ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಶಾಸಕ ನಾಡಗೌಡ ಸೂಚನೆ

KannadaprabhaNewsNetwork |  
Published : Dec 29, 2023, 01:30 AM IST
ತಾಳಿಕೋಟೆ  1 | Kannada Prabha

ಸಾರಾಂಶ

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್‌ಪೋರ್ಸ್‌ ಸಭೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮುದ್ದೇಬಿಹಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈಗಿನಿಂದಲೇ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹೇಳಿದರು.

ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಂಬಂಧಿತ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್‌ ಪೋರ್ಸ್‌ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಪರಸ್ಥಿತಿಯ ಮಾಹಿತಿ ಪಡೆದಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಮಾರ್ಚ್ ಅಂತ್ಯದ ವರೆಗೆ ಕುಡಿಯುವ ನೀರಿನ ತೊಂದರೆ ಇಲ್ಲ ಎಂಬುದು ಕಂಡು ಬಂದಿದೆ. ಕೆರೆ ಅವಲಂಬಿತ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗುವುದಿಲ್ಲ. ತಾಳಿಕೋಟೆ, ಮುದ್ದೇಬಿಹಾಳ, ನಾಲತವಾಡ ಪಟ್ಟಣಗಳಲ್ಲೂ ಮಾರ್ಚ್ ಅಂತ್ಯದವರೆಗೆ ನೀರಿನ ತೊಂದರೆ ಇಲ್ಲ. ಮಾರ್ಚ್ ನಂತರ ಕುಡಿಯುವ ನೀರಿನ ಸರಬರಾಜಿನ ದಿನಗಳನ್ನು ವಿಂಗಡಿಸುವ ಕಾರ್ಯ ಮಾಡಿದರೆ ಯಾವುದೇ ತೊಂದರೆ ಆಗದು ಎಂಬ ಮಾಹಿತಿ ಸಿಕ್ಕಿದೆ. ಅಂದಿನ ಪರಿಸ್ಥಿತಿ ಅನುಗುಣ ಕ್ರಮ ಕೈಗೊಳ್ಳಲಾಗುವುದು ಎಂದರು.

ನೀರು ಸರಬರಾಜು ಮಾಡುವ ಪಂಪ್‌ ಮತ್ತು ಯಂತ್ರಗಳನ್ನು ದುರಸ್ಥಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೊಳವೆಬಾವಿಗಳ ದುರಸ್ತಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಸೂಚಿಸಿದ್ದೇನೆ. ಇವುಗಳ ಸರಿಯಾಗಿ ಉಸ್ತುವಾರಿ ಮಾಡದ ಗುತ್ತಿಗೆದಾರರಿಗೆ ಕೂಡಲೇ ನೋಟಿಸ್‌ ನೀಡಿ ಅವುಗಳನ್ನು ದುರಸ್ತಿ ಮಾಡಿ ಗ್ರಾ.ಪಂ ಸುಪರ್ದಿಗೆ ಪಡೆಯಲು ಸೂಚಿಸಿದ್ದೇನೆ. ಮುಂದಾಲೋಚನೆಯಾಗಿ ಕುಡಿಯುವ ನೀರಿನ ಟ್ಯಾಂಕರ ಒದಗಿಸಲು ಟೆಂಡರ್‌ ಕರೆಯಲಾಗಿದೆ. ಆದರೆ, ಇದುವರೆಗೂ ಯಾರೂ ಟೆಂಡರ್ ಸಲ್ಲಿಸಿಲ್ಲ. ಆದ್ದರಿಂದ ಗ್ರಾ.ಪಂ ಮಟ್ಟದಲ್ಲಿಯೇ ಟ್ಯಾಂಕರ್ ವ್ಯವಸ್ಥೆ ಮಾಡಿ ಇಟ್ಟುಕೊಳ್ಳಿ ಎಂದು ತಹಸೀಲ್ದಾರರುಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

ಜಾನುವಾರುಗಳಿಗೆ ಮೇವಿಗೆ ಫೆಬ್ರುವರಿ ಅಂತ್ಯದವರೆಗೂ ಯಾವುದೇ ತೊಂದರೆಯಿಲ್ಲ. ನಂತರ ಮೇವಿನ ತೊಂದರೆ ಕಂಡುಬಂದಲ್ಲಿ ಮೇವು ಬ್ಯಾಂಕ್ ಪ್ರಾರಂಬಿಸಲು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರೆಗಳನ್ನು ತುಂಬಿಸಿರುವುದು ಕುಡಿಯುವ ನೀರಿಗಾಗಿ, ಅದನ್ನು ಹೊಲಗದ್ದೆಗಳಿಗೆ ಪಂಪ ಸೆಟ್‌ ಹಚ್ಚಿ ನೀರು ಬಿಟ್ಟುಕೊಳ್ಳಬಾರದು ಎಂದು ರೈತರಲ್ಲಿ ಮನವಿ ಮಾಡುತ್ತೇನೆ. ಮುಂದೆ ಕುಡಿಯುವ ನೀರಿನ ತೊಂದರೆಯಾದರೆ ಅದಕ್ಕೆ ನೀವೆ ಹೊಣೆಗಾರರಾಗುತ್ತೀರಿ. ಇಂತಹ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ತಹಸೀಲ್ದಾರ್‌ರಿಗೆ ಸೂಚನೆ ನೀಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಾಳಿಕೋಟೆ ತಾಲೂಕಾಡಳಿತ ಬಳಿ ₹೩೯ ಲಕ್ಷ, ಮುದ್ದೇಬಿಹಾಳಕ್ಕೆ ₹೨೫ ಲಕ್ಷ, ನಿಡಗುಂದಿಗೆ ₹೨೨ ಲಕ್ಷ ಇದೆ ಎಂದರು.

ಈ ವೇಳೆ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಪ್ರಭುಗೌಡ ಮದರಕಲ್ಲ, ಸುರೇಶ ನಾಡಗೌಡ, ಶರಣುಧನಿ ದೇಶಮುಖ, ಸಿದ್ದನಗೌಡ ಪಾಟೀಲ, ತಹಸೀಲ್ದಾರ ಕೀರ್ತಿ ಚಾಲಕ, ತಾಳಿಕೋಟೆ ತಾಪಂ ಇಒ ಬಸನಗೌಡ ಬಿರಾದಾರ, ಮುದ್ದೇಬಿಹಾಳ ತಾಪಂ ಇಒ ವಿರೇಶ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿಗಾಗಿ ಮಕ್ಕಳಿಂದ ಪತ್ರ: ₹490 ಕೋಟಿ ಕೊಟ್ಟ ಸಿಎಂ!
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ : ಬಿಯರ್‌, ವೈನ್‌ ಅಗ್ಗ?