ಸಹಕಾರ ಸಂಘಕ್ಕೆ ಸದಸ್ಯರ ಬೆಂಬಲ ಅಗತ್ಯ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Aug 27, 2026, 02:00 AM IST
26ಕೆಎಂಎನ್ ಡಿ18 | Kannada Prabha

ಸಾರಾಂಶ

ಸಹಕಾರ ಸಂಘದ ಸದಸ್ಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವ ಜೊತೆಗೆ ಉಳಿತಾಯದ ಮನೋಭಾವ ಬೆಳೆಸುವುದು, ಸಾಲ ಸೌಲಭ್ಯ ಕೊಟ್ಟು ಸದಸ್ಯರ ಕೃಷಿ ಚಟುವಟಿಕೆ, ಸಣ್ಣ ಪುಟ್ಟ ವ್ಯಾಪಾರ ವಹಿವಾಟುಗಳಿಗೆ ಬೆಂಬಲ ನೀಡುವುದು ಸಂಘಗಳ ಪ್ರಮುಖ ಉದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸ್ಥಳೀಯ ಜನರ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡುವ ಜೊತೆಗೆ ಸಹಕಾರ ತತ್ವವನ್ನು ಬಲಪಡಿಸುವಲ್ಲಿ ಸೌಹಾರ್ದ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಉಪ್ಪಾರಹಳ್ಳಿ ಗೇಟ್‌ನಲ್ಲಿ ನೂತನವಾಗಿ ಸ್ಥಾಪಿತವಾಗಿರುವ ನಾಗಮಂಗಲ ತಾಲೂಕು ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರವು ಗ್ರಾಮೀಣ ಪ್ರದೇಶದ ಜನರ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿವೆ ಎಂದರು.

ಸಹಕಾರ ಸಂಘದ ಸದಸ್ಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವ ಜೊತೆಗೆ ಉಳಿತಾಯದ ಮನೋಭಾವ ಬೆಳೆಸುವುದು, ಸಾಲ ಸೌಲಭ್ಯ ಕೊಟ್ಟು ಸದಸ್ಯರ ಕೃಷಿ ಚಟುವಟಿಕೆ, ಸಣ್ಣ ಪುಟ್ಟ ವ್ಯಾಪಾರ ವಹಿವಾಟುಗಳಿಗೆ ಬೆಂಬಲ ನೀಡುವುದು ಸಂಘಗಳ ಪ್ರಮುಖ ಉದ್ದೇಶವಾಗಿದೆ ಎಂದರು.

ಸಂಘದ ಸದಸ್ಯರಲ್ಲಿ ಪರಸ್ಪರ ನಂಬಿಕೆ ಮತ್ತು ಜವಾಬ್ದಾರಿಯ ಮನೋಭಾವ ಹೆಚ್ಚಬೇಕು. ಸಣ್ಣ ವ್ಯಾಪಾರಿಗಳು, ರೈತರು, ಸ್ವಯಂ ಉದ್ಯೋಗಿಗಳು ಸೇರಿದಂತೆ ವಿವಿಧ ವರ್ಗದ ಜನರಿಗೆ ಸ್ಥಳೀಯವಾಗಿಯೇ ಆರ್ಥಿಕ ಸೇವೆಗಳು ಸಿಗುವಂತಾಗಬೇಕು. ಕೇವಲ ಸಾಲ ನೀಡುವ ಸಂಸ್ಥೆಗಳಾಗದೆ ಸದಸ್ಯರ ಆರ್ಥಿಕ ಪ್ರಗತಿಗೆ ಮಾರ್ಗದರ್ಶಕ ಸಂಸ್ಥೆಗಳಾಗಬೇಕು. ಆಡಳಿತದಲ್ಲಿ ಪಾರದರ್ಶಕತೆ, ಜವಾಬ್ದಾರಿತನ ಹಾಗೂ ಸದಸ್ಯರ ಹಿತಕ್ಕೆ ಆದ್ಯತೆ ನೀಡಬೇಕು ಎಂದರು.

ಸಾರ್ವಜನಿಕರಿಗೆ ಸುಲಭ ರೀತಿಯ ಸೇವೆ ಒದಗಿಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು. ನೂತನ ಕಚೇರಿಯು ಕ್ಷೇತ್ರದ ಜನಸಾಮಾನ್ಯರು, ಸಣ್ಣ ವ್ಯಾಪಾರಿಗಳು ಹಾಗೂ ರೈತರಿಗೆ ಸರಳ ಮತ್ತು ಪಾರದರ್ಶಕ ಆರ್ಥಿಕ ಸೇವೆ ಒದಗಿಸುವ ಕೇಂದ್ರವಾಗಿ ಬೆಳೆಯಲಿ ಎಂದರು.

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಅವರು ನೂತನ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ್ದ ದೇವತೆಗಳಿಗೆ ಪೂಜೆ ಸಲ್ಲಿಸಿ, ಗ್ರಾಮೀಣ ಭಾಗದ ಜನಸಾಮಾನ್ಯರು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಈ ಸಂಘದಿಂದ ಉತ್ತಮ ಸೇವೆ ಸಿಗಲಿ. ಸಹಕಾರ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಜನರಿಂದ ನಂಬಿಕೆ ವಿಶ್ವಾಸಗಳಿಸುವ ಮೂಲಕ ಈ ಸಂಘವು ಸದೃಢವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಸುರೇಶ್‌ಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್‌ಗೌಡ, ಮುಖಂಡ ಸುನಿಲ್ ಲಕ್ಷ್ಮಿಕಾಂತ್ ಸೇರಿದಂತೆ ಹಲವು ಗಣ್ಯರು ನೂತನ ಕಚೇರಿ ಪಾಲ್ಗೊಂಡು ಶುಭ ಹಾರೈಸಿದರು.

ಸಂಘದ ಪದಾಧಿಕಾರಿಗಳಾದ ಬಿ.ಆರ್.ರವಿ, ಬಿ.ಎಸ್.ಮಂಜು, ವಿಜಯಕುಮಾರ್, ನಟರಾಜು, ಎಂ.ಎನ್.ಮಂಜುನಾಥ್, ಕೆ.ವೈ.ಮಧು, ಎಚ್.ಆರ್.ಶಕುಂತಲ, ವಿನುತ, ಜಿ.ಎಸ್.ರುದ್ರೇಶ್, ಬಿ.ಆರ್.ಲೋಕೇಶ್, ತರುಣ್‌ಕುಮಾರ್, ಯೋಗೇಶ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಸಾರ್ವಜನಿಕ ಚರ್ಚೆಗೆ ಸಿದ್ಧ
ಕುಟುಂಬಗಳ ನಿರ್ವಹಣೆಗಾಗಿ ಮಹಿಳೆಯರಿಗೆ ಸಹಕಾರ ಸಂಘಗಳು ನೆರವು