದ ಎಸ್‌.ಎಂ. ಹೊಳೆಯಣ್ಣವರ ದತ್ತಿಯಲ್ಲಿ ಮಾತನಾಡಿ, ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ಮಾತ್ರ ಸಹಕಾರಿ ಕ್ಷೇತ್ರವು ಉತ್ತರೋತ್ತರ ಅಭಿವೃದ್ಧಿ ಹೊಂದಲು ಸಾಧ್ಯ. ವ್ಯಕ್ತಿಗಾಗಿ ಸಮಾಜ, ಸಮಾಜಕ್ಕಾಗಿ ವ್ಯಕ್ತಿ ಎಂಬುವುದು ಸಹಕಾರಿ ತತ್ವವಾಗಿದೆ. ಸಹಕಾರಿ ತತ್ವದ ಮೇಲೆ ಪ್ರಾರಂಭವಾದ ಒಕ್ಕೂಟ ನಾಲ್ಕು ದಶಕಗಳಲ್ಲಿ ಹಲವಾರು ಅಡೆ-ತಡೆಗಳನ್ನು ಎದುರಿಸಿಯೂ ಲಾಭದತ್ತ ಮುನ್ನಡೆದಿದೆ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವವೇ ಕಾರಣವಾಗಿದೆ. ರೈತರ ಹಿತದೃಷ್ಟಿಯಿಂದ ಅವರಿಗೆ ಯಶಸ್ವಿನಿ ಯೋಜನೆಯನ್ನು ಕಲ್ಪಿಸಲಾಗಿದೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಲಾಭ ಮುಖ್ಯವಲ್ಲ. ಗುಣಮಟ್ಟದ ಸೇವೆ ಮುಖ್ಯ. ಇಂದು ರಾಜ್ಯದಲ್ಲಿ ವಿವಿಧ ಪ್ರಕಾರದ ಸಹಕಾರಿ ಸಂಘಗಳಿದ್ದು ಅವೆಲ್ಲವೂ ಪರಸ್ಪರ ಸಹಕಾರ ತತ್ವದ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತವೆ. ಈ ಕ್ಷೇತ್ರದಲ್ಲಿ ನೈತಿಕತೆ, ಪ್ರಾಮಾಣಿಕತೆ ಮುಖ್ಯ. ಹಳ್ಳಿಯ ರೈತರಿಂದ ಹಾಲು ಖರೀದಿಸಿ ಅವರ ಆರ್ಥಿಕ ಸಬಲತೆಗೆ ಕೆಎಂಎಫ್ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಬಿ. ಭೂಮನಗೌಡರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಭಾವಿಕಟ್ಟಿ, ದಿ. ಹೊಳೆಯಣ್ಣವರ ಸಹಕಾರಿ ಕ್ಷೇತ್ರದ ಮಹಾಮುತ್ಸದ್ಧಿಗಳಾಗಿದ್ದರು. ಸಹಕಾರವೇ ಜೀವನ ಎಂದು ನಂಬಿದ ಅವರು ಜೀವನದುದ್ದಕ್ಕೂ ಸಹಕಾರಿ ತತ್ವವನ್ನು ಅಳವಡಿಸಿಕೊಂಡಿದ್ದ ಎಂದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು, ಸತೀಶ ತುರಮರಿ, ಶಂಕರ ಕುಂಬಿ ನಿರೂಪಿಸಿದರು. ವಿಶ್ವೇಶ್ವರಿ ಹಿರೇಮಠ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಲವಾದರೂ ಹಾವೇರಿ ಜಿಲ್ಲೆಗೆ ಸಿಗುತ್ತಾ ಮಂತ್ರಿ ಸ್ಥಾನ?
ಬಳ್ಳಾರಿಯಲ್ಲಿ ಗುಡುಗು-ಸಿಡಿಲು ಸಮೇತ ಮಳೆನೂರಕ್ಕೂ ಅಧಿಕ ಮರಗಳು ಧರೆಗೆ