ಶೀಘ್ರವೇ ಜೈನ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ

KannadaprabhaNewsNetwork |  
Published : Mar 20, 2025, 01:18 AM IST
ಜೈನ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ ಹಾಗೂ ಜೈನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌ ನಿರ್ಮಾಣ ಕುರಿತು ಶಾಸಕ ಲಕ್ಷ್ಮಣ ಸವದಿ, ಸಚಿವ ಡಿ.ಸುಧಾಕರ, ಜಿತೇಂದ್ರಕುಮಾರ, ಶೀತಲಗೌಡ ಪಾಟೀಲ ಇತರರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜೈನ ಸಮುದಾಯದವರಿದ್ದು, ಶೀಘ್ರವೇ ಜೈನ ಸಮಾಜದ ನಿಗಮ ಮಂಡಳಿ ಸ್ಥಾಪಿಸುವ ಘೋಷಣೆ ಮಾಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜೈನ ಸಮುದಾಯದವರಿದ್ದು, ಶೀಘ್ರವೇ ಜೈನ ಸಮಾಜದ ನಿಗಮ ಮಂಡಳಿ ಸ್ಥಾಪಿಸುವ ಘೋಷಣೆ ಮಾಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಘೋಷಿಸಿದ್ದಾರೆ.ಬೆಂಗಳೂರಿನಲ್ಲಿ ಬುಧವಾರ ಕರ್ನಾಟಕ ರಾಜ್ಯ ಜೈನ ಅಸೋಸಿಯೇಷನ್ ನೇತೃತ್ವದಲ್ಲಿ ಸಚಿವ ಡಿ.ಸುಧಾಕರ, ಅಥಣಿ ಶಾಸಕ ಲಕ್ಷ್ಮಣ ಸವದಿ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಜೈನ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡುವಂತೆ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇನೆ. ಈ ವರ್ಷವೇ ನಿಗಮ ಮಂಡಳಿ ಸ್ಥಾಪನೆ ಮಾಡಲಾಗುವುದು ನೂರಕ್ಕೆ ನೂರಷ್ಟು ವಿಶ್ವಾಸವಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಜೈನ ಸಮಾಜವನ್ನು ಸರ್ವೇ ಮಾಡಿಸಿದಾಗ ಸುಮಾರು 25 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ ಎಂಬುದು ಗೊತ್ತಾಗಿದೆ. ಅದಕ್ಕಾಗಿ ಜೈನ ಸಮಾಜಕ್ಕೆ ನಿಗಮ ಮಂಡಳಿ ಮಾಡಲೇಬೇಕೆಂದು ಸಿಎಂ ಗಮನಕ್ಕೆ ತಂದಿದ್ದೇನೆ. ಇದೇ ವರ್ಷ ನೂರಕ್ಕೆ ನೂರರಷ್ಟು ನಾನು ಲಕ್ಷ್ಮಣ ಸವದಿ, ಸಚಿವ ಸುಧಾಕರ ಕೂಡಿಕೊಂಡು ಹೋಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿಗಮ ಮಂಡಳಿ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.ಅವಿನಾಭಾವ ಸಂಬಂಧ:

ಪ್ರತಿಸಲ ಬಂದಾಗ ಜೈನ ಸಮಾಜಕ್ಕೆ ನಿಗಮ ಮಾಡಬೇಕು. ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಮಾಡಬೇಕೆಂದು ಹೇಳುತ್ತಾರೆ. ಜೈನ ಸಮಾಜಕ್ಕೂ ಲಕ್ಷ್ಮಣ ಸವದಿಯವರಿಗೂ ಒಂಥರಾ ಅವಿನಾಭಾವ ಸಂಬಂಧವಿದೆ. ಅವರದ್ದು ನಿಮ್ಮ ಸಮಾಜದ ಮೇಲೆ ಬಹಳಷ್ಟು ಪ್ರೀತಿ ಇದೆ ಎಂದು ಸಚಿವ ಜಹಮೀರ್‌ ಅಹ್ಮದ್‌ ಖಾನ್‌ ಹೇಳಿದರು.

ಜೈನ ಸಮಾಜದ ಪ್ರತ್ಯೇಕ ನಿಗಮ ಸ್ಥಾಪಿಸಿ ₹300 ಕೋಟಿ ಅನುದಾನ ಕೊಡುತ್ತೇವೆ. ಮುಸ್ಲಿಂ, ಕ್ರಿಶ್ಚಿಯನ್, ಶಿಖ್ ಧರ್ಮಿಯರ ಅರ್ಚಕರಿಗೆ ಸಂಭಾವನೆ ಕೋಡುವ ಹಾಗೇ ಇನ್ನೂ ಮುಂದೆ ಜೈನ ಧರ್ಮದ ಅರ್ಚಕರಿಗೂ ₹6 ಸಾವಿರ ಸಂಭಾವನೆ ನೀಡಲಾಗುವುದೆಂದು ಘೋಷಿಸಿದರು. ಲಕ್ಷ್ಮಣ ಸವದಿ ಹಾಗೂ ಡಿ.ಸುಧಾಕರ ಅವರದ್ದು ನಿಮ್ಮ ಸಮಾಜದ ಮೇಲೆ ಪ್ರೀತಿ ಇದೆ. ತಮ್ಮ ಸಮಾಜಕ್ಕೆ ಬೇಕಾಗುವ ಅನುದಾನ ಬಗ್ಗೆ ಚಿಂತೆ ಬೇಡ. ಅಲ್ಪಸಂಖ್ಯಾತರ ಸಚಿವನಾಗಿ ನಿಮಗೆ ಬೇಕಾದಷ್ಟು ಅನುದಾನ ಕೊಡವುದಾಗಿ ಸಚಿವರು ಭರವಸೆ ನೀಡಿದರು.

ಹಾಸ್ಟೆಲ್‌ ಮಂಜೂರು:

ಲಕ್ಷ್ಮಣ ಸವದಿಯವರು ಪ್ರಸ್ತಾಪಿಸಿದಂತೆ ಬೆಳಗಾವಿ, ವಿಜಯಪೂರ, ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬೆಳಗಾವಿ ಹಾಗೂ ಧಾರವಾಡದಲ್ಲಿ ಜೈನ ಹಾಸ್ಟೆಲ್ ಮಂಜೂರು ಮಾಡಿರುವುದಾಗಿ ಸಚಿವ ಜಹಮೀರ್‌ ಅಹ್ಮದ್‌ ಖಾನ್‌ ಆದೇಶ ಪತ್ರ ಬಿಡುಗಡೆಗೊಳಿಸಿ, ನಾವು ಸದಾ ನಿಮ್ಮ ಜೊತೆ ಇದ್ದೇವೆ ಎಂದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಬೆಳಗಾವಿಯಲ್ಲಿ ನಡೆದ ಕಳೆದ ಅದಿವೇಶನದಲ್ಲಿ ವರೂರದ ರಾಷ್ಟ್ರಸಂತ ಗುಣದರನಂದಿ ಮುನಿಮಹಾರಾಜರು ಪ್ರಮುಖವಾಗಿ ಜೈನ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ಜೈನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರಾರಂಭಿಸಬೇಕು ಎಂದು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದರು. ಆ ಪ್ರಕಾರ ಸರಕಾರ ಮುನಿಗಳ ಅಪ್ಪನೆಯ ಮೇರೆಗೆ ಬೆಳಗಾವಿ ಹಾಗೂ ಧಾರವಾಡದಲ್ಲಿ ಸಾತ್ವಿಕ ಆಹಾರ ಸೇವನೆ ಮಾಡುವ ಜೈನ ವಿದ್ಯಾರ್ಥಿಗಳಿಗೆ 2 ಹಾಸ್ಟೆಲ್‌ಗಳನ್ನು ಅಲ್ಪಸಂಖ್ಯಾತ ಸಚಿವರಾದ ಜಹಮೀರ್‌ ಅಹ್ಮದ್‌ ಖಾನ್‌ ಅವರು ಮಂಜೂರು ಮಾಡಿದ್ದಾರೆ. ಬರುವ ದಿನಮಾನಗಳಲ್ಲಿ ನಿಗಮ ಮಂಡಳಿ ಸ್ಥಾಪಿಸಲಿದ್ದಾರೆ ಎಂದರು.

ಜಹಮೀರ್‌ ಅಹ್ಮದ್‌ ಖಾನ್‌ ಅವರು ಅಲ್ಪಸಂಖ್ಯಾತರ ಸಚಿವರು ಆಗದೇ ಹೋಗಿದ್ದರೇ ಇಂದು ಜೈನ ಸಮಾಜದ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು. ಆದರೆ ಕಾರ್ಯ ಆಗುತ್ತಿರಲಿಲ್ಲ. ಅವರದು ಮೂರ್ತಿ ಚಿಕ್ಕದಾದರೂ ಕಿರ್ತಿ ದೊಡ್ಡದು. ಅವರಿಂದ ನಮಗೆ ಭರವಸೆಯ ಉತ್ತರ ಸಿಕ್ಕಿಲ್ಲ, ಬದಲಾಗಿ ಕಾರ್ಯವಾಗಿದೆ ಎಂದು ಹೇಳಲು ನನಗೆ ಸೋತೋಷವೆನಿಸುತ್ತದೆ ಎಂದು ಲಕ್ಷ್ಮಣ ಸವದಿ ಹೇಳಿದರು

ಸಚಿವ ಡಿ.ಸುಧಾಕರ, ಮಾಜಿ ಸಚಿವ ವೀರಕುಮಾರ ಪಾಟಲ, ಕರ್ನಾಟಕ ಜೈನ ಅಸೋಸಿಯೇಶನ್ ಅಧ್ಯಕ್ಷ ಜಿತೇಂದ್ರಕುಮಾರ, ರಾಜ್ಯ ಉಪಾಧ್ಯಕ್ಷರಾದ ಶೀತಲಗೌಡ ಪಾಟೀಲ, ಕೀರ್ತಿರಾಜ, ಜೈನ ಸಮಾಜದ ಮುಖಂಡರಾದ ಅರುಣಕುಮಾರ ಯಲಗುದ್ರಿ, ಅಭಯ ಅವಲಕ್ಕಿ, ಸಂಜಯ(ರಾಜು) ನಾಡಗೌಡ, ಅಮರ ದುರ್ಗಣ್ಣವರ, ಕೆ.ಎ.ವನಜೋಳ, ಸಂಜಯ ಕುಚನೂರೆ, ಯಶವಂತ ಪಾಟೀಲ, ಬಾಬು ಅಕಿವಾಟೆ, ಅಣ್ಣಾಸಾಬ ನಂದಗಾಂವ, ಡಾ.ನೀರಜ್, ಧರನೇಂದ್ರಯ್ಯ, ಸಂದೀಪ ಪಾಟೀಲ(ಹಲಗಾ) ಕರ್ನಾಟಕ ಜೈನ ಅಸೋಸಿಯೇಶನ್ ಆಡಳಿತ ಮಂಡಳಿ ಸದಸ್ಯರು ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜೈನ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌