ದ.ಕ. ಸಹಕಾರಿ ಹಾಲು ಉತ್ಪದಕರ ಒಕ್ಕೂಟಕ್ಕೆ 26ರಂದು ಚುನಾವಣೆ: 16 ಸ್ಥಾನಕ್ಕೆ 41 ಮಂದಿ ಕಣದಲ್ಲಿ

KannadaprabhaNewsNetwork |  
Published : Apr 22, 2025, 01:51 AM IST
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಲೋಗೋ | Kannada Prabha

ಸಾರಾಂಶ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಈ ಬಾರಿ ಚುನಾವಣೆ ನಡೆಯುವುದು ಖಚಿತವಾಗಿದೆ. ಏ.26ರಂದು ಚುನಾವಣೆ ನಡೆಯಲಿದ್ದು, ಒಟ್ಟು 16 ನಿರ್ದೇಶಕ ಸ್ಥಾನಕ್ಕೆ 41 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಈ ಬಾರಿ ಚುನಾವಣೆ ನಡೆಯುವುದು ಖಚಿತವಾಗಿದೆ. ಏ.26ರಂದು ಚುನಾವಣೆ ನಡೆಯಲಿದ್ದು, ಒಟ್ಟು 16 ನಿರ್ದೇಶಕ ಸ್ಥಾನಕ್ಕೆ 41 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಒಟ್ಟು 16 ನಿರ್ದೇಶಕ ಸ್ಥಾನಗಳನ್ನು ದ.ಕ. ಮತ್ತು ಉಡುಪಿ ಎರಡೂ ಜಿಲ್ಲೆಗಳಲ್ಲಿ ತಲಾ 8 ಸ್ಥಾನಗಳಂತೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ತಲಾ ಒಂದು ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಅವಿಭಜಿತ ದ.ಕ. ಜಿಲ್ಲೆಗಳಿಂದ ಒಟ್ಟು 60 ನಾಮಪತ್ರ ಸಿಂಧುವಾಗಿತ್ತು, ಬೋಳ ಸದಾಶಿವ ಶೆಟ್ಟಿ ಎಂಬವರ ನಾಮಪತ್ರ ತಿರಸ್ಕೃತವಾಗಿತ್ತು. ಏ.20ರಂದು ನಾಮಪತ್ರ ವಾಪಸ್‌ಗೆ ಕೊನೆ ದಿನವಾಗಿತ್ತು ಎಂದು ರಿಟರ್ನಿಂಗ್‌ ಆಫೀಸರ್‌ ಆಗಿರುವ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್‌ ತಿಳಿಸಿದ್ದಾರೆ. ಮತದಾನ ದಿನವೇ ಫಲಿತಾಂಶ

ಏ.26ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ. ಹಾಲು ಒಕ್ಕೂಟದ ಒಟ್ಟು 750 ಸಂಘಗಳ ಪೈಕಿ 710 ಸಂಘಗಳು ಮತದಾನದ ಅರ್ಹತೆ ಪಡೆದುಕೊಂಡಿವೆ. ಒಂದು ಹಾಲು ಸೊಸೈಟಿಯಿಂದ ಒಬ್ಬರಿಗೆ ಮಾತ್ರ ಮತದಾನಕ್ಕೆ ಅವಕಾಶ ಇದೆ. ಸೊಸೈಟಿಯ ಆಡಳಿತ ಮಂಡಳಿ ಸೂಚಿಸಿದ ವ್ಯಕ್ತಿ ಮತದಾನ ಮಾಡುವ ಅಧಿಕಾರ ಹೊಂದಿರುತ್ತಾರೆ. ಮತದಾನ ಮುಕ್ತಾಯ ಬಳಿಕ ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಮತದಾನ ಕುಲಶೇಖರದ ಹಾಲು ಒಕ್ಕೂಟದಲ್ಲೇ ಒಂದೇ ಕಡೆ ನಡೆಯಲಿದೆ.

13 ಮಂದಿ ಹಾಲಿಗಳು ಕಣದಲ್ಲಿ

ಈ ಬಾರಿ ಒಟ್ಟು 16 ಮಂದಿ ನಿರ್ದೇಶಕರ ಪೈಕಿ 13 ಮಂದಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಲ್ಲಿ ಹಾಲಿ ಅಧ್ಯಕ್ಷ ಸುಚರಿತ ಶೆಟ್ಟಿ 4ನೇ ಬಾರಿ, ಮಾಜಿ ಅಧ್ಯಕ್ಷರಾದ ರವಿರಾಜ ಹೆಗ್ಡೆ ಹಾಗೂ ಕಾಪು ದಿವಾಕರ ಶೆಟ್ಟಿ 5ನೇ ಬಾರಿ, ಪ್ರಕಾಶ್ಚಂದ್ರ ಶೆಟ್ಟಿ, ಮಂಜಯ್ಯ ಶೆಟ್ಟಿ, ಎಸ್‌.ಬಿ.ಜಯರಾಮ ರೈ 3ನೇ ಬಾರಿ, ಸುಭದ್ರಾ ರಾವ್‌ 2ನೇ ಬಾರಿ ಕಣಕ್ಕೆ ಇಳಿದಿರುವ ಪ್ರಮುಖರು. ಹಾಲಿ ನಿರ್ದೇಶಕರಾಗಿರುವ ನಾರಾಯಣ ಪ್ರಕಾಶ್‌, ಪದ್ಮನಾಭ ಶೆಟ್ಟಿ ಅರ್ಕಜೆ ಹಾಗೂ ನರಸಿಂಹ ಕಾಮತ್‌ ಸ್ಪರ್ಧಿಸುತ್ತಿಲ್ಲ.

ಉಡುಪಿಯಿಂದ ಕಮಲಾಕ್ಷ ಹೆಬ್ಬಾರ್‌, ಉದಯ ಕೋಟ್ಯಾನ್‌, ದ.ಕ.ದಿಂದ ಕೆ.ಚಂದ್ರಶೇಖರ ರಾವ್‌ ಮಾಡ್ನೂರು, ಬಿ. ಸುಧಾಕರ ರೈ ಬೋಳಂತೂರು, ಬಾಳುಗೋಡಿನ ಶರ್ಮಿಳಾ, ಕೊಣಾಲು ಆರ್ಲದ ಉಷಾ ಅಂಚನ್‌, ಬಡಗಬೆಳ್ಳೂರಿನ ಸವಿತಾ ಎನ್‌.ಶೆಟ್ಟಿ ಮತ್ತಿತರ ಹೊಸ ಮುಖಗಳು ಕಣದಲ್ಲಿದ್ದಾರೆ. ಅವಿರೋಧ ಆಯ್ಕೆಗೆ ವಿಫಲ ಪ್ರಯತ್ನ

2009ರ ವರೆಗೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿದಿತ್ತು. 2009 ಹಾಗೂ 2014ರಲ್ಲಿ ಹಾಲು ಒಕ್ಕೂಟ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದು ಸಹಕಾರ ಭಾರತಿ ಅಭ್ಯರ್ಥಿಗಳು ತಲಾ ಐದು ವರ್ಷಗಳ ಆಡಳಿತ ನಡೆಸಿದ್ದರು. ಈ ಬಾರಿಯೂ ಅವಿರೋಧ ಆಯ್ಕೆಗೆ ಭಾರಿ ಕಸರತ್ತು ನಡೆಸಿದರೂ ಸಾಧ್ಯವಾಗಿಲ್ಲ.

ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ಕಾಂಗ್ರೆಸ್‌ ನಡುವೆ ನಿರ್ದೇಶಕರ ಆಯ್ಕೆಗೆ ಸಂಬಂಧಿಸಿ ಮಾತುಕತೆಗಳು ನಡೆದಿವೆ. ಕೊನೆಕ್ಷಣದ ವರೆಗೂ ನಾಮಪತ್ರ ವಾಪಸ್‌ಗೆ ಕಸರತ್ತು ನಡೆದರೂ ಪ್ರಯೋಜನವಾಗಿಲ್ಲ. ಈ ನಡುವೆ ಇಬ್ಬರು ಮಾಜಿ ಅಧ್ಯಕ್ಷರು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, ಸಹಕಾರ ಭಾರತಿ ಸಂಘಟನೆಯ ಬೆಂಬಲ ಯಾಚಿಸಿದ್ದಾರೆ. ಎರಡು ಬಾರಿ ಸ್ಪರ್ಧಿಸಿದವರಿಗೆ ಈ ಬಾರಿ ಅವಕಾಶ ಇಲ್ಲ ಎಂಬ ಮಾನದಂಡ ಮುಂದಿರಿಸಿದ ಸಹಕಾರ ಭಾರತಿ ಸಂಘಟನೆ ಮೂರನೇ ಬಾರಿ ಸ್ಪರ್ಧಿಸಲು ಕೆಲವರಿಗೆ ಟಿಕೆಟ್‌ ನೀಡಿ ತಾರತಮ್ಯ ಎಸಗಿದೆ ಎಂಬ ಆಕ್ಷೇಪದ ಮಾತುಗಳೂ ಕೇಳಿಬಂದಿವೆ.

-------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ