ಪ್ರಸ್ತುತದ ಸನ್ನಿವೇಶದಲ್ಲಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಜಾತಿ, ಧರ್ಮ ಮತ್ತು ಪಾಳೇಗಾರಿ ನೀತಿಗಳು ಅವರನ್ನು ತಡೆಯುತ್ತಿವೆ. ಮಹಿಳೆಯರು ಅಡುಗೆ ಕೋಣೆಯಿಂದ ಹೊರಬಂದು ರಾಜಕೀಯ ಹಾಗೂ ಸಾಮಾಜಿಕ ಎಲ್ಲ ರಂಗಗಳಲ್ಲೂ ತಮ್ಮ ಛಾಪು ಮೂಡಿಸಬೇಕು.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಸಮಾಜದಲ್ಲಿನ ಸಂಕೋಲೆಗಳನ್ನು ಕಿತ್ತೆಸೆದು ಮಹಿಳಾ ವಿಮೋಚನೆ ಹಾದಿಯಲ್ಲಿ ದೃಢ ಹೆಜ್ಜೆ ಇಡಲು ಮಹಿಳೆಯರು ಸಂಘಟಿತ, ಸೈದ್ಧಾಂತಿ ಮತ್ತು ಸಂಘಟನಾತ್ಮಕವಾಗಿ ಬಲಿಷ್ಠರಾಗಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದರು.

ಪಟ್ಟಣದ ದಂಡಿನ ಮಾರಮ್ಮನ ದೇವಸ್ಥಾನದ ಬಳಿಯ ಶ್ರೀಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಆಯೋಜಿಸಿದ್ದ ಎರಡು ದಿನಗಳ ವಿಭಾಗೀಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.

ಮಹಿಳೆಯರಿಗೆ ಸಮಾಜದಲ್ಲಿ ನ್ಯಾಯಯುತವಾಗಿ ಸಿಗಬೇಕಾದ ಅವಕಾಶಗಳು ಲಭಿಸಿದರೆ ಎಲ್ಲ ರಂಗಗಳಲ್ಲೂ ಸಾಧನೆ ಮಾಡುವ ಸಾಮರ್ಥ್ಯವಿದೆ. ಈಗಾಗಲೇ ಆಟೋ ಓಡಿಸುವುದರಿಂದ ಹಿಡಿದು ಬಾಹ್ಯಾಕಾಶ ಸಂಸ್ಥೆಗೆ ಪ್ರಯಾಣಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂದರು.

ಪ್ರಸ್ತುತದ ಸನ್ನಿವೇಶದಲ್ಲಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಜಾತಿ, ಧರ್ಮ ಮತ್ತು ಪಾಳೇಗಾರಿ ನೀತಿಗಳು ಅವರನ್ನು ತಡೆಯುತ್ತಿವೆ. ಮಹಿಳೆಯರು ಅಡುಗೆ ಕೋಣೆಯಿಂದ ಹೊರಬಂದು ರಾಜಕೀಯ ಹಾಗೂ ಸಾಮಾಜಿಕ ಎಲ್ಲ ರಂಗಗಳಲ್ಲೂ ತಮ್ಮ ಛಾಪು ಮೂಡಿಸಬೇಕು ಎಂದರು.

ಎಷ್ಟೇ ವೈಜ್ಞಾನಿಕತೆ ಬೆಳೆದರೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ. ಆಸ್ತಿ ಹಕ್ಕಿನಲ್ಲಿ ಅನ್ಯಾಯ, ಶಾಸನ ಸಭೆಗಳಲ್ಲಿ ರಾಜಕೀಯ ಮೀಸಲಾತಿಯ ಅನ್ಯಾಯ ಸೇರಿದಂತೆ ಅನೇಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವುಗಳ ನಿವಾರಣೆಗಾಗಿ ಮಹಿಳೆಯರು ಸೈದ್ಧಾಂತಿಕ ಮತ್ತು ಸಂಘಟನಾತ್ಮಕವಾದ ದೃಢ ಹೆಜ್ಜೆ ಹಿಡಿಯಲು ಮುಂದಾಗಬೇಕು ಎಂದರು.

ಕೃಷಿ ರಂಗದಲ್ಲಿ ಹೆಚ್ಚಾಗಿ ಮಹಿಳೆಯರು ತೊಡಗಿಸಿಕೊಂಡಿರುವುದರಿಂದ ವಿ ಬಿ ಗ್ರಾಮ್ ಜಿ ಯಲ್ಲಿ ವಾರ್ಷಿಕ 200 ದಿನ ಕೆಲಸ ನೀಡಿ ದಿನಕ್ಕೆ 700 ರು. ಕೂಲಿ ಹಣ ನೀಡಬೇಕು. ಅದಕ್ಕಾಗಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಕೆ.ಲತಾ, ಪ್ರಧಾನ ಕಾರ್ಯದರ್ಶಿ ಸುಶೀಲಾ, ಉಪಾಧ್ಯಕ್ಷರಾದ ಟಿ.ಬಿ.ಶೋಭಾ, ಪ್ರೇಮಮ್ಮ, ಜಯಶೀಲಾ, ಪ್ರೇಮ ಪಾಲ್ಗೊಂಡಿದ್ದರು.