ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಸಂಘಗಳ ಕೊಡುಗೆ ಅಪಾರ: ಜಿ.ನಂಜನಗೌಡ

KannadaprabhaNewsNetwork | Published : Jan 13, 2025 12:47 AM

ಸಾರಾಂಶ

ಸಿಂಧನೂರಿನಲ್ಲಿ ನಡೆದ ರಜತ ಮಹೋತ್ಸವ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ರಾಜ್ಯ ಅಧ್ಯಕ್ಷ ಜಿ.ನಂಜನಗೌಡ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರುರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ರಾಜ್ಯ ಅಧ್ಯಕ್ಷ ಜಿ.ನಂಜನಗೌಡ ಅಭಿಪ್ರಾಯಪಟ್ಟರು.ನಗರದ ಸತ್ಯಗಾರ್ಡನ್ನಲ್ಲಿ ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಸಹಯೋಗದಲ್ಲಿ ಭಾನುವಾರ ನಡೆದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 6800 ಸೌಹಾರ್ದ ಸಹಕಾರಿ ಸಂಸ್ಥೆಗಳಿದ್ದು, ರೂ.50 ಸಾವಿರ ಕೋಟಿ ಬಂಡವಾಳವಿದೆ. 1 ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. 413 ಸಂಸ್ಥೆಗಳಿರುವ ರಾಯಚೂರು ಜಿಲ್ಲೆ ಕಲಬುರಗಿ ವಿಭಾಗದ ಅರ್ಧದಷ್ಟು ಸೌಹಾರ್ದ ಸಹಕಾರಿ ಸಂಸ್ಥೆಗಳನ್ನು ಹೊಂದುವ ಜೊತೆಗೆ ವಂತಿಗೆ ಮತ್ತು ಶಿಕ್ಷಣ ನಿಧಿ ಪಾವತಿಸುವಲ್ಲಿ ಮುಂಚೂಣಿಯಲ್ಲಿದೆ. ಸರ್ಕಾರ ಸೌಹಾರ್ದ ಸಂಸ್ಥೆಗಳು ಸ್ವತಂತ್ರವಾಗಿ ಆಡಳಿತ ನಡೆಸಲು ಅವಕಾಶ ಕಲ್ಪಿಸಬೇಕು ಎಂದರು.ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ,ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿದರು. ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ದೊಡ್ಡಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಸಹಕಾರಿ ನಿರ್ದೇಶಕರಾದ ಎ.ಆರ್.ಪ್ರಸನ್ನಕುಮಾರ, ಬಿ.ಎಚ್.ಕೃಷ್ಣಾರೆಡ್ಡಿ, ಆರ್.ತಿಮ್ಮಯ್ಯ ಶೆಟ್ಟಿ, ಜಿ.ಶ್ರೀಧರ್, ಎಚ್.ಜಿ.ಹನುಮಂತಯ್ಯ ಶೆಟ್ಟಿ, ಶೈಲಜಾ ತಪಲಿ ಸೇರಿ ಅನೇಕರು ಇದ್ದರು.

ಸಿಂಧನೂರಿನಲ್ಲಿ ಅದ್ದೂರಿ ಸಹಕಾರ ಜಾಥಾ

ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಅದ್ಧೂರಿಯಾಗಿ ಸಹಕಾರ ಜಾಥಾ ನಡೆಯಿತು.ನಗರಸಭೆ ಆವರಣದಲ್ಲಿ ಸಹಕಾರ ಜಾಥಾಕ್ಕೆ ರಾಜ್ಯ ಘಟಕದ ಅಧ್ಯಕ್ಷ ಜಿ.ನಂಜನಗೌಡ ಚಾಲನೆ ನೀಡಿದರು. ಸಹಕಾರಿ ಸಂಘಗಳ ಪಿತಾಮಹ ಸಿದ್ದನಗೌಡ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರ, 25 ಕುಂಭ-ಕಳಸ, ವೀರಗಾಸೆ, ಪುರುಷರ ಮತ್ತು ಬಾಲಕಿಯರ ಡೊಳ್ಳುಕುಣಿತ, ಸುಳೇಕಲ್ ತಾಷಾ ವಾದ್ಯ, ಜುರ್ಬುರ್ ವಾದ್ಯಗಳೊಂದಿಗೆ ಆರಂಭಗೊಂಡ ಮೆರವಣಿಗೆಯು ಕಿತ್ತೂರುರಾಣಿ ಚೆನ್ನಮ್ಮ ವೃತ್ತ, ಕನಕದಾಸ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ ಮೂಲಕ ಗಾಂಧಿ ವೃತ್ತಕ್ಕೆ ಆಗಮಿತು. ಅಲ್ಲಿ ಬಾಲಕಿಯರ ತಂಡ ಡೊಳ್ಳು ಕುಣಿತ ಪ್ರದರ್ಶಿಸುವ ಮೂಲಕ ನೋಡುಗರನ್ನು ಆಕರ್ಷಿಸಿತು. ತದನಂತರ ಗಂಗಾವತಿ ರಸ್ತೆ ಮಾರ್ಗದ ಮೂಲಕ ಸತ್ಯಗಾರ್ಡನ್‌ಗೆ ತಲುಪಿತು.ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ದೊಡ್ಡಬಸವರಾಜ ಸೇರಿದಂತೆ ನಿರ್ದೇಶಕರು ಉಪಸ್ಥಿತರಿದ್ದರು.

Share this article