ಸಹಕಾರ ಸಂಸ್ಥೆಗಳಿಗೆ ಆತ್ಮವಿಶ್ವಾಸ, ಸದಸ್ಯರ ವಿಶ್ವಾಸ ಅಗತ್ಯ

KannadaprabhaNewsNetwork | Published : May 11, 2025 1:20 AM
Follow Us

ಸಾರಾಂಶ

ಆಡಳಿತ ಮಂಡಳಿಯ ಆರ್ಥಿಕ ಶಿಸ್ತು, ಬದ್ಧತೆ, ಆತ್ಮವಿಶ್ವಾಸದಿಂದ ಸಹಕಾರ ಸಂಸ್ಥೆಯನ್ನು ಸದೃಢವಾಗಿ ಬೆಳೆಸಲು ಸಾಧ್ಯವಿದೆ.

ಕನ್ನಡಪ್ರಭ ವಾರ್ತೆ ತುಮಕೂರುಆಡಳಿತ ಮಂಡಳಿಯ ಆರ್ಥಿಕ ಶಿಸ್ತು, ಬದ್ಧತೆ, ಆತ್ಮವಿಶ್ವಾಸದಿಂದ ಸಹಕಾರ ಸಂಸ್ಥೆಯನ್ನು ಸದೃಢವಾಗಿ ಬೆಳೆಸಲು ಸಾಧ್ಯವಿದೆ. ಠೇವಣಿದಾರರು ಸಂಸ್ಥೆಯಲ್ಲಿ ಹೂಡಿರುವ ಹಣವನ್ನು ಲಾಭದಾಯಕವಾಗಿ ಬೆಳೆಸುವ ನಂಬಿಕೆ, ವಿಶ್ವಾಸ ಗಳಿಸಿಕೊಳ್ಳಬೇಕು ಎಂದು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದರು. ನಗರದಲ್ಲಿ ಶನಿವಾರ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ 13 ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ವಾರ್ಷಿಕ ಸಭೆಗಳು ಆ ಸಹಕಾರ ಸಂಸ್ಥೆಯ ಹಿಂದಿನ, ಈ ಸಾಲಿನ ಹಾಗೂ ಮುಂದಿನ ವರ್ಷದ ಸಾಧನೆ ನೋಟ, ಆಡಳಿತ ಮಂಡಳಿಯ ಆತ್ಮಾವಲೋಕನಾ ಸಭೆ. ಸದಸ್ಯರ, ಗ್ರಾಹಕರ, ಠೇವಣಿದಾರರ ನಂಬಿಕೆ, ವಿಶ್ವಾಸ ಮೂಡಿಸುವ ಸಾಧನೆ ಆಗಬೇಕು ಎಂದು ಹೇಳಿದರು.ದುಡ್ಡಿನ ಜೊತೆಗಿನ ಸಂಬಂಧ, ವ್ಯವಹಾರ ಸೂಕ್ಷ್ಮವಾದದ್ದು, ಹಣಕಾಸು ಸಂಸ್ಥೆಯನ್ನು ಬಹಳ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ಹೆಗಲ ಮೇಲೆ ಹೊತ್ತುನಿರ್ವಹಿಸಬೇಕಾಗುತ್ತದೆ. ಈ ಸಂಸ್ಥೆ ಅಂತಹ ಜವಾಬ್ದಾಯೊಂದಿಗೆ ಪ್ರಗತಿ ಸಾಧಿಸುತ್ತಿದೆ. ಸಂಸ್ಥೆ ಕಟ್ಟುವಲ್ಲಿ ಎಡವಿದರೆ ಎಲ್ಲರಿಗೂ ನಷ್ಟ, ಹಾನಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಯಾವುದೇ ಅಭಿವೃದ್ಧಿಗೆ ಅದೃಷ್ಟವನ್ನೇ ನಂಬಿ ಕೂರಬಾರದು. ಪ್ರಯತ್ನ ಬಿಡಬಾರದು. ಅದೃಷ್ಟಕ್ಕೆ ಕೈ ಕೊಡುವ ಚಾಳಿಯಿದೆ. ಪ್ರಯತ್ನ ಕೈ ಕೊಡುವುದಿಲ್ಲ. ಪ್ರಯತ್ನ, ಶ್ರಮ, ಆತ್ಮವಿಶ್ವಾಸವಿದ್ದರೆ ಯಾವುದೂ ಕಷ್ಟವಲ್ಲ. ಹಿರೇಮಠವು ತಮ್ಮ ಪ್ರಯತ್ನ ಹಾಗೂ ಭಕ್ತರ ಸಹಕಾರದಿಂದಲೇ ಬೆಳೆದಿದೆ. ಹಿರೇಮಠ ಸನ್ಯಾಸದ ಜೊತೆ ಮೌಲ್ಯವನ್ನು ಉಳಿಸಿಕೊಂಡು ಬೆಳೆದಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಎನ್.ಶಶಿಧರ್ ಮಾತನಾಡಿ, ಸೊಸೈಟಿ ಈ ಸಾಲಿನಲ್ಲಿ 90 ಲಕ್ಷ ರು.ನಿವ್ವಳ ಲಾಭ ಗಳಿಸಿದೆ. ಸುಮಾರು 50 ಕೋಟಿ ರು.ಗಳ ಠೇವಣಿ ಸಂಗ್ರಹಿಸಿದೆ. ನಮ್ಮ ಸಹಕಾರಿಯಲ್ಲಿ ಹಲವಾರು ಠೇವಣಿ ಯೋಜನೆಗಳು ಜಾರಿಯಿದ್ದು, ಹಿರಿಯ ನಾಗರೀಕರಿಗೆ, ಮಾಜಿ ಸೈನಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ವಿಧವೆಯರಿಗೆ, ವಿಕಲಚೇತನರಿಗೆ ಒಂದು ವರ್ಷ ಮೇಲ್ಪಟ್ಟ ಠೇವಣಾತಿಗಳಿಗೆ ಶೇ.0.5ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ ಎಂದರು.ಸಂಸ್ಥೆ ಉಪಾಧ್ಯಕ್ಷಎಂ.ಎನ್.ಚಿದಾನಂದ, ನಿರ್ದೇಶಕ ಕೆ.ಎನ್.ರಾಮಚಂದ್ರಬಾಬು, ಎಂ.ಎಸ್.ಕಲ್ಲೇಶ್, ರವಿಶಂಕರ್, ಎಸ್.ಬಿ.ಶಿವಬಸಪ್ಪ, ಕೆ.ಎಸ್.ಗಿರೀಶ್, ಜೆ.ಟಿ.ಜಗದೀಶ್, ಕೆ.ಎಸ್.ವಿಕಾಸ್, ಪದ್ಮಾ ಪಾಲನೇತ್ರ, ಜಿ.ಮಾನಸ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಶಿಲ್ಪ, ವಿವಿಧ ಶಾಖೆಗಳ ವ್ಯವಸ್ಥಾಪಕರಾದ ಕೆ.ಜೆ.ಹರ್ಷಿತ, ಮನೋಜ್‌ಕುಮಾರ್ ಹಾಗೂಸದಸ್ಯರು, ಸಿಬ್ಬಂದಿ ಹಾಜರಿದ್ದರು.