ಬ್ಯಾಂಕಿನ ಸಾಲ ಸೌಲಭ್ಯ ಪಡೆದ ಮಹಿಳೆಯರು ಸ್ವಾವಲಂಬಿ ಬದುಕಿಗೆ ಬೇಕಿರುವ ವೃತ್ತಿಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ನಿಗದಿತ ಸಮಯಕ್ಕೆ ಉತ್ತಮವಾಗಿ ಸಾಲ ಮರುಪಾವತಿ ಮಾಡಿಕೊಂಡು ಕುಟುಂಬದ ಬಲವರ್ಧನೆ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪ್ರಸ್ತುತ ಪುರುಷರನ್ನು ಅವಲಂಬಿಸದೇ ಇರುವ ಮಹಿಳೆಯರಿಗೆ ತಮ್ಮ ಕುಟುಂಬಗಳ ನಿರ್ವಹಣೆಗೆ ಸಹಕಾರ ಸಂಘಗಳು ನೆರವಾಗಿವೆ ಎಂದು ಬ್ಯಾಂಕ್ ಆಫ್ ಬರೋಡಾ ಶಾಖಾ ವ್ಯವಸ್ಥಾಪಕ ಉದಯ್ ಕುಮಾರ್ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಮುದಾಯ ಭವನದಲ್ಲಿ ನಡೆದ ವಿಶ್ವೇಶ್ವರಯ್ಯ ಮಹಿಳಾ ಕಳಂಜಿಯ ಒಕ್ಕೂಟ ಮತ್ತು ವಿಶ್ವೇಶ್ವರಯ್ಯ ಮಹಿಳಾ ಕ್ಷೇಮಾಭಿವೃದ್ಧಿ ಫೌಂಡೇಷನ್ 21ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಮಹಿಳೆಯನ್ನು ಸ್ವಾವಲಂಬಿಯನಾಗಿಸಲು ಸ್ವಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅವುಗಳ ಅಭಿವೃದ್ಧಿಗೂ ಮಹಿಳೆಯರ ಪಾತ್ರ ಸಾಕಷ್ಟಿದೆ ಎಂದರು.

ಪುರುಷನ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದ ಕಾಲ ಇತ್ತು. ಆದರೆ, ಬ್ಯಾಂಕ್‌ಗಳ ಸಹಯೋಗದಲ್ಲಿ ಸ್ವಸಹಾಯ ಸಂಘಗಳು ಅಸ್ತಿತ್ವಕ್ಕೆ ಬಂದ ನಂತರ ಮಹಿಳೆಯರಿಗೆ ಆರ್ಥಿಕ ವಹಿವಾಟಿನ ಅರಿವು ಮೂಡಿದೆ ಎಂದರು.

ಬ್ಯಾಂಕಿನ ಸಾಲ ಸೌಲಭ್ಯ ಪಡೆದ ಮಹಿಳೆಯರು ಸ್ವಾವಲಂಬಿ ಬದುಕಿಗೆ ಬೇಕಿರುವ ವೃತ್ತಿಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ನಿಗದಿತ ಸಮಯಕ್ಕೆ ಉತ್ತಮವಾಗಿ ಸಾಲ ಮರುಪಾವತಿ ಮಾಡಿಕೊಂಡು ಕುಟುಂಬದ ಬಲವರ್ಧನೆ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ ಎಂದರು.

ವಿಎಂಕೆ ಫೌಂಡೇಷನ್ ಮತ್ತು ಒಕ್ಕೂಟದ ವ್ಯವಸ್ಥಾಪಕ ಶಿವಶಂಕರ್ ವಾರ್ಷಿಕ ವರದಿ ಮಂಡಿಸಿ ಒಕ್ಕೂಟದ ವ್ಯಾಪ್ತಿಯ ಸಂಘಗಳಲ್ಲಿ 2025-26ನೇ ಸಾಲಿನಲ್ಲಿ 20 ಕೋಟಿಗೂ ಅಧಿಕ ಸಾಲ ಸೌಲಭ್ಯಗಳ ವಹಿವಾಟು ನಡೆಸಲಾಗಿದೆ. ಸಂಘಕ್ಕೆ 3,64,47,986 ರು. ನಿವ್ವಳ ಆದಾಯ ಬಂದಿದೆ. ಎಲ್ಲ ಪದಾಧಿಕಾರಿಗಳಿಗೆ ಆದಾಯ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನೋಂದಾಯಿತ ಸದಸ್ಯರ ಪ್ರತಿಭಾವಂತ 33 ಮಕ್ಕಳಿಗೆ ನಗದು ಪುರಸ್ಕಾರದೊಂದಿಗೆ ಅಭಿನಂದಿಸಲಾಯಿತು. ಮೃತಪಟ್ಟಿದ್ದ ಒಕ್ಕೂಟದ ಖಜಾಂಚಿ ಜಯಲಕ್ಷ್ಮಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ತೆರವಾಗಿದ್ದ ಖಜಾಂಚಿ ಸ್ಥಾನಕ್ಕೆ ದಡಮಹಳ್ಳಿ ಗ್ರಾ ಸುಮಾ ಅವರನ್ನು ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸೂರ್ಯಕಾಂತ್, ವಿಎಂಕೆ ಫೌಂಡೇಷನ್ ವ್ಯವಸ್ಥಾಪಕ ಕೆ.ಆರ್.ಶಿವಶಂಕರ್, ಲೆಕ್ಕಪರಿಶೋಧಕ ಎಂ.ಕೆ.ಶ್ರೀಧರ್, ಒಕ್ಕೂಟದ ಅಧ್ಯಕ್ಷರಾದ ಸುನಂದಮ್ಮ, ಉಪಾಧ್ಯಕ್ಷೆ ರೂಪಾ, ಕಾರ್ಯದರ್ಶಿ ಉಮಾ, ಸಿಬ್ಬಂದಿಗಳಾದ ಇಂದ್ರಮ್ಮ, ಶೋಭಾ, ಭಾನುಮತಿ, ಆರತಿ, ಮಾನಸ, ಭಾರತಿ, ಸವಿತಾ ಸೇರಿದಂತೆ ಸಾವಿರಕ್ಕೂ ಅಧಿಕ ಸಂಘದ ಸದಸ್ಯರು ಹಾಜರಿದ್ದರು.