ಸಾರಾಂಶ
ಕಬ್ಬಿಗೆ ₹ 3500 ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ಥಳೀಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಆರ್. ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಕಬ್ಬಿಗೆ ₹ 3500 ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ಥಳೀಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಆರ್. ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಕಳೆದ ಅನೇಕ ದಿನಗಳಿಂದ ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತ ಬಂದಿದ್ದರೂ ಸರ್ಕಾರ ಅದರ ಕಡೆಗೆ ಗಮನ ಹರಿಸದಿರುವುದು ಖೇದಕರ. ಮುಖ್ಯಮಂತ್ರಿಗಳು ಕೂಡಲೇ ಇದರ ಬಗ್ಗೆ ಕಾಳಜಿ ವಹಿಸಿ ರಾಜ್ಯಾದ್ಯಂತ ಕಬ್ಬು ಬೆಳೆಗೆ ಪ್ರತಿ ಟನ್‌ಗೆ ಕನಿಷ್ಠ ₹3500 ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಅವೈಜ್ಞಾನಿಕವಾಗಿದೆ. ಬೆಲೆ ಏರಿಕೆಯಿಂದಾಗಿ ಕಬ್ಬು ಕೃಷಿ ವೆಚ್ಚ ಏರಿಕೆಯಾಗಿದ್ದು ಕಬ್ಬು ಬೆಳೆದಿರುವ ರೈತರು ನಷ್ಟ ಅನುಭವಿಸುವಂತಾಗಿದೆ. ಕೃಷಿಗೆ ತಗಲುವ ವೆಚ್ಚವನ್ನು ವೈಜ್ಞಾನಿಕವಾಗಿ ಅವಲೋಕಿಸಿ ಸಕ್ಕರೆ ಇಳುವರಿ ಪ್ರಮಾಣ ಶೇ. 9.5ರ ಆಧಾರದ ಎಫ್‌ಆರ್‌ಪಿ ಘೋಷಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು ಸೇರಿದಂತೆ ಬೆಳೆಗಾರರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಿದ್ಧಾರೂಢ ಗುರುಂ, ಮಲ್ಲಿಕಾರ್ಜುನ ಸಾವಕ್ಕಳವರ್, ಚಂದ್ರಪ್ಪ ಬಣಕಾರ, ಶ್ರೀಧರ್ ಛಲವಾದಿ, ಗೋಪಿ ಕುಂದಾಪುರ, ಪರಶುರಾಮ್ ಕುರುವತ್ತಿ, ಮರಡೆಪ್ಪ ಚಳಗೇರಿ, ದೇವೇಂದ್ರಪ್ಪ ಕಟಿಗಿ, ಅಜಯ್‌ಗೌಡ್ರು ಉಪಸ್ಥಿತರಿದ್ದರು.