ಕೃಷಿ ಬಿಕ್ಕಟ್ಟಿಗೆ ಸಹಕಾರಿ ಕೃಷಿ ಪದ್ಧತಿ ಶಾಶ್ವತ ಪರಿಹಾರ

KannadaprabhaNewsNetwork |  
Published : Dec 06, 2024, 08:59 AM IST
4ಡಿಡಬ್ಲೂಡಿ8ಕರ್ನಾಟಕ ವಿದ್ಯಾವರ್ಧಕ ಸಂಘವು ಬಸಪ್ಪ ಮುಂದಿನಮನಿ ಸ್ಮರಣೆ ದತ್ತಿಯಲ್ಲಿ ಮರೇವಾಡದ ಪ್ರಗತಿಪರ ರೈತ ಬಸಲ್ಲ ಸಲಕಿ ಅವರಿಗೆ ‘ಬಸವಕೃಷಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.   | Kannada Prabha

ಸಾರಾಂಶ

ಇಂದು ಕೃಷಿ ಭೂಮಿ, ಕೃಷಿಯೇತರ ಉದ್ದೇಶಕ್ಕಾಗಿ ಹೆಚ್ಚು ಬಳಕೆಯಾಗುತ್ತಿದೆ. ಕೃಷಿ ಬಿಕ್ಕಟ್ಟಿಗೆ ಭಾರತದ ಕೃಷಿ ನೀತಿಯೂ ಒಂದು ಕಾರಣವಾದರೆ, ವಿವಿಧ ಕಂಪನಿಗಳಿಗೂ ಸರ್ಕಾರ ಕೃಷಿ ಭೂಮಿ ಖರೀದಿಗೆ ಮುಕ್ತ ಅವಕಾಶ ನೀಡಿದ್ದು ಮತ್ತೊಂದು ಕಾರಣ.

ಧಾರವಾಡ:

ಕೃಷಿ ಬಿಕ್ಕಟ್ಟಿಗೆ ರೈತರಿಗೆ ಸಹಕಾರಿ ಕೃಷಿ ಪದ್ಧತಿಯೇ ಶಾಶ್ವತ ಪರಿಹಾರವಾಗಬಲ್ಲದು ಮಾತ್ರವಲ್ಲ ವರವೂ ಆಗಿದೆ ಎಂದು ಹಿರಿಯ ಪತ್ರಕರ್ತ ಡಾ. ಸಿದ್ಧನಗೌಡ ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಬಸಪ್ಪ ಮುಂದಿನಮನಿ ಸ್ಮರಣೆ ದತ್ತಿ ಅಂಗವಾಗಿ ‘ಬಸವಕೃಷಿ ಪ್ರಶಸ್ತಿ’ ಪ್ರದಾನದಲ್ಲಿ ‘ಕೃಷಿ ಬಿಕ್ಕಟ್ಟುಗಳು’ ಕುರಿತು ಮಾತನಾಡಿ, 1950ರಲ್ಲಿ ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದು ಕರೆಯಲಾಗಿತ್ತು. ಕೃಷಿಯಿಂದ ಶೇ. 50 ಪಾಲು ಆದಾಯವಿತ್ತು. ಇಂದು ಕೃಷಿಯಿಂದ ಶೇ. 15 ಮಾತ್ರ ಆದಾಯವಿದೆ. ರೈತರಿಗೆ ವೈಜ್ಞಾನಿಕ ಬೆಲೆ ನೀತಿ ಇಲ್ಲ. ರೈತರು ಸಾಲದ ಸುಳಿಯಿಂದ ಮುಕ್ತವಾಗುವ ಅವಕಾಶವಿಲ್ಲ. ಒಂದೆಡೆ ಉದ್ಯಮಪತಿಗಳ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ, ಅದೇ ರೈತರಿಗೆ ನಬಾರ್ಡದಿಂದ ಸಿಗಬೇಕಾದ ಸಾಲ ಕಡಿಮೆ ಮಾಡುತ್ತಿರುವುದು ಆತಂಕಕಾರಿ ಎಂದರು.

ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರು ಬೀದಿಬದಿ ಮಾರಾಟ ಮಾಡುವ ಪರಿಸ್ಥಿತಿ ಶೋಚನೀಯವಾಗಿದೆ. ರೈತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕ್ಷೇತ್ರದಲ್ಲಿ ಧ್ವನಿ ಎತ್ತಲು ರಾಯಭಾರಿಗಳನ್ನು ಸೃಷ್ಟಿಸಬೇಕಾಗಿದೆ. ಆಶೀರ್ವಾದ ಗೋಧಿ ಹಿಟ್ಟನ್ನು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಮಾಡುವುದು ಒಂದೆಡೆಯಾದರೆ, ರೈತರು ಬೆಳೆದ ಗೋಧಿ ಬೆಳೆ ಬಗ್ಗೆ ಏಕೆ ಪ್ರಚಾರ ಮಾಡುತ್ತಿಲ್ಲ?. ಗೋದ್ರೇಜ್ ಕಂಪನಿಯಂತಹ ಉದ್ದಿಮೆದಾರರಿಗೆ ಕೃಷಿ ಸಾಲ ನೀಡುತ್ತಿರುವುದು ದುರಂತ. ರೈತರ 27 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುತ್ತಾರೆ. ಆದರೆ, ರೈತರು ಬೆಳೆದ ತರಕಾರಿ ಬೆಳೆಗೆ ಬೆಂಬಲ ಬೆಲೆ ಇಲ್ಲದಿರುವುದು ಸವಾಲಾಗಿದೆ ಎಂದು ಹೇಳಿದರು.

ಇಂದು ಕೃಷಿ ಭೂಮಿ, ಕೃಷಿಯೇತರ ಉದ್ದೇಶಕ್ಕಾಗಿ ಹೆಚ್ಚು ಬಳಕೆಯಾಗುತ್ತಿದೆ. ಕೃಷಿ ಬಿಕ್ಕಟ್ಟಿಗೆ ಭಾರತದ ಕೃಷಿ ನೀತಿಯೂ ಒಂದು ಕಾರಣವಾದರೆ, ವಿವಿಧ ಕಂಪನಿಗಳಿಗೂ ಸರ್ಕಾರ ಕೃಷಿ ಭೂಮಿ ಖರೀದಿಗೆ ಮುಕ್ತ ಅವಕಾಶ ನೀಡಿದ್ದು ಮತ್ತೊಂದು ಕಾರಣ. ಈ ಮೇಲಿನ ಎಲ್ಲ ಬಿಕ್ಕಟ್ಟಿನ ಪರಿಹಾರಕ್ಕೆ ಡಾ. ಸ್ವಾಮಿನಾಥನ ವರದಿ ಅನುಷ್ಠಾನ ಹಾಗೂ ಸಹಕಾರಿ ಕೃಷಿ ಪದ್ಧತಿಯೇ ಪರಿಹಾರ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ಶಿಕ್ಷಣ ನಿರ್ದೇಶಕ ಡಾ. ವಿ.ಆರ್. ಕಿರೇಸೂರ, ಕೃಷಿ ಬಿಕ್ಕಟ್ಟಿಗೆ ತುಂಡು ಹಿಡುವಳಿಯಾಗಿದ್ದು, ಇದರಿಂದ ಕೃಷಿ ಉತ್ಪಾದನೆ ಕಡಿಮೆಯಾಗುತ್ತಿದೆ. ಕಾರ್ಮಿಕ ಕೊರತೆ, ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿರುವುದು, ನೀರಿನ ಸದ್ಬಳಕೆಯಾಗದಿರುವುದು, ಮಣ್ಣಿನ ಪರೀಕ್ಷೆ ಮಾಡದೆ ಬೆಳೆ ಬೆಳೆಯುತ್ತಿರುವುದು ಕೃಷಿ ಬಿಕ್ಕಟ್ಟಿಗೆ ನಿಖರ ಕಾರಣಗಳಾಗಿವೆ. ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ಕೃಷಿ ಬಿಕ್ಕಟ್ಟಿನಿಂದಲೇ ಸಂಭವಿಸುತ್ತಿದ್ದು ಅದು ಪರಿಹಾರವಲ್ಲ ಎಂದು ಹೇಳಿದರು.

ದತ್ತಿದಾನಿ ಸದಾನಂದ ಮುಂದಿನಮನಿ ಇದ್ದರು. ಮರೇವಾಡದ ಪ್ರಗತಿಪರ ರೈತ ಬಸಪ್ಪ ಸಲಕಿ ಅವರಿಗೆ ‘ಬಸವಕೃಷಿ ಪ್ರಶಸ್ತಿ’ ನೀಡಿ, ಸನ್ಮಾನಿಸಲಾಯಿತು. ಶಂಕರ ಕುಂಬಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ