ಪಾಲಿಕೆ ಚುನಾವಣೆ: ಮತದಾರರ ಪಟ್ಟಿ ಸಿದ್ಧತೆಗೆ ಡಿಸಿ ಡಾ.ಗುರುದತ್ ಹೆಗಡೆ ಸೂಚನೆ

KannadaprabhaNewsNetwork |  
Published : Aug 24, 2024, 01:28 AM IST
ಪೊಟೋ:23ಎಸ್‌ಎಂಜಿಕೆಪಿ06ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮತದಾರರ ಪಟ್ಟಿ ತಯಾರಿಕೆ ಸಂಬಂಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಮತದಾರರ ಪಟ್ಟಿ ತಯಾರಿಕೆ ಸಂಬಂಧ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅಧಿಕಾರಿಗಳಿಗೆ ಮತದಾರರ ಪಟ್ಟಿಯನ್ನು ತಯಾರಿಸಿ ಆ.31ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ವಾರ್ಡುವಾರು ಮತದಾರರ ಪಟ್ಟಿಯನ್ನು ತಯಾರಿಸಿ ಆ.31ರೊಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಡಾ.ಗುರುದತ್ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿ ತಯಾರಿಕೆ ಸಂಬಂಧ ಏರ್ಪಡಿಸಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಚುನಾವಣಾ ಆಯೋಗವು ಅವಧಿ ಮುಕ್ತಾಯಗೊಂಡಿರುವ ಶಿವಮೊಗ್ಗ ಮಹಾನಗರಪಾಲಿಕೆಯ ಸಾರ್ವತ್ರಿಕ ಚುನಾವಣೆಗೆ ವಾರ್ಡು ವಾರು ಮತದಾರರ ಪಟ್ಟಿಯನ್ನು ತಯಾರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡುಗಳ ಮತದಾರರ ಪಟ್ಟಿಯ ಸಿದ್ಧತೆ, ಮತ ಗಟ್ಟೆಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತಿತರ ವಿಷಯಗಳ ಸಿದ್ಧತೆಗೆ ರಾಜಕೀಯ ಪಕ್ಷಗಳ ಮುಖಂಡರು ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದರು.

ಆ.24ರವರೆಗೆ ವಾರ್ಡುಗಳ ವ್ಯಾಪ್ತಿಯಲ್ಲಿನ ಮತದಾರರನ್ನು ಗುರುತಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಆ.31ರವರೆಗೆ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರುತಿಸಿ, ಪಟ್ಟಿ ತಯಾರಿಸಿ, ಮುದ್ರಕರಿಗೆ ನೀಡಲಾಗುವುದು. ಸೆಪ್ಟಂಬರ್ 4ರಂದು ನೀಡಿದ ಪಟ್ಟಿಯಂತೆ ಕರಡು ಪಟ್ಟಿ ಮುದ್ರಕರಿಂದ ಪಡೆದು, ಸೆ.10ರಂದು ಮತ್ತೊಮ್ಮೆ ಪಟ್ಟಿಯನ್ನು ಪರಿಶೀಲಿಸಿ ಪಟ್ಟಿಯಲ್ಲಿ ಅಳವಡಿಸಲಾಗುವುದು. ನಂತರ ಸದರಿ ಮತದಾರರ ಪಟ್ಟಿಯ ಕರಡನ್ನು ಸೆ.17ರಂದು ಪ್ರಕಟಿಸ ಲಾಗುವುದು. ಪ್ರಕಟಿತ ಪಟ್ಟಿಯ ಕುರಿತು ಮತದಾರರು ತಮ್ಮ ಆಕ್ಷೇಪಣೆಗಳನ್ನು ಸೆ.24ರೊಳಗೆ ಸಲ್ಲಿಸಬೇಕು. ಸೆ.30ರಂದು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ, ಅಕ್ಟೋಬರ್ 6ರವರೆಗೆ ವಾರ್ಡು ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಿ, ಅ.9ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಮಹಾನಗರಪಾಲಿಕೆ ವಾರ್ಡುವಾರು ಮತದಾರರ ಪಟ್ಟಿಯನ್ನು ತಯಾರಿಸಲು ಸೂಚಿಸಲಾಗಿದೆ. ಪಾಲಿಕೆಯ ಆಯುಕ್ತರನ್ನು ಚುನಾವಣಾ ಆಯೋಗವೇ ಅಧಿಕಾರಿಗಳೆಂದು ಅಧಿಸೂಚಿಸಿ, ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಆದೇಶ ಹೊರಡಿಸಿದೆ ಎಂದರು.

ಪ್ರತಿ ವಾರ್ಡಿಗೆ ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ತಯಾರಿಸಲಾಗುತ್ತಿದ್ದು, ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ವಿಧಾನಸಭಾ ಮತದಾರರ ಪಟ್ಟಿ ಯಲ್ಲಿರುವ ಮತದಾರರನ್ನು ಗುರುತಿಸಿ, ಕರಾರುವಕ್ಕಾಗಿ ಆಯಾ ವಾರ್ಡಿನ ಮತದಾರರ ಪಟ್ಟಿಗೆ ಸೇರಿಸಲಾಗುವುದು. ಮತದಾರರು ಒಂದು ವಾರ್ಡಿನಿಂದ ಇನ್ನೊಂದು ವಾರ್ಡಿಗೆ ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಲು ಹಾಗೂ ಬೇರೆ ಬೇರೆ ವಾರ್ಡುಗಳಲ್ಲಿ ಪುನರಾವರ್ತನೆಗೊಳ್ಳದಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.

ಪ್ರತಿ ವಾರ್ಡಿನಲ್ಲಿ ಮತದಾರರನ್ನು, ಮತಗಟ್ಟೆಗಳನ್ನು ಗುರುತಿಸಿ, ಪ್ರತ್ಯೇಕ ಮತಗಟ್ಟೆ ಸಂಖ್ಯೆ ಮತ್ತು ಮತದಾರರ ಪಟ್ಟಿ, ಭಾಗ ಸಂಖ್ಯೆಯನ್ನು ನೀಡಲು ಸೂಚಿಸ ಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಪೂರಕ ಪಟ್ಟಿಗಳನ್ನು ಸೇರಿಸಿದ ನಂತರ 1400ಕ್ಕೂ ಹೆಚ್ಚಿನ ಮತದಾರರು ಕಂಡುಬಂದಲ್ಲಿ ಅಂತಹ ಮತದಾರರ ಪಟ್ಟಿಯನ್ನು ವಿಭಜಿಸಿ, ಅಕ್ಸಿಲರಿ ಮತಗಟ್ಟೆಯನ್ನು ರಚಿಸಲು ಆಯೋಗದ ನಿಯಮಾನುಸಾರ ಆಯೋಗಕ್ಕೆ ಶಿಫಾರಸ್ಸು ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಕೆ: ಮುನಿಯಪ್ಪ
ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ