ಹೊಸಪೇಟೆ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಹಾಗೂ ಶೋಷಿತರ ಧ್ವನಿ ಸಂಘಟನೆ ಹಾಗೂ ಹಿಂದೂಪರ ಸಂಘಟನೆಯಿಂದ ನಗರದ ವಾಲ್ಮೀಕಿ ವೃತ್ತದಲ್ಲಿ ಗುರುವಾರ ಜನಾಂದೋಲನ ಸಭೆ ನಡೆಯಿತು.
ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆ ಆಗಬೇಕಿದೆ. ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಎರಡು ತಿಂಗಳಲ್ಲಿ ಆರು ಸಾವಿರ ದಾಳಿಗಳು ನಡೆದಿವೆ. ಜಗತ್ತನ್ನು ಇಸ್ಲಾಮೀಕರಣ ಮಾಡಬೇಕು ಎಂದು ಹಿಂದುತ್ವದ ನಾಶ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿಯ ಸಂಸ್ಕೃತಿ, ನಾಗರಿಕತೆ, ಪರಂಪರೆ ನಾಶ ಮಾಡಿದೆ. ಭಾರತದ ಹಿಂದೂಗಳಿಗೆ ಇದು ಪಾಠವಾಗಿದೆ. ಭಾರತ ಸರ್ಕಾರವು ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲಿ, ಹಿಂದೂಗಳ ಸ್ವಾಭಿಮಾನ ರಕ್ಷಣೆಯಾಗಲಿ ಎಂದು ಆಗ್ರಹಿಸಿದರು.
ನಗರದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನಾ ಸಭೆ ನಂತರ ನೆಹರು ಕಾಲನಿ, ಎಂಪಿಎಂಸಿ ಮಾರುಕಟ್ಟೆ, ಸಾಯಿಬಾಬಾ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರಿಗೆ ಮನವಿಪತ್ರ ಸಲ್ಲಿಸಿದರು.ಸಂಡೂರು ತಾಲೂಕಿನ ಜೋಗದ ದೇವರಕೊಳ್ಳ ಶ್ರೀ ಅನ್ನಪೂರ್ಣೇಶ್ವರಿ ಮಠದ ದಿಗಂಬರ ಶ್ರೀ ರಾಜ ಭಾರತಿ ಸ್ವಾಮೀಜಿ, ದಲಿತ ಹಾಗೂ ಶೋಷಿತರ ಧ್ವನಿ ಸಂಘಟನೆ ಅಧ್ಯಕ್ಷ ಕಟ್ಟಗಿ ರಾಮಕೃಷ್ಣ, ಮುಖಂಡರಾದ ಭೂಪಾಲ್ ಪ್ರಹ್ಲಾದ್ ಶೆಟ್ಟಿ, ಎನ್.ಟಿ. ರಾಜಣ್ಣ, ಕಾಸಟ್ಟಿ ಉಮಾಪತಿ, ಭೋಜ, ಅಶೋಕ್ ಜೀರೆ, ನರಸಿಂಹ ಮೂರ್ತಿ ಮತ್ತಿತರರಿದ್ದರು.