ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಎಂ.ಜಿ.ರಸ್ತೆಯಲ್ಲಿರುವ ಕಸಬಾ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಮತ್ತು ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘವು 75 ವರ್ಷಗಳಿಂದ ಸತತವಾಗಿ ರೈತರಿಗೆ ಸೇವೆ ಒದಗಿಸಿದೆ, ಬಹಳಷ್ಟು ರೈತರು ಈ ಸಂಘದಲ್ಲಿ ಸೇವೆ ಸಲ್ಲಿಸಿದ್ದಾರೆ, ನೂತನ ಕಟ್ಟಡ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿ 18 ಮಳಿಗೆಗಳನ್ನು ಬಾಡಿಗೆಗೆ ನೀಡಿ ಲಾಭ ಬರುವಂತೆ ನರಸಿಂಹಮೂರ್ತಿ ಸಹಕರಿಸಿದ್ದಾರೆ, ಮುಂದಿನ ದಿನಗಳಲ್ಲಿಯೂ ಸಂಘದ ಬೆಳವಣಿಗೆಗೆ ನನ್ನ ಸಹಕಾರವಿರುತ್ತದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.ತಾಲೂಕಿನ ರೈತರಿಗೆ ಕೃಷಿ ಸಂಘಗಳಲ್ಲಿ ದೊರೆಯುವ ಸಾಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ಕೆಲಸವನ್ನು ಪಾರದರ್ಶಕವಾಗಿ ಬ್ಯಾಂಕ್ ಹಾಗೂ ಸಂಘಗಳ ಪದಾಧಿಕಾರಿಗಳು, ಅಧಿಕಾರಿಗಳು ಶ್ರಮಿಸಿ ರೈತರ ಪಾಲಿಗೆ ನೆರವಾಗಬೇಕೆಂದು ತಿಳಿಸಿದರು.
ಕಸಬಾ ಸೊಸೈಟಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸಂಘವು 1948 - 49 ರಲ್ಲಿ ತಾಲೂಕಿನ ಪ್ರಥಮ ಶಾಸಕರಾದ ಎನ್.ಸಿ.ನಾಗಯ್ಯರೆಡ್ಡಿರವರ ಮಾರ್ಗದರ್ಶನದಲ್ಲಿ ಪ್ರಾರಂಭವಾಗಿತ್ತು, ಅಂದು ಹನುಮಂತರೆಡ್ಡಿ ಅಧ್ಯಕ್ಷರಾಗಿದ್ದರು, ಅವರ ಮಾರ್ಗದರ್ಶನದಲ್ಲಿ ಹಳೇ ಕಟ್ಟಡ ಉದ್ಘಾಟನೆಯಾಗಿ ಪ್ರಾರಂಭವಾಗಿದೆ, ಬಿ.ಎಚ್.ರಸ್ತೆಯಲ್ಲಿ ಒಂದು ಸ್ಥಳ ಕೊಂಡುಕೊಂಡು ಅಲ್ಲೂ ವಾಣಿಜ್ಯ ಮಳಿಗೆ ಪ್ರಾರಂಭವಾಗಿದೆ, ಕಾದಲವೇಣಿಯಲ್ಲೂ ಮಳಿಗೆ ಪ್ರಾರಂಭವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮ್ ರೆಡ್ಡಿ ಮಾತನಾಡಿ, ಇನ್ನು ಸಮಿತಿ ರಚನೆಯಾಗಿಲ್ಲ, ನಾವು ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ, ಸಮಿತಿ ರಚನೆಯಾದ ನಂತರ ಸಾಲ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಹೇಳಿದರು.