ಸಾರಾಂಶ
‘ಕಬ್ಬು ಎಫ್‌ಆರ್‌ಪಿ, ಸಕ್ಕರೆ ಎಂಎಸ್‌ಪಿ ದರ ಹೆಚ್ಚಳಕ್ಕಾಗಿ ಕೇಂದ್ರಕ್ಕೆ ನಿಯೋಗ ಒಯ್ಯುವ ಜತೆಗೆ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ತೂಕ, ರಿಕವರಿಯಲ್ಲಿ ಆಗುತ್ತಿರುವ ಮೋಸ, ಹಣ ಬಾಕಿ ಉಳಿಸಿಕೊಂಡಿರುವುದು ಸೇರಿದಂತೆ ಎಲ್ಲಾ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ’ - ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ‘ಕಬ್ಬು ಎಫ್‌ಆರ್‌ಪಿ ಹಾಗೂ ಸಕ್ಕರೆ ಎಂಎಸ್‌ಪಿ ದರ ಹೆಚ್ಚಳಕ್ಕಾಗಿ ಕೇಂದ್ರಕ್ಕೆ ನಿಯೋಗ ಒಯ್ಯುವ ಜತೆಗೆ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ತೂಕ, ರಿಕವರಿಯಲ್ಲಿ ಆಗುತ್ತಿರುವ ಮೋಸ, ಕಬ್ಬು ಬೆಳೆಗಾರರಿಗೆ ಹಣ ಬಾಕಿ ಉಳಿಸಿಕೊಂಡಿರುವುದು ಸೇರಿದಂತೆ ಎಲ್ಲಾ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಮುಖಂಡರಿಗೆ ಭರವಸೆ ನೀಡಿದ್ದಾರೆ.
ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ನಿರತರಾಗಿದ್ದ ರೈತರೊಂದಿಗೆ ಶುಕ್ರವಾರ ಪ್ರತ್ಯೇಕ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದರ ಹೆಚ್ಚಳ ಹೊರತಾಗಿಯೂ ರೈತರು ಎದುರಿಸುತ್ತಿರುವ ಇತರೆ ಸಮಸ್ಯೆಗಳ ಬಗ್ಗೆ ಆಲಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಎಂಎಸ್ಪಿ ಹೆಚ್ಚಳ, ಕಬ್ಬು ಎಫ್‌ಆರ್‌ಪಿ ಹೆಚ್ಚಳ, ತೈಲ ಕಂಪನಿಗಳಿಗೆ ಹೆಚ್ಚುವರಿ ಎಥೆನಾಲ್ ಪೂರೈಕೆಗೆ ಅವಕಾಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ಪ್ರಧಾನಮಂತ್ರಿಗೆ ಬರೆಯಲಾಗಿದೆ. ಜತೆಗೆ ರಾಜ್ಯ ಮಟ್ಟದಲ್ಲಿನ ಸಮಸ್ಯೆಗಳನ್ನು ರೈತರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕೇಂದ್ರದ ಹಂತದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಕೇಂದ್ರಕ್ಕೆ ನಿಯೋಗ ಒಯ್ಯಲಾಗುವುದು ಎಂದು ಭರವಸೆ ನೀಡಿದರು.
ಸಮಸ್ಯೆಗಳನ್ನು ಬಿಚ್ಚಿಟ್ಟ ರೈತರು:
ಸಭೆಯಲ್ಲಿ ವಿವಿಧ ರೈತ ಮುಖಂಡರು ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಹಾಗೂ ಸಂಕಷ್ಟಗಳ ಬಗ್ಗೆ ಬಿಚ್ಚಿಟ್ಟರು.
ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್ಆರ್‌ಪಿ ದರ ವೈಜ್ಞಾನಿಕವಾಗಿಲ್ಲ. ಇದನ್ನು ರಾಜ್ಯ ಸರ್ಕಾರ ಪ್ರಶ್ನಿಸಿ ನ್ಯಾಯ ಒದಗಿಸಬೇಕು. ಜತೆಗೆ ಸಕ್ಕರೆ ಕಾರ್ಖಾನೆಗಳು ಇಳುವರಿ ರಿಕವರಿ ಕಡಿಮೆ ತೋರಿಸುತ್ತಿವೆ. ಇದನ್ನು ತಪ್ಪಿಸಲು ಪ್ರತಿ ಕಾರ್ಖಾನೆ ಎದುರು ಸರ್ಕಾರದ ವತಿಯಿಂದ ಪ್ರಯೋಗಾಲಯ ತೆರೆಯಬೇಕು. ಜತೆಗೆ ತೂಕದಲ್ಲಿ ಸಿಕ್ಕಾಪಟ್ಟೆ ಮೋಸ ನಡೆಯುತ್ತಿದೆ. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ಇನ್ನು ಶೇ. 11.25 ರಿಕವರಿ ಇರುವ ಕಬ್ಬಿಗೆ ಪ್ರತಿ ಟನ್‌ಗೆ ಕಟಾವು ವೆಚ್ಚ ಹಾಗೂ ಸಾಗಣೆ ವೆಚ್ಚ ಹೊರತುಪಡಿಸಿ 3,500 ರು. ನಿಗದಿ ಮಾಡಬೇಕು. ಕಾರ್ಖಾನೆಗಳು ನೀಡದಿದ್ದರೆ ಸರ್ಕಾರದಿಂದಲೇ ಭರಿಸಿ ಆದರೂ ಸೂಕ್ತ ಬೆಲೆ ನೀಡಬೇಕು ಎಂದು ಒತ್ತಾಯ ಮಾಡಿದರು.
ಬಾಗಲಕೋಟೆಯಲ್ಲಿ ಕಾರ್ಖಾನೆಯೊಂದು ಹಿಂದಿನ ವರ್ಷದ ಬಾಕಿಯನ್ನೇ ರೈತರಿಗೆ ನೀಡಿಲ್ಲ. ಈ ರೀತಿ ಹಲವು ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತಿವೆ. ಇವುಗಳನ್ನು ನಿಯಂತ್ರಿಸಿ ಸರ್ಕಾರ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ಪ್ರತ್ಯೇಕ ಸಭೆ- ಸಿಎಂ:
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಎದುರಿಸುತ್ತಿರುವ ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.
ಇದೇ ವೇಳೆ ಸಕ್ಕರೆಗೆ ಎಂಎಸ್‌ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರ. ಇದೇ ರೀತಿ ಕಬ್ಬಿಗೆ ಎಫ್ಆರ್‌ಪಿ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಎಥೆನಾಲ್ ಹಂಚಿಕೆ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಸಕ್ಕರೆ ರಫ್ತು ಮಿತಿ ನಿಗದಿಪಡಿಸುವವರು ಸಹ ಕೇಂದ್ರ ಸರ್ಕಾರ. ಅವರಿಂದ ಆಗಿರುವ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೇಳಿದರೆ ಹೇಗೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಆದರೂ ನಿಮ್ಮ ಜತೆಗೆ ನಾವು ಇರುತ್ತೇವೆ. ನಿಮಗೆ ನ್ಯಾಯ ಒದಗಿಸಲು ಕೇಂದ್ರವನ್ನು ಒತ್ತಾಯಿಸುತ್ತೇವೆ. ಜತೆಗೆ ಪ್ರತಿ ಟನ್‌ಗೆ ರಾಜ್ಯದಿಂದ 50 ರು. ಹಾಗೂ ಸಕ್ಕರೆ ಕಾರ್ಖಾನೆಗಳಿಂದ 50 ರು. ಸೇರಿ 100 ರು. ಹೆಚ್ಚುವರಿ ನೀಡುತ್ತೇವೆ. ಹೀಗಾಗಿ ತಕ್ಷಣವೇ ಹೋರಾಟ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಸಿಎಂಗೆ ಕಾರ್ಖಾನಗಳಿಂದಲೇ ಬೇಡಿಕೆ ಪಟ್ಟಿ
‘ರಾಜ್ಯ ಸರ್ಕಾರವು ಕಬ್ಬಿನ ಎಫ್‌ಆರ್‌ಪಿ, ಸಕ್ಕರೆಯ ಎಂಎಸ್‌ಪಿ ಹೆಚ್ಚಳ ಮಾಡಲು ಕೇಂದ್ರವನ್ನು ಒತ್ತಾಯಿಸಬೇಕು. ಜತೆಗೆ ರಾಜ್ಯದಲ್ಲಿ ಕಾರ್ಖಾನೆಗಳು ಉತ್ಪಾದಿಸುವ ವಿದ್ಯುತ್‌ಗೆ ಪ್ರತಿ ಯುನಿಟ್‌ಗೆ 6 ರು. ನೀಡಬೇಕು. ಪ್ರತಿ ಯುನಿಟ್‌ಗೆ ವಿಧಿಸುತ್ತಿರುವ 60 ಪೈಸೆ ತೆರಿಗೆ ಹಿಂಪಡೆಯಬೇಕು’ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರದ ಮುಂದೆ ಸಾಲು-ಸಾಲು ಬೇಡಿಕೆಗಳನ್ನು ಇಟ್ಟಿದ್ದು, ಈ ಸಂಬಂಧ ಪ್ರತ್ಯೇಕ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಅಲ್ಲದೆ, ಕೇಂದ್ರದಿಂದ ಕಬ್ಬು ಬೆಳೆಗಾರರು, ಕಾರ್ಖಾನೆಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಲು ಇಬ್ಬರನ್ನೂ ಒಳಗೊಂಡ ನಿಯೋಗವನ್ನು ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದಾರೆ.
ಕಬ್ಬು ಬೆಳೆಗಾರರು ಕಬ್ಬು ಬೆಲೆ ಹೆಚ್ಚಳಕ್ಕಾಗಿ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದರು.
ಈ ವೇಳೆ ಕಾರ್ಖಾನೆ ಮಾಲೀಕರ ಪರ ಮಾತನಾಡಿದ ಮುರುಗೇಶ್ ನಿರಾಣಿ, ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್‌ಗೆ 60 ಪೈಸೆ ತೆರಿಗೆ ವಿಧಿಸಲಾಗುತ್ತಿದೆ. ಜತೆಗೆ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದ ಹಲವು ವರ್ಷದಿಂದ ಪರಿಷ್ಕರಣೆಯಾಗಿಲ್ಲ. ಮಹಾರಾಷ್ಟ್ರದಲ್ಲಿ ಪ್ರತಿ ಯುನಿಟ್‌ಗೆ 6 ರು. ಪಾವತಿಸುತ್ತಿದ್ದರೆ ರಾಜ್ಯದಲ್ಲಿ 3 ರು. ಮಾತ್ರ ಪಾವತಿಸಲಾಗುತ್ತಿದೆ. ಇದನ್ನು ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.
ಜತೆಗೆ ಸಕ್ಕರೆ ಕಾರ್ಖಾನೆಗಳ ನಡುವಿನ ಅಂತರ ಕನಿಷ್ಠ 25 ಕಿ.ಮೀ. ನಿಗದಿಪಡಿಸಬೇಕು. ಏವಿಯೇಷನ್ ಇಂಧನಕ್ಕೆ ಎಥೆನಾಲ್ ಮಿಶ್ರಣ ಅನುಮತಿಯನ್ನು ಆದಷ್ಟು ಬೇಗನೆ ನೀಡುವಂತೆ ಪ್ರಧಾನಿ ಅವರಿಗೆ ಮನವಿ ಮಾಡಬೇಕು. ಪ್ರಸ್ತುತ ರೈತರಿಗೆ ಕೇಂದ್ರ ನಿಗದಿ ಮಾಡಿರುವ ಎಫ್ಆರ್‌ಪಿ ದರ ಮಾತ್ರ ನೀಡಲಾಗುವುದು. ಹೆಚ್ಚುವರಿ ಆದಾಯ ಸಾಧ್ಯವಾದರೆ ಸೀಸನ್ ಮುಗಿದ ಬಳಿಕ ಅದನ್ನು ರೈತರಿಗೆ ಹಂಚಿಕೆ ಮಾಡುತ್ತೇವೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷರು ಮಾತನಾಡಿ, ಕಾರ್ಖಾನೆಗಳು ಸಂಕಷ್ಟದಲ್ಲಿವೆ. 2019ರಲ್ಲಿ ಪ್ರತಿ ಕೆಜಿ ಸಕ್ಕರೆಗೆ ನಿಗದಿಯಾಗಿರುವ 31 ರು. ಎಂಎಸ್‌ಪಿ ದರ ಈವರೆಗೆ ಪರಿಷ್ಕರಣೆಯಾಗಿಲ್ಲ. ಆದರೆ ಕಬ್ಬಿನ ಬೆಲೆ ಪ್ರತಿ ವರ್ಷವೂ ಹೆಚ್ಚಳವಾಗುತ್ತಿದೆ. ಇನ್ನು ಎಥೆನಾಲ್, ಎಂಎಸ್ಪಿ ಹೆಚ್ಚಳ ಕುರಿತು ಕೇಂದ್ರಕ್ಕೆ ಮನವಿ ಮಾಡಿದರೂ ಇದುವರೆಗೆ ಹೆಚ್ಚಳ ಮಾಡಿಲ್ಲ ಎಂದು ದೂರಿದರು.
ಸರ್ಕಾರವೇ ಕಾರ್ಖಾನೆ ನಡೆಸಲಿ:
ಜತೆಗೆ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿರುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕವಾಗಿ ನಷ್ಟ ಉಂಟಾಗಿದೆ. ಇಡೀ ದೇಶಕ್ಕೆ ಕೇವಲ 10 ಲಕ್ಷ ಟನ್ ಮಾತ್ರ ರಫ್ತಿಗೆ ಅನುಮತಿ ನೀಡಲಾಗಿದೆ. ರಾಜ್ಯದಿಂದ ಉತ್ಪಾದನೆಯಾಗುವ ಎಥೆನಾಲ್‌ನಲ್ಲೂ ಸೂಕ್ತ ಪ್ರಮಾಣದಲ್ಲಿ ತೈಲ ಕಂಪನಿಗಳು ಖರೀದಿಸುತ್ತಿಲ್ಲ. ಹೀಗಾದರೆ ದರ ಹೆಚ್ಚಳ ಹೇಗೆ ಸಾಧ್ಯ? ಇಷ್ಟೆಲ್ಲಾ ಇದ್ದರೂ ನಾವು ರೈತರಿಂದ ಕೆಟ್ಟ ಬೈಗುಳ ತಿನ್ನುತ್ತಿದ್ದೇವೆ. ಹೀಗಾದರೆ ಕಾರ್ಖಾನೆ ನಡೆಸುವುದಾದರೂ ಹೇಗೆ? ಕಾರ್ಖಾನೆಗಳನ್ನೂ ಸರ್ಕಾರವೇ ನಡೆಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ- ಸಿಎಂ:
ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ, ಎಥೆನಾಲ್ ಎಂಎಸ್‌ಪಿ ದರ ಹೆಚ್ಚಳಕ್ಕೆ ಪ್ರಧಾನಿಗೆ ಹಿಂದೆಯೇ ಪತ್ರ ಬರೆದಿದ್ದೇನೆ. ಈವರೆಗೆ ಕೇಂದ್ರವು ಸ್ಪಂದಿಸುತ್ತಿಲ್ಲ. ಇನ್ನು ರಾಜ್ಯದಿಂದ ವಿದ್ಯುತ್ ಖರೀದಿ ದರ ಪರಿಷ್ಕರಣೆ ಹಾಗೂ ವಿದ್ಯುತ್ ಖರೀದಿ ಮೇಲೆ ವಿಧಿಸುತ್ತಿರುವ ತೆರಿಗೆ ಬಗ್ಗೆ ಪರಿಶೀಲಿಸಲಾಗುವುದು. ರಾಜ್ಯದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಕೇಂದ್ರದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಹ ನಿಯೋಗ ಕರೆದುಕೊಂಡು ಹೋಗಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಕಷ್ಟವಾಗಿದ್ದರೆ 2-3 ಕಾರ್ಖಾನೆ
ಹೇಗೆ ಮಾಡುತ್ತಿದ್ದೀರಿ?: ಸಿಎಂ
ಸಮಸ್ಯೆಗಳನ್ನು ಹೇಳಿಕೊಂಡ ಸಕ್ಕರೆ ಕಾರ್ಖಾನೆ ಮಾಲೀಕರು ಕಾರ್ಖಾನೆ ನಡೆಸುವುದೇ ಕಷ್ಟವಾಗಿದೆ ಎಂದು ಹೇಳಿದರು.
ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸಕ್ಕರೆ ಕಾರ್ಖಾನೆ ನಡೆಸುವುದು ನೀವು ಹೇಳುವಷ್ಟೇ ಕಷ್ಟ ಆಗಿದ್ದರೆ ಒಂದು ಕಾರ್ಖಾನೆ ಇದ್ದವರು ಎರಡು, ಮೂರು ಕಾರ್ಖಾನೆ ಮಾಲೀಕರಾಗಿದ್ದು ಹೇಗೆ ಎನ್ನುವ ರೈತರ ಪ್ರಶ್ನೆಗೆ ಏನು ಉತ್ತರ ಹೇಳ್ತೀರಿ’ ಎಂದು ಪ್ರಶ್ನಿಸಿದರು.
ಸಹಕಾರಿ ರಂಗದ ಇಐಡಿ ಪ್ಯಾರಿ ಶುಗರ್ ಕಾರ್ಖಾನೆ ಈಗಾಗಲೇ ಟನ್‌ಗೆ 3211 ರು. ಪಾವತಿಸುತ್ತಿದೆ. ಇದೇ ಮಾದರಿಯಲ್ಲಿ ಉಳಿದ ಕಾರ್ಖಾನೆಗಳಿಗೆ ಯಾಕೆ ಪಾವತಿ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು. ಇದಕ್ಕೆ ಮಾಲೀಕರ ಮೌನವೇ ಉತ್ತರವಾಗಿತ್ತು.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))