ಮಡಿಕೇರಿ : ಕಸ್ತೂರಿ ರಂಗನ್ ವರದಿ ಜಾರಿಯಿಂದ ಪರಿಸರ ಸಂರಕ್ಷಣೆಯೊಂದಿಗೆ ಸ್ಥಳೀಯರ ಜೀವನವೂ ರಕ್ಷಣೆಯಾಗಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರವನ್ನು ಖಂಡಿತಾ ಕೈಗೊಳ್ಳಲಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೊಡಗು - ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಭರವಸೆ ನೀಡಿದ್ದಾರೆ.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ನ 147 ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಭಾರತೀಯ ಕಾಫಿ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿ ಎಂ. ಕೂರ್ಮಾರಾವ್, ಕಾರ್ಮಿಕರ ಕೊರತೆ ಹಿನ್ನಲೆಯಲ್ಲಿ ಕಾಫಿ ಮಂಡಳಿಯು ದೇಶವ್ಯಾಪಿ ಯಾಂತ್ರೀಕರಣಕ್ಕೆ ಆದ್ಯತೆ ನೀಡುವ ಯೋಜನೆ ಜಾರಿಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕವಾದ ಯಾಂತ್ರೀಕರಣ ಘಟಕವನ್ನೇ ಮಂಡಳಿಯಿಂದ ಸ್ಥಾಪಿಸುವ ಚಿಂತನೆ ಇದೆ ಎಂದರು. ಜಾಗತಿಕವಾಗಿ ಭಾರತೀಯ ಕಾಫಿ ಅತ್ಯುತ್ತಮ ಕಾಫಿ ಎಂಬ ಹೆಗ್ಗಳಿಕೆ ಹೊಂದಿದೆ. ಇದು ಮುಂದುವರೆಯಲು ಕಾಫಿ ಮಂಡಳಿ ಸಾಕಷ್ಟು ಯೋಜನೆಗಳನ್ನು ಕಾಫಿಯ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಂದಿದೆ ಎಂದರು.
ಕೂರ್ಗ್ ಪ್ಲಾಂಟಸ್೯ ಅಸೋಸಿಯೇಷನ್ 147 ವರ್ಷಗಳ ಸುದೀರ್ಘ ಕಾಲ ಕಾಫಿ ಕೃಷಿಗೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ ಕಾಫಿ ಮಂಡಳಿ ಕಾರ್ಯದರ್ಶಿ ಕೂರ್ಮಾರಾವ್, ಕರ್ನಾಟಕ ರಾಜ್ಯವೊಂದೇ 1.60 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದಿಸುವಲ್ಲಿ ಕೊಡಗಿನ ಕಾಫಿ ಕೃಷಿಕರ ಕೊಡುಗೆ ಅನನ್ಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ ಪ್ಲಾಂಟಸ್೯ ಅಸೋಸಿಯೇಷನ್ ನೂತನ ಅಧ್ಯಕ್ಷ ಮಾತಂಡ ಸಿ.ಕಾಯ೯ಪ್ಪ ಮಾತನಾಡಿ, ಮಾನವ - ವನ್ಯಜೀವಿ ಸಂಘಷ೯, ಕಾರ್ಮಿಕರ ಕೊರತೆ, ಹೆಚ್ಚುತ್ತಲೇ ಇರುವ ಕಾಫಿ ತೋಟ ನಿರ್ವಹಣಾ ವೆಚ್ಚಗಳಂಥ ಗಂಭೀರ ಸಮಸ್ಯೆಗಳಿಗೆ ಎಲ್ಲ ಕೃಷಿಕರು ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು. 69 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಧಾರವಾಡದಲ್ಲಿನ ಐಐಟಿ ಸಹಯೋಗದಲ್ಲಿ ಕಾರ್ಮಿಕ ಸ್ನೇಹಿಯಾದ ನವೀಕೃತ ಯಂತ್ರೋಪಕರಣಗಳ ಪರಿಚಯಕ್ಕೆ ಮುಂದಾಗಿದೆ ಎಂದರು. ಕಾಫಿ ಮಾಲೀಕರ ಪಾಲಿಗೆ ಯಂತ್ರಗಳೇ ಭವಿಷ್ಯದ ಕೃಷಿಯಲ್ಲಿನ ಆಶಾಕಿರಣ ಎಂದೂ ಕಾರ್ಯಪ್ಪ ಪ್ರತಿಪಾದಿಸಿದರು.
ಹವಾಮಾನ ಆಧಾರಿತ ವಿಮಾ ಸಂಸ್ಥೆಯಾದ ರೀಸೆಕ್ಯೂರ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಜೆನ್ ಮಾಡ್ಲಾ ಮಳೆ ವಿಮೆಯ ಬಗ್ಗೆ ಮಾಹಿತಿ ನೀಡಿದರು.ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷರಾದ ಪುಲಿಯಂಡ ಪವನ್ ಮೊಣ್ಣಪ್ಪ ವಂದಿಸಿದ ಕಾರ್ಯಕ್ರಮದಲ್ಲಿ ಸಂಘದ ನೂತನ ಕಾರ್ಯದರ್ಶಿ ಮನೆಯಪಂಡ ಡಾ. ಎಂ. ಚಂಗಪ್ಪ, ಸಂಘದ ನಿರ್ದೇಶಕರು ವೇದಿಕೆಯಲ್ಲಿದ್ದರು. ಸಂಘದ ಕಾರ್ಯದರ್ಶಿ ಚೊಟ್ಟೇರ ಬೆಳ್ಳಿಯಪ್ಪ, ಸಿಬ್ಬಂದಿ ಮೂವೇರ ಸರಸ್ವತಿ ಹಾಜರಿದ್ದರು.ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ಕೊಡಗಿನಲ್ಲಿ ಕಾಫಿ ಕೃಷಿಗೆ ಗಣನೀಯ ಕೊಡುಗೆ ನೀಡಿದ ಕಾಫಿ ಕೃಷಿಕರನ್ನು ಕಾಫಿ ಮಂಡಳಿ ಕಾರ್ಯದರ್ಶಿ ಎಂ.ಕೂರ್ಮಾರಾವ್ ಸನ್ಮಾನಿಸಿ ಗೌರವಿಸಿದರು. ಸುಂಟಿಕೊಪ್ಪದ ನಡಿಕೇರಿಯಂಡ ಬೋಸ್ ಮಂದಣ್ಣ, ಚೆಯ್ಯಂಡಾಣೆಯ ನಡಿಕೇರಿಯಂಡ ಕೆ. ಚಿಣ್ಣಪ್ಪ, ಮುತ್ತಾರ್ಮುಡಿಯ ಕೆಂಬರ್ತಂಡ ಎಂ. ಮಂದಣ್ಣ, ಬಾಡಗರಕೇರಿಯ ಕಾಯಪಂಡ ಮೋಹನ್ ಕಾಳಯ್ಯ, ಮೂರ್ನಾಡುವಿನ ಅರುಣ್ ಅಪ್ಪಚ್ಚು, ಅವರನ್ನು ಸನ್ಮಾನಿಸಲಾಯಿತು.