ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರ ಸಂಸ್ಥೆಗಳ ಪ್ರಗತಿ ಪರಿಶೀಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಯಾವುದೇ ಸಹಕಾರ ಸಂಸ್ಥೆಗಳು ರಾಜಕೀಯ ಮುಕ್ತವಾಗಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಿ ಆಡಳಿತ ಮಂಡಳಿ ಆಯಾ ಸಂಸ್ಥೆಗಳನ್ನು ಆರ್ಥಿಕವಾಗಿ ಲಾಭದ ಹಾದಿಗೆ ಕೊಂಡೊಯ್ಯಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮತ್ತಿತರ ಸಹಕಾರ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ನೋಂದಾಯಿಸಿ ಅವುಗಳನ್ನು ಸರ್ಕಾರದ ನಿಯಮಾನುಸಾರ ಆರ್ಥಿಕ ಶಿಸ್ತು ಕಾಪಾಡಿಕೊಂಡು ರೈತರಿಗೆ ಉಪಯೋಗ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಟ್ಟಣ ಸಹಕಾರ ಬ್ಯಾಂಕ್‌ಗಳು ಹಣಕಾಸಿಗೆ ಸಂಬಂಧಪಟ್ಟ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. 2025ರ ಮಾರ್ಚ್ 31 ರ ಅಂತ್ಯಕ್ಕೆ ಬಾಕಿ ಇರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹಣ ವಸೂಲಿ ಮಾಡಲು ಸಂಸ್ಥೆಗಳ ಅಧಿಕಾರಿಗಳು, ಆಡಳಿತ ಮಂಡಳಿ ಕ್ರಮ ಕೈಗೊಂಡು ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಆರ್ಥಿಕವಾಗಿ ಹಿನ್ನಡೆ ಯಾಗಿರುವ ಸಹಕಾರಿ ಸಂಸ್ಥೆಗಳನ್ನು ಗಮನಿಸಿ ಅವುಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳ ಬೇಕು. ಮೇಲ್ವಿಚಾರಕರು, ಅಭಿವೃದ್ಧಿ ಅಧಿಕಾರಿಗಳು ಆಗಿಂದಾಗ್ಗೆ ಹೆಚ್ಚು ಹೆಚ್ಚು ಸಭೆಗಳನ್ನು ನಡೆಸಿ ಸಹಕಾರ ಸಂಸ್ಥೆಗಳಲ್ಲಿ ನಡೆಯುವ ಆರ್ಥಿಕ ವ್ಯವಹಾರಗಳನ್ನು ಗಮನಿಸಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ತಿಳಿಸಬೇಕು. ಯಶಸ್ವಿನಿ ಯೋಜನೆ ಶೇ. 100 ರಷ್ಟು ಗುರಿ ಸಾಧಿಸಬೇಕು ಎಂದ ಸಚಿವರು, ಪ್ರತೀ ವರ್ಷ ಎಲ್ಲ ಬ್ಯಾಂಕ್, ಸಂಘಗಳ ಲೆಕ್ಕಪರಿಶೋಧನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಹಣಕಾಸು ವಿಚಾರದಲ್ಲಿ ಡಿಸಿಸಿ ಬ್ಯಾಂಕ್‌ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ನೀಡುವ ರೈತರ ಉಪಯುಕ್ತ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಅರ್ಹ ಫಲಾನುಭವಿಗಳಿಗೆ ನೀಡಬೇಕು. ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಸಮರ್ಪಕವಾಗಿ ಜಾರಿ ಮಾಡಬೇಕು. ಅದೇ ರೀತಿ ಕಾನೂನು ಇತಿಮಿತಿ ಅರಿತು ವಸೂಲಿ ಕ್ರಮಗಳನ್ನು ಕೈಗೊಳ್ಳಬೇಕು. ಲೆಕ್ಕಪತ್ರಗಳ ಮಾಹಿತಿಗಳನ್ನು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸೈಬರ್ ಅಪರಾಧ ನಡೆಯದಂತೆ ಎಚ್ಚರ ವಹಿಸಿ ಕೆಲಸ ಮಾಡಬೇಕು ಎಂದರು. ಜಿಲ್ಲೆಯ ಹಿರಿಯ ಸಹಕಾರಿ ಬಿ.ಸಿ.ಲೋಕಪ್ಪಗೌಡ ಮಾತನಾಡಿ, ಸಹಕಾರ ಕೇಂದ್ರ ಬ್ಯಾಂಕ್ ಕೆಲಸ ಹಾಗೂ ಇರುವ ಸಮಸ್ಯೆ ಗಳನ್ನು ಸಚಿವರ ಮುಂದೆ ಹಂಚಿಕೊಂಡರು. ಅವುಗಳಲ್ಲಿ ನಬಾರ್ಡ್ ಯೋಜನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಶೇ. 58 ರಷ್ಟು ಮೊತ್ತ ಕಡಿಮೆಯಾಗಿ ಹಲವು ಗೊಂದಲಗಳು ತಲೆದೋರಿವೆ. ಅದರ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಡಿಸಿಸಿ ಬ್ಯಾಂಕ್ ಜಿಲ್ಲೆಯ ರೈತರ, ಗ್ರಾಹಕರ ವಿಶ್ವಾಸ, ನಂಬಿಕೆ ಗಳಿಸಿದೆ. ಬ್ಯಾಂಕ್‌ನ ಆಡಳಿತ ಮಂಡಳಿ ಮಾರ್ಗದರ್ಶನದಿಂದ ನಿರಂತರ ಲಾಭ ಗಳಿಸುತ್ತಾ ಪ್ರಸ್ತುತ ‘ಎ’ ಗ್ರೇಡ್‌ನಲ್ಲಿ ಗುರುತಿಸಿಕೊಂಡು ಪ್ರಸಕ್ತ ಸಾಲಿನಲ್ಲಿ ₹6.58 ಕೋಟಿ ಲಾಭ ಗಳಿಸಿದೆ ಎಂದು ತಿಳಿಸಿದರು.ಇದಕ್ಕೂ ಮುನ್ನ ಸಚಿವರನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಉಪಾಧ್ಯಕ್ಷ ಎಚ್.ಎಂ.ಸತೀಶ್ ಹಾಗೂ ನಿರ್ದೇಶಕರು ಗೌರವಿಸಿ ಅಭಿನಂದಿಸಿದರು.
ಸಭೆಯಲ್ಲಿ ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ, ನಿರ್ದೇಶಕರಾದ ರಾಮಸ್ವಾಮಿ, ಹಳಸೆ ಶಿವಣ್ಣ, ರಾಮಜ್ಜ, ಪರಮೇಶ್ವರಪ್ಪ, ಬಸವರಾಜಪ್ಪ ಮತ್ತಿತರ ನಿರ್ದೇಶಕರು, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಎಸ್.ರಮಣ್ಣ ರೆಡ್ಡಿ, ಮಹೇಶ್, ಸಹಕಾರ ಸಂಘಗಳ ಉಪ ನಿಬಂಧಕರಾದ ತೇಜಸ್ವಿನಿ, ಬ್ಯಾಂಕ್ ವ್ಯವಸ್ಥಾಪಕ ತಿಮ್ಮಯ್ಯ ಹಾಗೂ ಹಿರಿಯ ಅಧಿಕಾರಿಗಳು, ವಿವಿಧ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು. 21 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಸಹಕಾರ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಾಜಣ್ಣ ಅವರು ಮಾತನಾಡಿದರು. ಶಾಸಕರಾದ ಟಿ.ಡಿ. ರಾಜೇಗೌಡ, ಎಚ್.ಡಿ. ತಮ್ಮಯ್ಯ ಇದ್ದರು.