ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೃಷಿಯಲ್ಲಿ ಬದಲಾಗುತ್ತಿರುವ ಹವಾಮಾನದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಿ ಉತ್ತಮವಾಗಿ ಬೆಳೆ ಬೆಳೆಯಲು ಈ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲಗಳ ಸೂಕ್ತ ನಿರ್ವಹಣೆ, ಬೆಳೆಗಳ ನಿರ್ವಹಣೆ ಮತ್ತು ಪಶುಸಂಗೋಪನೆ ತಾಂತ್ರಿಕತೆಗಳ ಪರಿಚಯ ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮಗಳನ್ನು ಬೆಳೆ ಪ್ರ್ರಾತಕ್ಷಿಕೆಗಳ ಮೂಲಕ ಕೈಗೊಳ್ಳಲಾಗಿ, ಪ್ರಾತ್ಯಕ್ಷಿಸಿದ ತಂತ್ರಜ್ಞಾನಗಳ ಪರಿಣಾಮಗಳನ್ನು ತಿಳಿಸಿಕೊಡಲು ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ಗ್ರಾಮೀಣ ಹವಾಮಾನ ಒತ್ತಡ ನಿರ್ವಹಣಾ ಸಮಿತಿಯ ಅಧ್ಯಕ್ಷ ರಾಜಶೇಖರಪ್ಪ ಮಾತನಾಡಿ, ನಿಕ್ರಾ ಯೋಜನೆಯಡಿ ಪರಿಚಯಿಸಿರುವ ಹಲವಾರು ತಾಂತ್ರಿಕತೆ, ಅದರಲ್ಲೂ ಸುಧಾರಿತ ಜೋಳ ಮತ್ತು ಸೂರ್ಯಕಾಂತಿ ತಳಿಗಳು ಅಲ್ಪಾವಧಿಯಾಗಿವೆ. ಮಳೆ ಕಡಿಮೆಯಾದ ಸಂದರ್ಭಗಳಲ್ಲೂ ಉತ್ತಮ ಬೆಳವಣಿಗೆ ಮತ್ತು ಇಳುವರಿಯನ್ನು ನೀಡಿವೆ. ಪ್ರಸ್ತುತ, ಜೋಳ ಬಿತ್ತನೆಯಾದಾಗಿನಿಂದ ಕೇವಲ ಎರಡೇ ಬಾರಿ ಮಳೆಯಾಗಿದ್ದು ಇಂತಹ ಪರಿಸ್ಥಿತಿಯಲ್ಲೂ ಸಿ.ಎಸ್.ಎಚ್-೪೧ ಜೋಳದ ತಳಿ ಬೆಳೆದಿರುವ ಪರಿಣಾಮವಾಗಿ ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ಕೆ.ಬಿ.ಎಸ್.ಎಚ್-೭೮ ಸೂರ್ಯಕಾಂತಿ ತಳಿಯೂ ಸಹ ರೈತರು ಬೆಳೆದಿರುವ ಸ್ಥಳೀಯ ತಳಿಗಳಿಗಿಂತ ಉತ್ತಮ ಇಳುವರಿ ನೀಡುವಂತೆ ಬೆಳವಣಿಗೆ ಬಂದಿದೆ ಎಂದರು.ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ನೀರು ಸಂರಕ್ಷಣಾ ಕ್ರಮಗಳು, ಅದರಲ್ಲೂ ಕಂದಕ ಬದುಗಳ ನಿರ್ಮಾಣದಿಂದ ಕಡಿಮೆ ಮಳೆ ಅವಧಿಯಲ್ಲೂ ಸಹ ಮಣ್ಣಿನಲ್ಲಿ ಬೆಳವಣಿಗೆಗೆ ಅನುಕೂಲಕರವಾಗುವ ತೇವಾಂಶ ದೊರೆತಿದ್ದು, ಇದರ ಪರಿಣಾಮವಾಗಿ ಬೆಳೆ ಉತ್ತಮವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ತಾಂತ್ರಿಕ ಮಾಹಿತಿಯನ್ನು ಕೇಂದ್ರದ ವಿಜ್ಞಾನಿಗಳಾದ ಡಾ.ಯೋಗೇಶ್ ಮತ್ತು ಡಾ.ಶ್ರುತಿ ತಿಳಿಸಿದರು. ಜೋಳದ ಹೈಬ್ರಿಡ್ ಸಿ.ಎಸ್.ಹೆಚ್-೪೧ ಮತ್ತು ಸೂರ್ಯಕಾಂತಿ ಕೆ.ಬಿ.ಎಸ್.ಹೆಚ್-೭೮ರ ವಿಶೇಷ ಗುಣಲಕ್ಷಣಗಳನ್ನು ತಿಳಿಸಿಕೊಟ್ಟು ಎರಡೂ ತಳಿಗಳು ಉತ್ತಮ ಇಳುವರಿ ನೀಡುವ ತಳಿಗಳಾಗಿದ್ದು ಬರ ಸಹಿಷ್ಣತೆ ಮತ್ತು ರೋಗ ನಿರೋಧಕತೆ ಹೊಂದಿರುತ್ತವೆ ಎಂದು ತಿಳಿಸಿದರು.
ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ, ನೀರು ನಿರ್ವಹಣೆ ಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಂಡು ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಮಾಡುವುದರಿಂದ ಸಮಯ ಉಳಿಸಿ ಮತ್ತು ವ್ಯವಸಾಯದ ಖರ್ಚನ್ನು ತಗ್ಗಿಸಿ ಹೆಚ್ಚಿನ ಲಾಭ ಪಡೆಯಬಹುದೆಂದು ತಿಳಿಸಿದರು.
ರೈತ ನಾಗರಾಜಪ್ಪ ಮಾತನಾಡಿ, ಕೆ.ಬಿ.ಎಸ್.ಎಚ್-೭೮ ಸೂರ್ಯಕಾಂತಿ ತಳಿ ಸ್ಥಳೀಯ ತಳಿಗಿಂತ ಉತ್ತಮ ಬೆಳವಣಿಗೆಯನ್ನು ತೋರಿಸಿದ್ದು ಮಳೆ ಕೊರತೆ ಸನ್ನಿವೇಶದಲ್ಲೂ ಉತ್ತಮ ಗಾತ್ರದ ಸೂರ್ಯಕಾಂತಿ ತೆನೆಗಳು ಬಂದಿರುವುದರಿಂದ ಹೆಚ್ಚಿನ ಇಳುವರಿ ಮತ್ತು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.