ಕನ್ನಡಪ್ರಭ ವಾರ್ತೆ ಮಾಲೂರು
ರೈತರ ಒಡನಾಡಿಯಾಗಿರುವ ಪಿಎಲ್‌ಡಿ ಬ್ಯಾಂಕ್ ರೈತರಿಗೆ ಆರ್ಥಿಕ ಸಹಕಾರ ನೀಡುತ್ತಾ ಶೇ. ೮೨ ರಷ್ಟು ಸಾಲ ಮರು ವಸೂಲಾತಿ ಮಾಡುವ ಮೂಲಕ ಎರಡು ಜಿಲ್ಲೆಗಳಲ್ಲಿ ಮೊದಲನೆಯ ಸ್ಥಾನದಲ್ಲಿದೆ ಎಂದು ಶಾಸಕ ಹಾಗೂ ಕೋಲಾರ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಕೆ ವೈ ನಂಜೇಗೌಡ ಹೇಳಿದರು.ನಗರದ ಮಾರುತಿ ಬಡಾವಣೆಯ ತಿರುಮಲ ಕಲ್ಯಾಣ ಮಂಟಪದಲ್ಲಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮನೆ ಜಪ್ತಿ ಮಾಡುವಂತಿಲ್ಲತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ೧೯೬೫ ಮಂದಿ ಸಾಲಗಾರರು ೨,೦೦,೩೬೦ ಮಂದಿ ಶೇರುದಾರರು ಹೊಂದಿರುವ ಜವಾಬ್ದಾರಿ ಸಂಸ್ಥೆಯಾಗಿದೆ, ಸಹಕಾರ ಸಂಸ್ಥೆಗಳು ರೈತರ ಪರ ಸಂಸ್ಥೆಗಳು ಈ ಹಿಂದೆ ಸಾಲ ಪಡೆದವರು ವಾಪಸ್ ಮಾಡದಿದ್ದರೆ, ಮನೆ ಜಪ್ತಿ ಮಾಡುತ್ತಿದ್ದರು, ಆದರೆ ಸರ್ಕಾರ ಈ ನಿಯಮವನ್ನು ಬದಲಾಯಿಸಿ ಜಪ್ತಿ ಮಾಡಬಾರದು ಎಂದು ತೀರ್ಮಾನಿಸಿದೆ ಎಂದರು.
ಸಾಲ ಪಡೆದವರು ಸದುದ್ದೇಶಕ್ಕೆ ಬಳಸಿಕೊಂಡಲ್ಲಿ ಮಾತ್ರ ಸಾಲ ವಾಪಸ್ ಮರುಪಾವತಿಸುತ್ತಾರೆ. ಸಾಲ ನೀಡಿ ವಸೂಲಿ ಮಾಡುವಾಗ ಇಲ್ಲಿನ ಆಡಳಿತ ಮಂಡಳಿ ರಾಜಕೀಯ ಮಾಡದೆ ಪಕ್ಷಾತೀತವಾಗಿ ನಡೆದು ಕೊಂಡ ಹಿನ್ನೆಲೆಯಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದರು.ಸಾಲಕ್ಕೆ ಒಂದು ಕೋಟಿ ಮಂಜೂರು
ರೈತರಿಗೆ ಹೆಚ್ಚಿನ ಸಾಲದ ಅಗತ್ಯವಿದೆ ಎಂದು ಅಧ್ಯಕ್ಷ ಬಿ.ಆರ್.ಶ್ರೀನಿವಾಸ್ ಅವರು ಮನವಿ ಮಾಡಿದ್ದು ಅದರಂತೆ ಸಹಕಾರಿ ವ್ಯವಸ್ಥಾಪಕರ ಬಳಿ ಚರ್ಚಿಸಿ ನಾನು ಮನವಿ ಮಾಡಿರುವ ಹಿನ್ನೆಲೆಯಲ್ಲಿ ೧ ಕೋಟಿಗೂ ಹೆಚ್ಚು ಸಾಲ ಮಂಜೂರು ಆಗಲಿದೆ ಇದರಿಂದ ರೈತರಿಗೆ ಮತ್ತಷ್ಟು ಹೆಚ್ಚಿನ ಸಾಲ ನೀಡಲು ಅನುಕೂಲವಾಗುತ್ತದೆ ಎಂದರು.ಎರಡೂ ಜಿಲ್ಲೆಗಳಲ್ಲಿ ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಸಾಲವನ್ನು ನೀಡಿ ಮರು ವಸೂಲಾತಿ ಮಾಡುವಲ್ಲಿ ಮೊದಲನೇ ಸ್ಥಾನದಲ್ಲಿದೆ ಸರ್ಕಾರ ನಮ್ಮದೇ ಇರುವುದರಿಂದ ಸರ್ಕಾರ ಹಾಗೂ ಸಹಕಾರ ಕೊಡಿಸಲು ಸಿದ್ಧನಿದ್ದೇನೆ ಅಧ್ಯಕ್ಷರು ಬ್ಯಾಂಕಿನ ಕಟ್ಟಡ ನಿರ್ಮಾಣಕ್ಕೆ ನಿವೇಶನಕ್ಕೆ ಮನವಿ ಮಾಡಿದ್ದು, ನಿವೇಶನವನ್ನು ಸಹ ಮಂಜೂರು ಮಾಡಿಸಲಾಗುವುದು ಅವಕಾಶಸಿಕ್ಕಾಗ ನಾವು ಏನಾದರೂ ಮಾಡಿದರೆ, ಅದು ಶಾಶ್ವತವಾಗಿ ಉಳಿಯುತ್ತದೆ ಎಂದರು.ರೈತರ ಬೆನ್ನೆಲುಬು ಡೇರಿ
ಹಾಲು ಉತ್ಪಾದಕ ಸಹಕಾರ ಸಂಘಗಳು ಹಾಗೂ ಸಹಕಾರ ಸಂಘಗಳು ರೈತರ ಬೆನ್ನೆಲುಬು ಆರ್ಥಿಕ ಶಕ್ತಿಯಾಗಿದೆ, ಸಹಕಾರ ಸಂಸ್ಥೆಗಳಲ್ಲಿ ಪಕ್ಷಾತೀತವಾಗಿ ಸಾಲ ವಿತರಣೆ ಆಗಬೇಕು, ಇಲ್ಲಿನ ಆಡಳಿತ ಮಂಡಳಿಯವರು ಒಗ್ಗಟ್ಟಾಗಿ ರೈತರ ಪರವಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಬಿ ಆರ್ ಶ್ರೀನಿವಾಸ್, ಮಾತನಾಡಿ, ೮೦ ವರ್ಷಗಳಿಂದ ತಾಲೂಕಿನ ರೈತರಿಗೆ ಕೃಷಿ ಮತ್ತು ಕೃಷಿ ಪೂರಕ ಯೋಜನೆಗಳಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಪ್ರಸ್ತುತ ಬ್ಯಾಂಕ್ ೮೯೬.೩೬ ಲಕ್ಷ ನಷ್ಟದಲ್ಲಿದ್ದು ೨೦೨೪-೨೫ನೇ ಸಾಲಿನಲ್ಲಿ ೯೮.೪೭ ಲಕ್ಷ ನಷ್ಟವಾಗಿದೆ.
ಶೇ.೮೨ರಷ್ಟು ಸಾಲ ವಸೂಲಾತಿಮುಂಬರುವ ದಿನಗಳಲ್ಲಿ ಕಠಿಣ ಕ್ರಮಗಳ ಮೂಲಕ ಹೆಚ್ಚು ಸಾಲ ವಸೂಲಾತಿ ಗುರಿ ಹೊಂದಿದ್ದು ಹಾಲಿ ನಷ್ಟವನ್ನು ತುಂಬಿಕೊಳ್ಳಲು ಯೋಜನೆ ರೂಪಿಸಿಕೊಳ್ಳಲಾಗಿದೆ, ಬ್ಯಾಂಕಿನ ಎಲ್ಲಾ ನಿರ್ದೇಶಕರು ಹಾಗೂ ವ್ಯವಸ್ಥಾಪಕರು ಸಿಬ್ಬಂದಿಯ ಪರಿಶ್ರಮದಿಂದ ಶೇ.೮೨ರಷ್ಟು ಸಾಲ ಮರು ವಸೂಲಾತಿ ಮಾಡುವ ಮೂಲಕ ಎರಡು ಜಿಲ್ಲೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.ದರಕಾಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶಪ್ಪ, ನಿರ್ದೇಶಕರಾದ ಎಸ್ ಕೃಷ್ಣಾರೆಡ್ಡಿ, ಕೆ.ಆರ್.ನಾರಾಯಣಸ್ವಾಮಿ, ಎಸ್.ವಿ.ದಯಾನಂದಗೌಡ, ತೇಜಸ್‌ಗೌಡ, ಎನ್ ಅಂಬರೀಶ್, ರವಿಕುಮಾರ್, ಎಂ.ಲಕ್ಷ್ಮೀನಾರಾಯಣ್, ಎಸ್.ಸಿ.ನಾರಾಯಣಸ್ವಾಮಿ, ಎ.ಎನ್.ಮುನಿರಾಜು, ಇಂದಿರಾ, ಎಂಜಿ ಮಂಜುಳಾ, ಮುನಿಗಂಗಪ್ಪ ಇನ್ನಿತರರು ಹಾಜರಿದ್ದರು.