ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸಸಿ ನೆಟ್ಟು ಬೆಳೆಸುವುದಕ್ಕೆ ಎಲ್ಲೆಲ್ಲಿ ಸೂಕ್ತ ಸ್ಥಳಾವಕಾಶವಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಬಿಬಿಎಂಪಿಯು ಸ್ಯಾಟಲೈಟ್ ಮೊರೆ ಹೋಗಿದ್ದು, ಅದಕ್ಕಾಗಿ ‘ಮ್ಯಾಪಥಾನ’ ಎಂಬ ಯೋಜನೆ ರೂಪಿಸಿದೆ.
ಬೆಂಗಳೂರಿನಲ್ಲಿ ಸಸಿ ನೆಟ್ಟು ಅರಣೀಕರಣ ವೃದ್ಧಿಸುವುದು ದೊಡ್ಡ ಸವಾಲಿನ ಸಂಗತಿಯಾಗಿದೆ. ನಗರೀಕರಣದ ಭರಾಟೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಯಾವ ಪ್ರದೇಶದಲ್ಲಿ ಎಷ್ಟು ಸಸಿ ನೆಟ್ಟು ಬೆಳೆಸಬಹುದು ಎಂಬ ಅಂದಾಜು ಸಹ ಬಿಬಿಎಂಪಿಗೆ ಲಭ್ಯವಿಲ್ಲ.
ವೈಜ್ಞಾನಿಕವಾಗಿ ಸಸಿ ನೆಟ್ಟು ಬೆಳೆಸುವ ಉದ್ದೇಶದಿಂದ ನಗರದ ಯಾವ ರಸ್ತೆ, ಯಾವ ಕೆರೆ ಆವರಣ, ಮೈದಾನ, ಸರ್ಕಾರಿ ಆಸ್ತಿಯಲ್ಲಿ ಎಷ್ಟು ಖಾಲಿ ಜಾಗ ಇದೆ. ಎಷ್ಟು ಸಸಿ ನೆಟ್ಟು ಬೆಳಸಬಹುದು ಎಂಬುದನ್ನು ಲೆಕ್ಕಚಾರ ಹಾಕುವುದಕ್ಕಾಗಿ ಇದೀಗ ಬಿಬಿಎಂಪಿಯು ಡಬ್ಲ್ಯೂಆರ್‌ಐ ಎಂಬ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಮ್ಯಾಪಥಾನ್ ಎಂಬ ಯೋಜನೆಯನ್ನು ಆರಂಭಿಸುತ್ತಿದೆ.
8 ವಾರ್ಡ್‌ನಲ್ಲಿ ಪ್ರಾಯೋಗಿಕ ಚಾಲನೆ:
ಬೊಮ್ಮನಹಳ್ಳಿ ವಲಯದ ಎಂಟು ವಾರ್ಡ್‌ಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಸ್ಯಾಟಲೈಟ್ ಚಿತ್ರಗಳನ್ನು ಬಳಕೆ ಮಾಡಿಕೊಂಡು ಎಲ್ಲೆಲ್ಲಿ ಎಷ್ಟು ಸಸಿಗಳನ್ನು ನೆಟ್ಟು ಬೆಳಸಬಹುದು ಎಂಬ ಸರ್ವೇ ನಡೆಸಲಾಗಿದೆ. ಒಟ್ಟು 7 ಸಾವಿರ ಸಸಿಗಳನ್ನು ನೆಟ್ಟು ಬೆಳೆಸುವುದಕ್ಕೆ ಸ್ಥಳ ಇದೆ ಎಂದು ಗುರುತಿಸಲಾಗಿದೆ.
ಪರಿಶೀಲನೆ:
ಪ್ರಾಯೋಗಿಕವಾಗಿ ಖಾಸಗಿ ಸಂಸ್ಥೆ ಲೆಕ್ಕಚಾರ ಹಾಕಿ ಗುರುತಿಸಿದ ಸ್ಥಳಗಳನ್ನು ಬಿಬಿಎಂಪಿ ಅರಣ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಲಿದೆ. ಪರಿಶೀಲನೆ ವೇಳೆ ಸಂಸ್ಥೆ ಹಾಕಿರುವ ಲೆಕ್ಕಚಾರ ದೃಢವಾಗಿದ್ದರೆ, ಇಡೀ ಬೆಂಗಳೂರನ್ನು ಸರ್ವೆ ನಡೆಸುವುದಕ್ಕೆ ಅನುಮತಿ ನೀಡಲಿದೆ.
ಯಾವುದೇ ವೆಚ್ಚ ಇಲ್ಲ:
ಪ್ರಾಯೋಗಿಕ ಸರ್ವೆ ಯಶಸ್ವಿಯಾದರೆ ‘ಮ್ಯಾಪಥಾನ’ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಈ ಯೋಜನೆಗೆ ಬಿಬಿಎಂಪಿಯಿಂದ ನಯಾಪೈಸೆ ವೆಚ್ಚ ಮಾಡಲಾಗುತ್ತಿಲ್ಲ. ಖಾಸಗಿ ಸಂಸ್ಥೆಯೇ ಸಂಪೂರ್ಣ ವೆಚ್ಚ ಭರಿಸಿ ಸರ್ವೆ ಮಾಡಿ ವರದಿಯನ್ನು ಬಿಬಿಎಂಪಿಗೆ ನೀಡಲಿದೆ. ಈ ವರದಿ ಆಧಾರಿಸಿ ಬಿಬಿಎಂಪಿ ಸಸಿ ನೆಟ್ಟು ಬೆಳೆಸುವ ಯೋಜನೆಯನ್ನು ರೂಪಿಸಿಕೊಳ್ಳಬಹುದಾಗಿದೆ.ನಗರ ದೊಡ್ಡದಾಗಿ ಬೆಳೆದಿರುವುದರಿಂದ ಎಲ್ಲಿ ಸಸಿ ನೆಟ್ಟು ಬೆಳೆಸಬೇಕು. ಯಾವ ಪ್ರದೇಶದಲ್ಲಿ ಅರಣೀಕರಣ ಅಗತ್ಯವಿದೆ ಎಂಬುದನ್ನು ಶೀಘ್ರವಾಗಿ ತಿಳಿಯುವುದಕ್ಕೆ ಮ್ಯಾಪಥಾನ್ ಯೋಜನೆಗೆ ಸಹಕಾರಿಯಾಗಲಿದೆ. ಇಡೀ ನಗರದ ಸರ್ವೆ ಕಾರ್ಯಕ್ಕೆ 60 ದಿನ ಸಾಕಾಗಲಿದೆ.
ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ ಅರಣ್ಯ ವಿಭಾಗ.10 ವೃಕ್ಷ ವನ ನಿರ್ಮಾಣ:
ಬಿಬಿಎಂಪಿ ಅರಣ್ಯ ವಿಭಾಗವೂ ಮುಂಬರುವ ಮಳೆಗಾಲದಲ್ಲಿ 1.30 ಕೋಟಿ ಸಸಿ ನೆಟ್ಟು ಬೆಳೆಸುವುದಕ್ಕೆ ಯೋಜನೆ ರೂಪಿಸಿಕೊಂಡಿದೆ. ಜತೆಗೆ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ತಲಾ ಐದು ವೃಕ್ಷ ವನಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಯೋಜನೆ ಹಾಕಿಕೊಂಡಿದೆ.
ಈ ವೃಕ್ಷ ವನಗಳನ್ನು ಅರಣ್ಯದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ನಿರ್ಧರಿಸಲಾಗಿದೆ. ಅರಣ್ಯ ಜಾತಿಯ ಮರಗಳು, ಔಷಧಿ ಮರಗಳನ್ನು ನೆಟ್ಟು ಬೆಳೆಸಲಾಗುತ್ತದೆ. 3 ಸಾವಿರದಿಂದ 6 ಸಾವಿರ ಚದರ ಅಡಿಯಷ್ಟು ವಿಸ್ತೀರ್ಣವನ್ನು ವೃಕ್ಷ ವನಗಳು ಹೊಂದಿರಲಿವೆ. 15ನೇ ಹಣಕಾಸು ಯೋಜನೆಯಡಿ ₹10 ಕೋಟಿ ಅನುದಾನ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.