ಕನ್ನಡಪ್ರಭ ವಾರ್ತೆ ಅಫಜಲ್ಪುರ
ತಾಲೂಕಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆಯಾಗದೇ ಇರುವುದರಿಂದ ರೈತರು ತತ್ತರಿಸಿ ಹೋಗಿದ್ದರು. ಈ ಬಾರಿಯಾದರೂ ಮುಂಗಾರು ಹಾಗೂ ಹಿಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಂದು ಅನ್ನದಾತರ ಬದುಕು ಹಸನಾಗುತ್ತದೆ ಎಂದು ನಂಬಿದ್ದ ರೈತರ ಆಸೆಗೆ ತಣ್ಣಿರೆರಚಿದ ಮಳೆ ಸಂಪೂರ್ಣ ಕೈ ಕೊಟ್ಟಿರುವುದರಿಂದ ಬರಗಾಲದ ಬವಣೆಗೆ ಸಿಲುಕಿ ಕಂಗೆಟ್ಟ ರೈತರಿಗೆ ದಿಕ್ಕು ತೋಚದಂತಾಗಿದೆ.ಹಿಂಗಾರು ಪ್ರಮುಖ ಬೆಳೆಗಳಾದ ಜೋಳ, ಕಡಲೆ, ಕುಸುಬಿ, ಗೋಧಿ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದು, ಈಗ ಬೆಳೆಗಳು ಹೂವು, ಕಾಯಿಯ ಹಂತದಲ್ಲಿದ್ದು, ಆದರೆ ಬೆಳೆಗೆ ಕೀಟದ ಕಾಟ ಹಾಗೂ ಸುಳಿ ರೋಗ ಆಗುತ್ತಿದ್ದು, ಅದಲ್ಲದೇ ಮೋಡ ಕವಿದ ವಾತಾವರಣ ಆಗುತ್ತಿರುವುದರಿಂದ ಕೀಟಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದು ಬೆಳೆ ರಕ್ಷಿಸಲು ನಾನಾ ರೀತಿಯ ರಾಸಾಯನಿಕ ಕೀಟನಾಶಕ ಔಷಧಿಗಳು ಸಿಂಪರಣೆ ಮಾಡುತ್ತಿದ್ದಾರೆ. ಅದರಂತೆ ಹಿಂಗಾರು ಬೆಳೆಯ ಪ್ರಮುಖ ಬೆಳೆಯಾದ ಜೋಳ ಬೆಳೆಗೆ ಸುಳಿ ರೋಗ ಆಗುತ್ತಿದ್ದು, ಬೇಗ ಬಿತ್ತನೆ ಮಾಡಿದ ಜೋಳದ ಬೆಳೆ ಈಗ ತೆನೆ ಹಂತದಲ್ಲಿದೆ. ಜಮೀನಿನಲ್ಲಿ ಬೆಳೆದ ಜೋಳಕ್ಕೆ ಹಕ್ಕಿಗಳ ಕಾಟ ಜೋರಾಗಿದೆ. ರೈತರು ಬೆಳೆದ ಜೋಳ ಬೆಳೆ ರಕ್ಷಿಸಲು ನಾನಾ ಕಸರತ್ತು ಮಾಡಿಕೊಳ್ಳುತ್ತಿದ್ದಾರೆ.
ಬೆಳೆದು ನಿಂತ ಬೆಳೆಗೆ ಪಕ್ಷಿಗಳ ಕಾಟಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಪಕ್ಷಿಗಳು ಹಿಂಡುಗಟ್ಟಲೆ ಒಮ್ಮೆಲೆ ದಾಳಿ ಮಾಡುವುದರಿಂದ ಜೋಳವನ್ನು ನಾಶ ಮಾಡುತ್ತಿರುವುದರಿಂದ ರೈತರು ಬೆಳೆ ರಕ್ಷಣೆಗೆ ಬೆಳಗಿನ ಜಾವ ಕೊರೆಯುವ ಚಳಿಯಲ್ಲಿಯೇ ಜಮೀನಿನಲ್ಲಿ ಪಕ್ಷಿಗಳನ್ನು ಓಡಿಸಲು ಒಂದು ತಟ್ಟೆ ಅಥವಾ ಡ್ರಮ್‌ಗಳನ್ನು ಹಿಡಿದು ಭಾರಿಸುತ್ತ ಶಬ್ದ ಮಾಡುತ್ತಿದ್ದು, ಶಬ್ದ ಮಾಡಿದರೇ ಸ್ವಲ್ಪ ಪಕ್ಷಿಗಳ ಕಾಟ ಕಡಿಮೆಯಾಗುತ್ತದೆ ಎಂದು ದಿನ ಪೂರ್ತಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಗಗನಕ್ಕೇರಿದ ಜೋಳದ ಬೆಲೆ:
ಜೋಳದ ಬೆಲೆ ಗಗನಕ್ಕೇರಿದ್ದು, ಪ್ರತಿ ಕ್ವಿಂಟಲ್‌ಗೆ ಮಾಲದಂಡಿ ಜೋಳ ರು. 6000ರಿಂದ 6500 ಹಾಗೂ ದುಂಡ ತೆನೆ (ಬಿಳಿ ಜೋಳ) 4500ರಿಂದ 5000 ರು. ವರೆಗೆ ಇದ್ದು, ಬೆಲೆ ನೋಡಿದರೇ ಹೆಚ್ಚಿಗೆ ಇದೆ. ಆದರೆ ಜೋಳದ ಬೆಳೆಗೆ ಸುಳಿ ರೋಗ ಹಾಗೂ ಪಕ್ಷಿಗಳ ಕಾಟದಿಂದ ಬೆಳೆ ನಾಶವಾಗುತ್ತಿದೆ.