- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುರ್ತು ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ । ದಂತ,ನೇತ್ರ,ಚರ್ಮ ತಪಾಸಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಪಡೆದಿರಬೇಕು ಎಂದು ರೆಡ್ ಕ್ರಾಸ್ ಸಂಸ್ಥೆ ರಾಷ್ಟೀಯ ಮಾಸ್ಟರ್ ತರಬೇತಿದಾರ ಶಿವಮೊಗ್ಗದ ಡಾ.ಕುಮಾರ್ ಸಲಹೆ ನೀಡಿದರು.
ಗುರುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಯನ್ಸ್ ಕ್ಲಬ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಘಟಕ, ಹಾಗೂ ಇನ್ನರ್ ವೀಲ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ವಿಧಾನ ಬಗ್ಗೆ ಮಾಹಿತಿ ಹಾಗೂ ದಂತ, ನೇತ್ರ, ಚರ್ಮ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಶಿಕ್ಷಣ ವ್ಯವಸ್ಥೆ ಯಲ್ಲಿ ಯಾವುದೇ ಪಠ್ಯದಲ್ಲಿ ತುರ್ತು ಪ್ರಥಮ ಚಿಕಿತ್ಸೆ ಯಿಂದ ಜೀವ ಉಳಿಸುವ ಮಾಹಿತಿ ಇಲ್ಲ. ಯಾವುದೇ ರಸ್ತೆ ಅಪಘಾತ ವಾದಾಗ ಜೀವ ಉಳಿಸಲು ಮೊದಲ 1 ಗಂಟೆ ಅಮೂಲ್ಯವಾಗಿದೆ ಎಂದರು.ಪ್ರಪಂಚದ ಎಲ್ಲಾ ದೇಶ ಕ್ಕಿಂತ ಭಾರತ ದೇಶದಲ್ಲಿ ಹೃದಯಾಘಾತದ ಹೆಚ್ಚಿದೆ. ಹೃದಯಾಘಾತವಾದಾಗ ಪ್ರಥಮ ಚಿಕಿತ್ಸೆ ಬಹಳ ಮುಖ್ಯ. ಪ್ರಥಮ ಚಿಕಿತ್ಸೆಯಿಂದ ಜೀವ ಉಳಿಸಲು ಸಾಧ್ಯ. ಹಾವು ಕಚ್ಚಿದಾಗ, ಬೆಂಕಿ ಬಿದ್ದಾಗ, ರಸ್ತೆ ಅಪಘಾತ ವಾದಾಗ ಹತ್ತಿರ ಇದ್ದವರು ಏನು ಮಾಡಬೇಕು ? ಎಂಬುದನ್ನು ಎಲ್ಲರೂ ತಿಳಿದಿರಬೇಕು. ಜನ ಮಾನವೀಯ ಗುಣ ಮರೆತಿದ್ದು ಪ್ರತಿಯೊಬ್ಬರೂ ಅಪಘಾತ ಆದವರ ಹತ್ತಿರ ಹೋಗಲು ಭಯ ಪಡುತ್ತಾರೆ. ಪ್ರಥಮ ಚಿಕಿತ್ಸೆಗಿಂತ ಮೊದಲು ಪೋಟೋ, ವೀಡಿಯೋ ಮಾಡುವುದರಲ್ಲಿ ತಲ್ಲೀನರಾಗುತ್ತಾರೆ ಎಂದು ವಿಷಾದಿಸಿದರು.
ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರ ಮಾತನಾಡಿ, ಇಂದು ಲಯನ್ಸ್ ಕ್ಲಬ್ 200 ದೇಶಗಳಲ್ಲಿ ಸಕ್ರಿಯ ವಾಗಿ ಕೆಲಸ ಮಾಡುತ್ತಿದೆ.312 ಡಿ. ಲಯನ್ಸ್ ಕ್ಲಬ್ ನಲ್ಲಿ 121 ಲಯನ್ಸ್ ಕ್ಲಬ್ ಗಳಿದ್ದು 4 ಜಿಲ್ಲೆಯನ್ನೊಳಗೊಂಡಿದೆ.4450 ಸದಸ್ಯರಿದ್ದಾರೆ. ಸೇವೆಯೇ ಲಯನ್ಸ್ ಕ್ಲಬ್ ನ ಮುಖ್ಯ ಉದ್ದೇಶ. ಆರ್ಥಿಕವಾಗಿ ಹಿಂದುಳಿದವರಿಗೆ ಲಯನ್ಸ್ ಕ್ಲಬ್ ಸಹಾಯ ನೀಡುತ್ತಾ ಬಂದಿದೆ. ಯಾವುದೇ ಅಪಘಾತ, ಅನಾಹುತ ಆದಾಗ ಮೊದಲು ಮಾನವೀಯ ಗುಣ ಬೆಳೆಸಿಕೊಂಡು ಪ್ರಥಮ ಚಿಕಿತ್ಸೆ ನೀಡಲು ಮುಂದಾಗಬೇಕು. ಪೋಟೋ, ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದೇ ಮುಖ್ಯವಾಗಬಾರದು ಎಂದರು.ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ಪ್ರಂಪಚದಲ್ಲಿ 18 ನೇ ಶತಮಾನದಲ್ಲೇ ಆರಂಭವಾದ ರೆಡ್ ಕ್ರಾಸ್ 1920 ರಲ್ಲಿ ಭಾರತ ದೇಶದಲ್ಲಿ ಪ್ರಾರಂಭವಾಯಿತು. ರೆಡ್ ಕ್ರಾಸ್ ಸಂಸ್ಥೆಯ ತರಬೇತಿದಾರ ಡಾ.ಕುಮಾರ್ ಹಲವು ವರ್ಷಗಳಿಂದಲೂ ತುರ್ತು ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಅವರ ಮಾಹಿತಿ ಉಪಯುಕ್ತವಾಗಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು. ಕಾಲೇಜಿನ ರೆಡ್ ಕ್ರಾಸ್ ಘಟಕದ ನಿರ್ದೇಶಕಿ ಬಿ.ಟಿ.ರೂಪ ಮಾತನಾಡಿದರು.
ಅತಿಥಿಗಳಾಗಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಯ್ಯ ಆಚಾರ್, ವೈದ್ಯ ಡಾ.ಮಹೇಶ್ ಭಂಡಾರಿ, ದಂತ ವೈದ್ಯೆ ಡಾ.ಸ್ವಪ್ನಾಲಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಶ್ಮಿ ದಯಾನಂದ್, ಕಾಲೇಜಿನ ಐಕ್ಯೂಎಸಿ ವಿಭಾಗದ ಸಂಚಾಲಕ ಪ್ರೊ. ಪ್ರಸಾದ್, ಎಸ್.ಎಲ್.ವಿ.ಆಪ್ಟಿಕಲ್ಸ್ ನ ನೇತ್ರ ಪರೀಕ್ಷಿಕಿ ಯಶಸ್ವಿನಿ ಇದ್ದರು. ನಂತರ ರೆಡ್ ಕ್ರಾಸ್ ಸಂಸ್ಥೆ ಮಾಸ್ಟರ್ ಟ್ರೈನರ್ ಡಾ.ಕುಮಾರ್ ಸ್ಲೈಡ್ ಶೋ ಮೂಲಕ ತುರ್ತು ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಉಚಿತವಾಗಿ ದಂತ, ನೇತ್ರ,ಚರ್ಮದ ಪರೀಕ್ಷೆ ನಡೆಸಲಾಯಿತು.