ಕನ್ನಡಪ್ರಭ ವಾರ್ತೆ ಕಲಬುರಗಿ
ಸಭೆಯಲ್ಲಿ ಶ್ವಾನ ಸಮಸ್ಯೆ ಬಗ್ಗೆ ನಡೆದ ವಿಸ್ತೃತ ಚರ್ಚೆಯಲ್ಲಿ ನಾಯಿ ಕಾಟ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಪಾಲಿಕೆಯ ಆರೋಗ್ಯಾಧಿಕಾರಿ. ಡಾ. ವಿವೇಕಾನಂದ ಹಾಗೂ ಪರಿಸರ ಇಂಜಿನಿಯರ್ ಮುನಾಫ್ ಪಟೇಲ್ ಇವರಿಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ನಿರ್ಣಯ ಅಂಗೀಕರಿಸಿತು.
ಕಲಬುರಗಿಯ ಮಿಸ್ಬಾ ನಗರದಲ್ಲಿ ಬುಧವಾರ ರಾತ್ರಿ ಬೀದಿನಾಯಿ ಕಡಿತಕ್ಕೊಳಗಾಗಿ ಜೀವನ್ಮರಣ ಹೋರಾಟದಲ್ಲಿರುವ 6 ವರ್ಷದ ಬಾಲಕಿ ಇರ್ಫಾನ್ ಚಿಕಿತ್ಸಾ ವೆಚ್ಚ ಭರಿಸಬೇಕು, ಸೂಕ್ತ ಪರಿಹಾರ ನೀಡಬೇಕು, ನಾಯಿ ಕಡಿತದ ಘಟನೆಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಮಿಸ್ಬಾ ನಗರ ವಾರ್ಡ್‌ನ ಪಾಲಿಕೆ ಸದಸ್ಯ ಸಾಜಿದ್ ಕಲ್ಯಾಣಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಪಾಲಿಕೆ ಸಾಮಾನ್ಯ ಸಭೆಗೂ ಬಿಸಿ ಮುಟ್ಟಿಸಿತ್ತು.ಸಭೆ ನಡೆಯಲಿದ್ದ ಟೌನ್ ಹಾಲ್ ದ್ವಾರದಲ್ಲೇ ಸದಸ್ಯರು ಧರಣಿ ಕುಳಿತಾಗ ಸಭೆಗೆ ಆಗಮಿಸಿದ್ದ ಮೇಯರ್ ವಿಶಾಲ ಧರ್ಗಿ, ಉಪ ಮೇರ್ ಶಿವಾನಂದ ಪಿಸ್ತಿ, ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್, ಆಯುಕ್ತ ಭುವನೇಶ ಪಾಟೀಲ್ ಇವರೆಲ್ಲರೂ 45 ನಿಮಿಷಕ್ಕೂ ಹೆಚ್ಚುಕಾಲ ಸಭಾಂಗಣದ ಹೊರಗಡೆಯೇ ನಿಲ್ಲುವಂತಾಯ್ತು.
ನಗರದಲ್ಲಿ ನಾಯಿಕಾಟ ಸಾಕಷ್ಟಿದ್ದರು ಪಾಲಿಕೆ ಕಾಲಹರಣ ಮಾಡುತ್ತಿದೆ, ಸಮಸ್ಯೆ ಕಡೆಗಣಿಸಿದ್ದರಿಂದಲೇ ಮಿಸ್ಬಾ ನಗರದಲ್ಲಿ ಮತ್ತೆ ನಾಯಿ ಕಡಿತ ಸಂಭವಿಸಿದೆ ಎಂದು ಪ್ರತಿಭಟನಾ ನಿರತರು ದೂರಿದರು. ಏತನ್ಮಧ್ಯೆ ಮೇಯರ್ ವಿಶಾಲ ಧರ್ಗಿ, ಆಯುಕ್ತ ಭುವನೇಶ ಪಾಟೀಲ್, ಶಾಸಕ ಅಲ್ಲಂಪ್ರಭು ಪಾಟೀಲರು ಸಭೆಗೆ ಅವಕಾಶ ಕೊಡಿ, ಚಚ್ರಿಸೋಣವೆಂದರೂ ಕೇಳದ ಪುರಪಿತೃಗಳು ಪರಿಹಾರ ಇಲ್ಲೇ ಘೋಷಿಸಿ ಒಳಗೆ ಹೋಗುವಂತೆ ಪಟ್ಟು ಹಿಡಿದರು. ಈ ಹಂತದಲ್ಲಿ ಶಾಸಕ ಅಲ್ಲಂಪ್ರಭು ಪಾಟೀಲರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ದೂರವಾಣಿ ಕರೆ ಮಾಡಿ ಸಂಪರ್ಕಿಸಿ ವಿಷಯ ವಿವರಿಸಿದರಲ್ಲದೆ ಸದಸ್ಯರಿಗೆ ಸದರಿ ವಿಚಾರ ಹೇಳುತ್ತ ಸಮಸ್ಯೆಗೆ ಪರಿಹಾರ ಹುಡುಕುವ ವಿಚಾರದಲ್ಲಿ ಸಚಿವರೂ ಆಸಕ್ತರಿದ್ದಾರೆ. ಸಭೆ ನಡೆಸಿ ಪರಿಹಾರ ಹುಡುಕೋಣವೆಂದು ಮನವಿ ಮಾಡಿದಾಗ ಪುರಪಿತೃಗಳು ಪ್ರತಿಭಟನೆ ಕೈಬಿಟ್ಟರು.
ಹೆಲ್ತ್ ಆಫೀಸರ್ ಅಮಾನತು ನಿರ್ಣಯ ಪ್ರಕಟಿಸಿದ ಮೇಯರ್: ಸಭೆಯಲ್ಲಿನ ಚರ್ಚೆಗಳನ್ನು ಆಲಿಸಿದ ಮೇಯರ್ ವಿಶಾಲ ಧರ್ಗಿ ಶ್ವಾನ ಸಮಸ್ಯೆಗೆ ಕಾರಣರಾಗಿರುವ ಪಾಲಿಕೆ ಆರೋಗ್ಯಾಧಿಕಾರಿ ಡಾ. ವಿವೇಕಾನಂದ ಇವರನ್ನು ಸೇವೆಯಿಂದ ಅಮಾನತು ಮಾಡುವ ಬಗ್ಗೆ ನಿರ್ಣಯ ಪ್ರಕಟಿಸಿದರು. ಜೊತೆಗೇ ಶ್ವಾನ ಕಡಿತಕ್ಕೊಳಗಾಗಿರುವ ಬಾಲಕಿಗೆ 5 ಲಕ್ಷ ರು ಪರಿಹಾರ, ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದರು. ಆದರೆ ಮೇಯರ್ ತಮ್ಮ ಮಾತಲ್ಲಿ ಪರಿಸರ ಇಂಜಿನಿಯರ್ ಮುನಾಫ್ ಪಟೇಲ್ ವಿರುದ್ಧದ ಶಿಸ್ತು ಕ್ರಮದ ಬಗ್ಗೆ ಚಕಾರ ಎತ್ತಲಿಲ್ಲ!
ಆಯುಕ್ತ- ಹೆಲ್ತ್ ಆಫೀಸರ್ ಭಿನ್ನಮತ ಬಹಿರಂಗ: ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ. ವಿವೇಕಾನಂದ ಹಾಗೂ ಆಯುಕ್ತ ಭುವನೇಶ ಪಾಟೀಲ್ ನಡುವಿನ ಶೀತಲ ಸಮರ ಬಹಿರಂಗವಾಯ್ತು. ಶ್ವಾನ ಕಾಟ ಹೇಗೆ ಮಾಡಲಿ, ನನಗೇ ಸರಿಯಾಗಿ ಸವಲತ್ತಿಲ್ಲ, ಸಿಪಾಯಿ ಕೂಡಾ ನನ್ನ ಜೊತೆಗಿಲ್ಲ. ಎಸ್ಸೈಗಳು ನನ್ನ ಮಾತು ಕೇಳೋದಿಲ್ಲವೆಂದು ಆರೋಗ್ಯಾಧಿಕಾರಿ ವಿವೇಕಾನಂದ ಅಸಹಾಯಕತೆ ತೋಡಿಕೊಂಡಾಗ ಗರಂ ಆದ ಆಯುಕ್ತ ಈಗ ಶ್ವಾನ ಸಮಸ್ಯೆ ಪ್ರಸ್ತಾಪವಾದಾಗ ಇದನ್ನೆಲ್ಲ ಹೇಳ್ತೀರಾ? ಮೊದಲೇ ಯಾಕೆ ಹೇಳಲಿಲ್ಲ? ರೈಟಿಂಗ್‌ನಲ್ಲಿ ಯಾಕೆ ಕೊಡಲಿಲ್ಲ? ಎಂದು ಗರಂ ಆದರು. ಒಂದು ಹಂತದಲ್ಲಿ ಆಯುಕ್ತರು ಡಾ. ವಿವೇಕಾನಂದರ ವಿರುದ್ಧವೇ ವಾಗ್ದಾಳಿ ನಡೆಸಿದರಲ್ಲದೆ ಇವರು ಫೀಲ್ಡ್ ವಿಸಿಟ್ ಮಾಡದೆ 300 ಟ್ರೇಡ್ ಲೈಸನ್ಸ್ ನೀಡಿರೋದು ಗಮನಕ್ಕೆ ಬಂದಾಗ ಆ ಚಾರ್ಜ್ ಕಿತ್ತುಕೊಂಡಿದ್ದೆ. ಇವರನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಾಗ ಇವರು ತಕ್ಷಣ ಕೆಎಟಿಗೆ ಹೋಗಿ ನನ್ನ ವಿರುದ್ಧವೇ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರೆಂದು ಸಿಡಿಮಿಡಿಗೊಂಡರು. ಡಾ. ವಿವೇಕಾನಂದ ಕೆಎಟಿ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಸಭೆಗೆ ಹೇಳಬೇಕೆನ್ನುವಷ್ಟರಲ್ಲೇ ಆಯುಕ್ತ ತಾವೇ ಮುಂದಾಗಿ ನೀವಿಲ್ಲಿ ನಿಲ್ಲಬೇಡಿ, ಹೋಗಿ ಎಂದು ಹೆಲ್ತ್ ಆಫೀಸರ್‌ಗೆ ಜಬರಿಸಿದರಲ್ಲದೆ ಕೆಲಸ ಮಾಡಿ ಎಂದರೆ ಸಬೂಬು ಹೇಳುತ್ತಾರೆ. ಇಂತಹವರಿಂದಲೇ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಗೊಣಗಿದ ಪ್ರಸಂಗ ನಡೆಯಿತು.