ತ್ಯಾಜ್ಯ ಸಂಸ್ಕರಣಾ ಘಟಕ ಖಾಸಗಿಗೆ ನೀಡಲು ಪಾಲಿಕೆ ನಿರ್ಧಾರ

KannadaprabhaNewsNetwork |  
Published : May 29, 2025, 02:20 AM IST
ಕಾರವಾರ ರಸ್ತೆಯಲ್ಲಿನ ಡಂಪಿಂಗ್‌ ಯಾರ್ಡ್‌. | Kannada Prabha

ಸಾರಾಂಶ

ಇದೀಗ ಪ್ರತಿನಿತ್ಯ ಸಂಗ್ರಹವಾಗುವ ಸರಿಸುಮಾರು 450 ಟನ್‌ ಕಸವನ್ನು ಡಂಪಿಂಗ್‌ ಯಾರ್ಡ್‌ಗೆ ಹಾಕಲಾಗುತ್ತದೆ. ಅದನ್ನು ಅದೇ ದಿನ ಅಂದರೆ ಮರುದಿನ ಡಂಪಿಂಗ್‌ ಯಾರ್ಡ್‌ನಲ್ಲಿ ಕಸ ಬಂದು ಬೀಳುವುದರೊಳಗೆ ಇದ್ದ ಕಸದ ಸಂಸ್ಕರಣೆ ಪೂರ್ಣ ಮುಗಿದಿರಬೇಕು ಆ ಕಂಡಿಷನ್‌ ಹಾಕಿ ಖಾಸಗಿಗೆ ಕೊಡಲಾಗುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಕಸದ ಬೆಟ್ಟ ಬೆಳೆಯದಂತೆ ನೋಡಿಕೊಳ್ಳಲು, ಅಂದಿನ ಕಸ ಅಂದೇ ವಿಲೇವಾರಿ ಆದಾಗ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಕಸ ವಿಲೇವಾರಿ ಘಟಕ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಸ ವಿಲೇವಾರಿಯನ್ನು ಖಾಸಗಿಗೆ ಕೊಡಲು ಮುಂದಾಗುತ್ತಿರುವುದು ಇದೇ ಮೊದಲು.

ಕಸ ವಿಲೇವಾರಿ ಸಮರ್ಪಕವಾಗುವುದೇ ಇಲ್ಲ. ಹೀಗಾಗಿ ಕಸದ ಡಂಪಿಂಗ್‌ ಯಾರ್ಡ್‌ನಲ್ಲಿ ರಾಶಿ ರಾಶಿ ಕಸದ ಗುಡ್ಡೆ ಹಾಕಲಾಗಿದೆ. ಎಷ್ಟೋ ದಶಕಗಳಿಂದ ಕಸದ ಬೆಟ್ಟ ಕರಗಿಸಲು ಸಾಧ್ಯವಾಗದೇ ಇಡೀ ವಾತಾವರಣವೇ ಅಶುದ್ಧಗೊಳ್ಳುತ್ತಿದೆ. ಅತ್ತ ಧಾರವಾಡದ ಹೊಸ ಯಲ್ಲಾಪುರ ಡಂಪಿಂಗ್‌ ಯಾರ್ಡ್‌ನಲ್ಲಿ 1.5 ರಿಂದ 2 ಲಕ್ಷ ಟನ್‌ ಕಸದ ಬೆಟ್ಟ ಇದ್ದರೆ, ಇತ್ತ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ 5 ರಿಂದ 5.5 ಲಕ್ಷ ಟನ್‌ ಕಸ ಸಂಗ್ರಹವಾಗಿದೆ. ದಶಕಗಳಿಂದ ಇದು ಸಂಗ್ರಹವಾಗಿರುವುದು. ಇದೀಗ ಇದನ್ನು ಬಯೋ ಮೈನಿಂಗ್‌ ಮೂಲಕ ಕರಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದರಲ್ಲಿ ಅಲ್ಪಸ್ವಲ್ಪ ಯಶಸ್ವಿ ಕೂಡ ಆಗುತ್ತಿದೆ. ಈ ನಡುವೆ ಪ್ರತಿನಿತ್ಯ ಹುಬ್ಬಳ್ಳಿಯಲ್ಲಿ 300 ಟನ್‌ ಹಾಗೂ ಧಾರವಾಡದಲ್ಲಿ 150 ಟನ್‌ ಅಂದರೆ ಬರೋಬ್ಬರಿ 450 ರಿಂದ 500 ಟನ್‌ ಕಸ ಸಂಗ್ರಹವಾಗುತ್ತದೆ. ಇತ್ತ ಬಯೋ ಮೈನಿಂಗ್‌ ಮೂಲಕ ಹಿಂದೆ ಸಂಗ್ರಹವಾಗಿರುವ ಕಸವನ್ನು ಕರಗಿಸಲಾಗುತ್ತಿದೆಯಾದರೂ ಪ್ರತಿನಿತ್ಯ 500 ಟನ್‌ ಕಸ ಸಂಗ್ರಹವಾಗುತ್ತಲೇ ಇದೆ. ಹೀಗಾಗಿ ಬೆಟ್ಟ ಕರಗಿದಷ್ಟೇ ಮತ್ತೆ ಮತ್ತೆ ಬೆಳೆಯುತ್ತಲೇ ಇದೆ.

ಹೀಗಾಗಿ ಒಂದೆಡೆ ಬಯೋ ಮೈನಿಂಗ್‌ ಮೂಲಕ ಕಸದ ಬೆಟ್ಟ ಕರಗಿಸುವುದು ಇನ್ನೊಂದೆಡೆ ಪ್ರತಿನಿತ್ಯ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪಾಲಿಕೆ ಮುಂದಾಗಿದೆ. ಇದೇ ಸಲಹೆ ಹಾಗೂ ಸೂಚನೆಯನ್ನೂ ಹಸಿರು ನ್ಯಾಯಾಧೀಕರಣ ಮಂಡಳಿಯೂ ನೀಡಿದೆ.

ಖಾಸಗಿಗೆ ನೀಡಲು ನಿರ್ಧಾರ: ಇದೀಗ ಪ್ರತಿನಿತ್ಯ ಸಂಗ್ರಹವಾಗುವ ಸರಿಸುಮಾರು 450 ಟನ್‌ ಕಸವನ್ನು ಡಂಪಿಂಗ್‌ ಯಾರ್ಡ್‌ಗೆ ಹಾಕಲಾಗುತ್ತದೆ. ಅದನ್ನು ಅದೇ ದಿನ ಅಂದರೆ ಮರುದಿನ ಡಂಪಿಂಗ್‌ ಯಾರ್ಡ್‌ನಲ್ಲಿ ಕಸ ಬಂದು ಬೀಳುವುದರೊಳಗೆ ಇದ್ದ ಕಸದ ಸಂಸ್ಕರಣೆ ಪೂರ್ಣ ಮುಗಿದಿರಬೇಕು ಆ ಕಂಡಿಷನ್‌ ಹಾಕಿ ಖಾಸಗಿಗೆ ಕೊಡಲಾಗುತ್ತಿದೆ.

ಹಸಿ ಹಾಗೂ ಒಣಕಸವನ್ನು ಪ್ರತ್ಯೇಕಿಸಿಯೇ ಡಂಪಿಂಗ್‌ ಯಾರ್ಡ್‌ನಲ್ಲಿ ಹಾಕಲಾಗುತ್ತದೆ. ಅದರಲ್ಲಿ ಹಸಿ ಕಸವನ್ನು ಸಾವಯವ ಗೊಬ್ಬರವನ್ನಾಗಿ ಸಂಸ್ಕರಿಸಬೇಕು. ಒಣ ಕಸವನ್ನು ಸಿಮೆಂಟ್‌ ಕಾರ್ಖಾನೆಗೆ ಕಳುಹಿಸಲು ಬರುವಂತೆ ಸಂಸ್ಕರಿಸಿ ಸಂಗ್ರಹಿಸಿಡಬೇಕು.

ಒಂದು ವರ್ಷಕ್ಕೆಂದು ಈ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ. ಹುಬ್ಬಳ್ಳಿಯ 300 ಟನ್‌ ಸಾಮರ್ಥ್ಯದ ಘಟಕದ ನಿರ್ವಹಣೆಯನ್ನು ₹9.78ಕೋಟಿಗೆ ಹಾಗೂ ಧಾರವಾಡ ₹6.69 ಕೋಟಿಗೆ ಟೆಂಡರ್‌ ನೀಡಲು ಯೋಚಿಸಲಾಗಿದೆ.

ಈ ಬಗ್ಗೆ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿ ವರ್ಗ ತಿಳಿಸಿದೆ. ಏನೇ ಆದರೂ ಅಂದಿನ ಕಸ ಅಂದೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪಾಲಿಕೆ ನಿರ್ಧರಿಸಿ ಖಾಸಗಿಗೆ ನೀಡಲು ನಿರ್ಧರಿಸಿದೆ. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೆ!

ಹಸಿರು ನ್ಯಾಯಾಧೀಕರಣ ಮಂಡಳಿ ಸಲಹೆಯಂತೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿಲೇವಾರಿ ಮಾಡಬೇಕು. ಆ ನಿಟ್ಟಿನಲ್ಲಿ ಪಾಲಿಕೆ ಇದೇ ಮೊದಲ ಬಾರಿಗೆ ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ವಹಣೆಯನ್ನು ಟೆಂಡರ್‌ ಕರೆದು ಗುತ್ತಿಗೆ ನೀಡಲು ನಿರ್ಧರಿಸಿದೆ. ಇದರಿಂದ ಅಂದಿನ ಕಸ ಅಂದೇ ಸಮರ್ಪಕವಾಗಿ ಸಂಸ್ಕರಿಸಿ ವಿಲೇವಾರಿಯಾಗಲಿದೆ. ಇದರಿಂದ ಕಸದ ಬೆಟ್ಟ ಬೆಳೆಯಲು ಅವಕಾಶ ಇರಲ್ಲ ಎಂದು ಪಾಲಿಕೆಯ ಪರಿಸರ ಅಭಿಯಂತರ ಸಂತೋಷ ಯರಂಗಳಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ