ಕಳೆದ 1 ವರ್ಷದಿಂದ ಕಾರ್ಯನಿರ್ವಹಿಸುತ್ತಿಲ್ಲ । ದುರಸ್ತಿಗೆ ಅನುದಾನವಿಲ್ಲ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಸುಂಟಿಕೊಪ್ಪ ನಾಡಕಚೇರಿ ಬಳಿ ಸ್ಥಾಪಿಸಲಾಗಿದ್ದ ಶುದ್ಧ ನೀರಿನ ಘಟಕ ನಿರ್ವಹಣೆ ಇಲ್ಲದೆ ಯಾರಿಗೂ ಉಪಯೋಗಕ್ಕೆ ಬಾರದಂತಾಗಿದ್ದು, ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿಲ್ಲ. ಈಗ ಬೇಸಿಗೆ ಆಗಮಿಸಿದ್ದು, ಕುಡಿಯುವ ನೀರಿಗೆ ತತ್ವಾರ ಎದ್ದಿದೆ. ಇಂಥ ಸಂದರ್ಭದಲ್ಲಿ ಜನರಿಗೆ ಉಪಯೋಗವಾಗುವಂಥ ಈ ಘಟಕ ದುರಸ್ತಿಯಾಗದಿರುವುದು ಆಡಳಿತಯಂತ್ರದ ವೈಫಲ್ಯಕ್ಕೆ ಸಾಕ್ಷಿ.
ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನತೆಯು ಶುದ್ಧ ಕುಡಿಯುವ ನೀರು ಬಳಕೆ ಮಾಡುವಂತಾಗಬೇಕು ಎಂದು ದಶಕಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೆ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಗುಜರಿ ಸೇರುತ್ತಿದೆ. ಇದಕ್ಕೆ ಸುಂಟಿಕೊಪ್ಪದ ಘಟಕ ಸಾಕ್ಷಿಯಾಗಿದೆ.ಅತ್ಯಂತ ರಿಯಾಯಿತಿ ದರದಲ್ಲಿ ಅಂದರೆ, 5 ರು.ಗೆ 20 ಲೀಟರ್ ಶುದ್ಧ ಕುಡಿಯುವ ನೀರು ಈ ಘಟಕದಲ್ಲಿ ಲಭ್ಯವಾಗುತ್ತಿತ್ತು. ಆದರೆ ಈ ಘಟಕ ತಾಂತ್ರಿಕ ತೊಂದರೆಗಳಿಗೆ ಈಡಾಗಿ ಎಷ್ಟೇ ದುರಸ್ತಿಗೊಳಿಸಿದರೂ ಕಾರ್ಯಾಚರಿಸಲೇ ಇಲ್ಲ. ಈ ಯೋಜನೆ ಉಸ್ತುವಾರಿ ವಹಿಸಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಅನುದಾನದ ಕೊರತೆಯಿಂದ ದುರಸ್ತಿ ಮಾಡಲೂ ಸಾಧ್ಯವಾಗದೆ ಅಸಹಾಯಕತೆ ವ್ಯಕ್ತಪಡಿಸಿದೆ.ದಶಕದ ಹಿಂದೆ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಈಗಲೂ ಅವರದ್ದೇ ಸರ್ಕಾರ ಆಡಳಿತದಲ್ಲಿದೆ. ಇಲ್ಲಿನ ಶಾಸಕರೂ ಅದೇ ಸರ್ಕಾರದ ಭಾಗವಾಗಿದ್ದಾರೆ. ಆದರೂ ಈ ಘಟಕದ ದುರಸ್ತಿ ಆಗದಿರುವುದು ವಿಪರ್ಯಾಸ.
ಮಾರ್ಚ್‌ನಲ್ಲೆ ಏಪ್ರಿಲ್, ಮೇ ತಿಂಗಳ ಬಿಸಿಲು ಕಾಯುತ್ತಿದ್ದು, ಜೀವನದಿ ಕಾವೇರಿ ಬತ್ತುತ್ತಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಜನರಿಗೆ ಕ್ಲಪಿಸುವುದು ಆಡಳಿತ ಯಂತ್ರದ ಜವಾಬ್ದಾರಿ. ಆದ್ದರಿಂದ ಜನಪ್ರತಿನಿಧಿಗಳು ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡದೆ ಪಕ್ಷಾತೀತವಾಗಿ ಜನಸಾಮಾನ್ಯರಿಗೆ ನೀರಿನ ವ್ಯವಸ್ಥೆಗೆ ಕೆಲಸ ಮಾಡಬೇಕಾಗಿದೆ.------------
ಕಳೆದ 1 ವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಇದರ ದುರಸ್ತಿಗೆ ಅಂದಾಜು 80 ಸಾವಿರದಿಂದ 1.25 ಲಕ್ಷ ರು. ವರೆಗೆ ವೆಚ್ಚ ತಗಲುತ್ತದೆ. ಮುಂದಿನ ದಿನಗಳಲ್ಲಿ ಇದರ ದುರಸ್ತಿ ಕಾರ್ಯವನ್ನು ಮಾಡುವ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡಲಾಗುವುದು.। ಪಿ.ಆರ್. ಸುನಿಲ್ ಕುಮಾರ್ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ