ಕಬ್ಬು ದರ ಹೆಚ್ಚಳಕ್ಕಾಗಿ ಪ್ರತಿಭಟನೆ - 50:50 ಸೂತ್ರಕ್ಕೆ 50:50 ಪ್ರತಿಕ್ರಿಯೆ!

| N/A | Published : Nov 08 2025, 01:45 AM IST / Updated: Nov 08 2025, 07:03 AM IST

Sugar Cane
ಕಬ್ಬು ದರ ಹೆಚ್ಚಳಕ್ಕಾಗಿ ಪ್ರತಿಭಟನೆ - 50:50 ಸೂತ್ರಕ್ಕೆ 50:50 ಪ್ರತಿಕ್ರಿಯೆ!
Share this Article
  • FB
  • TW
  • Linkdin
  • Email

ಸಾರಾಂಶ

  ಪ್ರತಿ ಟನ್‌ಗೆ ಸರ್ಕಾರದಿಂದ 50 ರು. ಹಾಗೂ ಸಕ್ಕರೆ ಕಾರ್ಖಾನೆಗಳಿಂದ 50 ರು. ಸೇರಿಸಿ ಟನ್‌ಗೆ 3,300 ರು. ಬೆಲೆ ನಿಗದಿ ಮಾಡಲು ನಿರ್ಧರಿಸಿದೆ. ಆದರೆ ಸರ್ಕಾರದ ಈ 50:50 ಸೂತ್ರಕ್ಕೆ ರೈತ ಸಮುದಾಯದಿಂದಲೂ 50:50 ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಬೆಂಗಳೂರು :  ಕಬ್ಬು ದರ ಹೆಚ್ಚಳಕ್ಕಾಗಿ ಉತ್ತರ ಕರ್ನಾಟಕದಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶುಕ್ರವಾರ ದಿನವಿಡೀ ಕಬ್ಬು ಬೆಳೆಗಾರರು, ರೈತ ಸಂಘಟನೆಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸರಣಿ ಸಭೆ ನಡೆಸಿದ್ದು, ಅಂತಿಮವಾಗಿ ಪ್ರತಿ ಟನ್‌ಗೆ ಸರ್ಕಾರದಿಂದ 50 ರು. ಹಾಗೂ ಸಕ್ಕರೆ ಕಾರ್ಖಾನೆಗಳಿಂದ 50 ರು. ಸೇರಿಸಿ ಟನ್‌ಗೆ 3,300 ರು. ಬೆಲೆ ನಿಗದಿ ಮಾಡಲು ನಿರ್ಧರಿಸಿದೆ. ಆದರೆ ಸರ್ಕಾರದ ಈ 50:50 ಸೂತ್ರಕ್ಕೆ ರೈತ ಸಮುದಾಯದಿಂದಲೂ 50:50 ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರ್ಕಾರದಿಂದ ಘೋಷಣೆ ಹೊರಬೀಳುತ್ತಿದ್ದಂತೆ ಪಟಾಕಿ ಸಿಡಿಸಿ, ಸಂಭ್ರಮಾಚರಣೆಯನ್ನು ರೈತರು ಮಾಡಿದ್ದರು. ಆದರೆ ಸರ್ಕಾರದ ತೀರ್ಮಾನದಲ್ಲಿ ಗೊಂದಲ ಇದೆ ಎಂದು ಬಳಿಕ ಕೆಲವೆಡೆ ಹೋರಾಟ ಮುಂದುವರಿಸಿದ್ದಾರೆ. ಇನ್ನೂ ಕೆಲವೆಡೆ ಹೋರಾಟ ಅಂತ್ಯವಾಗಿದೆ.

ಬೆಳಗಾವಿಯ ಗುರ್ಲಾಪುರ ವೃತ್ತದಲ್ಲಿ 9 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ರೈತರು ಕೈಬಿಟ್ಟಿದ್ದಾರೆ. ಆದರೆ ಸರ್ಕಾರದ 3300 ರು. ದರ ನಿಗದಿಯನ್ನು ಸಂಪೂರ್ಣ ಒಪ್ಪಿಲ್ಲ. ಈ ಕುರಿತು ಶನಿವಾರ ಸಭೆ ಸೇರಿ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, ಸರ್ಕಾರದ ದರವನ್ನು ಒಪ್ಪದ ವಿಜಯಪುರ ರೈತರು ನಾಲ್ಕು ದಿನಗಳಿಂದ ಗಗನಮಹಲ್‌ ಎಂಬಲ್ಲಿ ನಡೆಸುತ್ತಿದ್ದ ಅಹೋರಾತ್ರಿ ಹೋರಾಟವನ್ನು ಮುಂದುವರಿಸಿದ್ದಾರೆ. ಬಾಗಲಕೋಟೆಯ ಜಮಖಂಡಿ, ಮಹಾಲಿಂಗಪುರ, ಲೋಕಾಪುರದಲ್ಲಿ ಪ್ರತಿಭಟನೆಗಳು ಅಂತ್ಯವಾಗಿವೆ. ಆದರೆ ಬಾಗಲಕೋಟೆಯ ಮುಧೋಳದಲ್ಲಿ ನಡೆಯುತ್ತಿದ್ದ ಧರಣಿಯನ್ನು ಮುಂದುವರಿಸಲಾಗಿದೆ.

ದರ ಬಗ್ಗೆ ಸಿಎಂ ಘೋಷಣೆ:

ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ 50 ರು. ಹೆಚ್ಚುವರಿಯಾಗಿ ಭರಿಸಲು ಅಪಸ್ವರ ಎತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ದರ ಹೆಚ್ಚಳದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

ಗುರುವಾರ ಸತತ ಏಳು ಗಂಟೆಗಳ ನಿರಂತರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಪ್ರಕಟಿಸಿದರು.

‘ಬೆಳಗಾವಿ ಜಿಲ್ಲಾಧಿಕಾರಿಗಳು ಸಾಗಣೆ, ಕಟಾವು ವೆಚ್ಚ ಹೊರತುಪಡಿಸಿ ಶೇ.11.25 ಇಳುವರಿ ದರ ಇರುವ ಪ್ರತಿ ಟನ್‌ ಕಬ್ಬಿಗೆ 3,200 ರು. ಪ್ರಕಟಿಸಿದ್ದರು. ಇದೀಗ ಸುದೀರ್ಘ ಸಭೆ ನಂತರ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ತಲಾ 50 ರು. ಸೇರಿಸಿ ರೈತರಿಗೆ ಟನ್‌ಗೆ 3300 ರು. ನೀಡಲು ತೀರ್ಮಾನಿಸಲಾಗಿದೆ. ಇಳುವರಿ ದರ ಶೇ.10.25 ರಷ್ಟಿದ್ದರೆ 3,200 ರು. ನೀಡಲಾಗುವುದು. ಹೀಗೆ ಇಳುವರಿ ದರ ಇಳಿಕೆಯಾದಂತೆ ದರ ಇಳಿಕೆಯಾಗಲಿದ್ದು, ಇಳುವರಿ ದರ ಹೆಚ್ಚಾದಂತೆ ದರ ಹೆಚ್ಚಾಗಲಿದೆ’ ಎಂದು ಹೇಳಿದರು.

ಎಲ್ಲಾ ಜಿಲ್ಲೆಗಳಲ್ಲೂ ಪ್ರತಿ ಟನ್‌ಗೆ 100 ರು. ಹೆಚ್ಚಳ:

ಇದಲ್ಲದೆ, ಪ್ರತಿ ಟನ್‌ಗೆ 100 ರು.ಗಳಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುವಂತೆ ಹೆಚ್ಚಳ ಮಾಡಲಾಗಿದೆ. ಕೃಷ್ಣಾ, ಕಾವೇರಿ, ಭೀಮಾ, ಮಲಪ್ರಭಾ, ತುಂಗಭದ್ರಾ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ಬೇರೆ ಬೇರೆ ರೀತಿಯ ಇಳುವರಿ ದರ ಇರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಇಳುವರಿ ಆಧಾರದ ಮೇಲೆ ದರ ನಿಗದಿ ಮಾಡಿ ಸರ್ಕಾರ ಪ್ರತ್ಯೇಕ ಆದೇಶ ಹೊರಡಿಸಲಿದೆ. ಆದರೆ, ಎಲ್ಲಾ ಭಾಗಗಳಿಗೂ ಪ್ರತಿ ಟನ್‌ಗೆ 100 ರು. ಹೆಚ್ಚಳ ಆಗಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕೇಂದ್ರಕ್ಕೆ ನಿಯೋಗ:

ಜತೆಗೆ, ಕಾರ್ಖಾನೆ ಮಾಲೀಕರು ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಮತ್ತೊಮ್ಮೆ ಮಾಲೀಕರೊಂದಿಗೆ ಸಭೆ ನಡೆಸಲಾಗುವುದು. ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಿ ನ್ಯಾಯ ಪಡೆಯಲು ರೈತರು ಹಾಗೂ ಕಾರ್ಖಾನೆ ಮಾಲೀಕರು ಇಬ್ಬರನ್ನೂ ಒಳಗೊಂಡ ನಿಯೋಗವನ್ನು ಕೇಂದ್ರ ಸರ್ಕಾರದ ಮುಂದೆ ಒಯ್ಯುವುದಾಗಿ ಭರವಸೆ ನೀಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರೈತರ ಹೋರಾಟಕ್ಕೆ ಮಣಿದು ಮನ್ನಣೆ:

ರಾಜ್ಯದಲ್ಲಿ ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ಹೋರಾಟ ನಿರತರಾಗಿದ್ದರು. ಅ.31ರಿಂದ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ನ.7ರಿಂದ ಹೆದ್ದಾರಿ ಬಂದ್‌ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದರು.

ಮೊದಲಿಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ ಅವರು, ಕಾರ್ಖಾನೆಗಳ ಮಾಲೀಕರ ಸಮಸ್ಯೆ ಆಲಿಸಿ ರಾಜ್ಯ ಮಟ್ಟದಲ್ಲಿ ಆಗಬೇಕಿರುವ ಸಮಸ್ಯೆ ಬಗೆಹರಿಸಲಾಗುವುದು. ಕಬ್ಬಿಗೆ ಟನ್‌ಗೆ 100 ರು. ಹೆಚ್ಚುವರಿ ಬೆಲೆ ನೀಡಿ ಎಂದು ಮನವೊಲಿಸಲು ಯತ್ನಿಸಿದರೂ ಮಾಲೀಕರು ಒಪ್ಪಲಿಲ್ಲ. ಒಂದು ಹಂತದಲ್ಲಿ ಸರ್ಕಾರವೇ ಕಾರ್ಖಾನೆಗಳನ್ನು ನಡೆಸಿಕೊಳ್ಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಕಬ್ಬು ಬೆಳೆಗಾರರು ಹಾಗೂ ರೈತ ಸಂಘಗಳೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ, ಎಫ್‌ಆರ್‌ಪಿ ನಿಗದಿ ಮಾಡುವುದು ಕೇಂದ್ರದ ಜವಾಬ್ದಾರಿ. ಕೇಂದ್ರ ಮಾಡಬೇಕಿರುವುದಕ್ಕೂ ರಾಜ್ಯವನ್ನೇ ಒತ್ತಾಯಿಸಿದರೆ ಹೇಗೆ? ಎಂದು ರೈತರನ್ನು ಪ್ರಶ್ನಿಸಿದರು. ಈ ವೇಳೆ ರೈತರು ನೀವು ಕೇಂದ್ರಕ್ಕೆ ಒತ್ತಡ ತಂದು ಬೆಲೆ ಹೆಚ್ಚಳ ಮಾಡಿಸಿ. ಇಲ್ಲ ನೀವೇ ಕೊಡಿ ಎಂದು ಸ್ಪಷ್ಟಪಡಿಸಿದರು.

ರೈತರ ಅಭಿಪ್ರಾಯ ಪಡೆದ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂತಿಮವಾಗಿ ಕಾರ್ಖಾನೆಗಳಿಂದ ಪ್ರತಿ ಟನ್‌ಗೆ 50 ರು. ಹಾಗೂ ರಾಜ್ಯ ಸರ್ಕಾರದಿಂದ 50 ರು. ಸೇರಿಸಿ 100 ರು. ನೀಡಲು ತೀರ್ಮಾನಿಸಿ ಕಾರ್ಖಾನೆ ಮಾಲೀಕರನ್ನೂ ಮನವೊಲಿಸಿದರು ಎಂದು ತಿಳಿದುಬಂದಿದೆ.

6 ಕೋಟಿ ಟನ್‌ ಕಬ್ಬು ಕ್ರಷ್‌ ನಿರೀಕ್ಷೆ:

ರಾಜ್ಯದಲ್ಲಿ ಕಳೆದ ವರ್ಷ 5.6 ಕೋಟಿ ಕಬ್ಬು ನುರಿಯಲಾಗಿದೆ. ಈ ವರ್ಷ 6.6 ಕೋಟಿ ಟನ್‌ ಕಬ್ಬು ನುರಿಯುವ ಅಂದಾಜು ಮಾಡಲಾಗಿದ್ದು, ಅಂದಾಜು ಪ್ರಕಾರ 6 ಕೋಟಿ ಆಗಬಹುದು. ಇದಕ್ಕೆ ತಲಾ 100 ರು.ಗಳಂತೆ ಹೆಚ್ಚುವರಿಯಾಗಿ ನೀಡಲಾಗುವುದು. ಕೆಲ ಸಕ್ಕರೆ ಕಾರ್ಖಾನೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರೂ ಅವರನ್ನು ಮನವೊಲಿಸುತ್ತೇವೆ. ಬಹುತೇಕರು ಸ್ವಾಗತಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಗಳಿಂದ ಡಿ.ಸಿ., ರೈತರು

ವರ್ಚುಯಲ್‌ ಮೂಲಕ ಭಾಗಿ

ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಯಚೂರು, ವಿಜಯಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳು ವರ್ಚುಯಲ್‌ ಮೂಲಕ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಭಾಗವಹಿಸಿದ್ದರು.

 ರಸ್ತೆ ತಡೆಗೆ ಮುಂದಾದವರ ಮೇಲೆ ಲಾಠಿಚಾರ್ಜ್‌

  ಬೆಳಗಾವಿ :  ಪ್ರತಿ ಟನ್‌ ಕಬ್ಬಿಗೆ ₹3500 ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸಿದ ಹೋರಾಟ ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ತೀವ್ರ ಸ್ವರೂಪ ಪಡೆದು, ಕಲ್ಲು ತೂರಾಟ ನಡೆಯಿತು. ಹುಕ್ಕೇರಿ ತಾಲೂಕಿನ ಯಮಕನಮರಡಿ ಹತ್ತಿರದ ಹತ್ತರಗಿ ಟೋಲ್‌ ಗೇಟ್‌ ಬಳಿಯ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನೆ ಕೈಬಿಟ್ಟು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಪೊಲೀಸರು ಮನವಿ ಮಾಡಿದರು. 

ಈ ವೇಳೆ ತೀವ್ರ ವಾಗ್ವಾದ ನಡೆದು, ಲಾಠಿ ಪ್ರಹಾರ ಮಾಡಿದರು. ಇದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು ಕಲ್ಲು ತೂರಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕೆಲ ರೈತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಈ ಕಲ್ಲು ತೂರಾಟದಲ್ಲಿ ನಾಲ್ಕೈದು ಜನ ಪೊಲೀಸರು ಕೂಡ ಗಾಯಗೊಂಡರು. ಜತೆಗೆ ಖಾಸಗಿ ವಾಹನಗಳು, ಕೆಎಸ್‌ಆರ್‌ಟಿಸಿ ಬಸ್ಸುಗಳು ಸೇರಿದಂತೆ ಹಲವಾರು ವಾಹನಗಳ ಗ್ಲಾಸುಗಳು ಜಖಂಗೊಂಡವು.ಹತ್ತರಗಿಯಲ್ಲಿ ಆಗಿದ್ದೇನು?:

ಹುಕ್ಕೇರಿ ತಾಲೂಕಿನ ಸಾವಿರಾರು ರೈತರು ಟ್ರ್ಯಾಕ್ಟರ್​ಗಳ ಸಮೇತವಾಗಿ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದರು. ರಾಜ್ಯ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಪ್ರತಿಭಟನಾನಿರತ ರೈತರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆಯಿತು. ನೂಕಾಟ, ತಳ್ಳಾಟವೂ ನಡೆಯಿತು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಅನಿವಾರ್ಯವಾಗಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದರಿಂದಾಗಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಕಲ್ಲು ತೂರಿದರು. ಪೊಲೀಸರ ವಾಹನಗಳು, ಬಸ್‌, ಲಾರಿಗಳು ಖಜಂಗೊಂಡಿವೆ. ಅಲ್ಲದೇ, 6 ಜನ ಪೊಲೀಸ್‌ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. 

ಟ್ರಾಫಿಕ್‌ ಜಾಂ:

ಸುಮಾರು ಒಂದು ಗಂಟೆಗೂ ಅಧಿಕ ಕಾಲ ಹೆದ್ದಾರಿ ಬಂದ್ ಆಗಿದ್ದರಿಂದ ಸಾವಿರಾರು ವಾಹನಗಳು ಸಾಲುಗಟ್ಟಿ ಕಿ.ಮೀ.ವರೆಗೂ ಸಾಲುಗಟ್ಟಿ ನಿಂತಿದ್ದವು. ಇದರಿಂದ ವಾಹನ ಸವಾರರು ತೀವ್ರವಾಗಿ ಪರದಾಡಿದರು. ಒಂದು ಗಂಟೆ ಬಳಿಕ ಸರ್ವೀಸ್ ರಸ್ತೆಯಲ್ಲಿ ರೈತರು ಹೋರಾಟ ಆರಂಭಿಸಿದರು. ಸ್ಥಳದಲ್ಲೇ ಅಡುಗೆ ತಯಾರಿಸಿದರು. ಕಬ್ಬಿನ ದರ ಘೋಷಣೆ ಮಾಡುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು. ಬಳಿಕ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದರು.ರೈತ ಮುಖಂಡನ ಮನವಿ ಸಫಲ:

ರೈತ ಮುಖಂಡ ಚೂನಪ್ಪ ಪೂಜೇರಿ ಅ‍ವರು ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಯಾರೂ ಆಕ್ರೋಶಕ್ಕೆ ಒಳಗಾಗುವುದು ಬೇಡ. ಪ್ರತಿಭಟನೆಯನ್ನು ವಾಪಸ್‌ ಪಡೆಯುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಂಡರು.ಹತ್ತರಗಿ ಟೋಲ್ ಬಳಿ ವಾಹನಗಳ ಮೇಲೆ ಕಲ್ಲುತೂರಾಟ ಹಿನ್ನೆಲೆಯಲ್ಲಿಸ ಸ್ಥಳಕ್ಕೆ ಉತ್ತರ ವಲಯದ ಐಜಿಪಿ ಚೇತನ್ ಸಿಂಗ್ ರಾಠೋಡ್ ಹಾಗೂ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನಂತರ ಅಧಿಕಾರಿಗಳು ರೈತ ಮುಖಂಡರೊಂದಿಗೆ ಮಾತನಾಡಿ ಅವರನ್ನು ಮನವೊಲಿಸಲು ಯತ್ನಿಸಿ, ಸಫಲರಾದರು.

ಡಿವೈಎಸ್ಪಿ ಕೈ ಮೂಳೆ ಮುರಿತಬೆಳಗಾವಿ: ಹತ್ತರಗಿಯ ಟೋಲ್‌ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ರೈತರು ಪ್ರತಿಭಟನೆ ನಡೆಯುತ್ತಿದ್ದ ವೇಳೆ ನಡೆದ ತಳ್ಳಾಟ, ನೂಕಾಟದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ಕೈ ಮೂಳೆ ಮುರಿದಿದೆ. ಡಿವೈಎಸ್‌ಪಿ ಸಜ್ಜನ ಅವರ ಕೈ ಮೊಳೆ ಮುರಿದಿದ್ದು, ಕೈಗೆ ಬ್ಯಾಂಡೇಜ್ ಹಾಕಿಕೊಂಡು ಬಂದು ಡಿವೈಎಸ್‌ಪಿ ಕೆಲಸಕ್ಕೆ ಹಾಜರಾಗಿದ್ದಾರೆ.

ಕಿಡಿಗೇಡಿಗಳಿಂದ ಕಲ್ಲುತೂರಾಟ: ಎಸ್ಪಿ ಗುಳೇದಬೆಳಗಾವಿ: ಹತ್ತರಗಿ ಟೋಲ್ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ರೈತರು ಪ್ರತಿಭಟನೆ ಮಾಡುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದು, ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದರು.

ಹತ್ತರಗಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ತಾಳ್ಮೆ ವಹಿಸಿ ಸ್ಥಳದಿಂದ ಹಿಂದೆ ಬಂದಿದ್ದಾರೆ. ಬಲ ಪ್ರಯೋಗ ಮಾಡಿಲ್ಲ. ನಮ್ಮ ಮನವಿ ಮೇರೆಗೆ ರೈತರು ಹೋರಾಟವನ್ನು ವಾಪಸ್‌ ಪಡೆದಿದ್ದಾರೆ. ಹೆದ್ದಾರಿ ತೆರವುಗೊಳಿಸಿ ನಮಗೆ ಅನುಕೂಲ ಮಾಡಿದ್ದಾರೆ ಎಂದರು.

Read more Articles on