ಸಾರಾಂಶ
ನಿಜಾಮ್ ಪ್ರಾಂತ್ಯದಲ್ಲಿ, ಉರ್ದು ಪ್ರಾಬಲ್ಯದ ನಡುವೆ ಕನ್ನಡ ಭಾಷೆ ಉಳಿವಿಗಾಗಿ 1943ರಲ್ಲಿ ಸ್ಥಾಪಿತಗೊಂಡ ಸುರಪುರದ ರಂಗಂಪೇಟೆ- ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘಕ್ಕೀಗ 83ರ ಹರೆಯ. ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಹಳೆಯ ಸಂಘಗಳಲ್ಲಿ ಒಂದಾದ ಇದು, ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ.
ಆನಂದ್ ಎಂ.ಸೌದಿ
ಯಾದಗಿರಿ : ನಿಜಾಮ್ ಪ್ರಾಂತ್ಯದಲ್ಲಿ, ಉರ್ದು ಭಾಷೆಯ ಪ್ರಾಬಲ್ಯದ ನಡುವೆಯೂ ಕನ್ನಡ ಭಾಷೆಯ ಅಳಿವು-ಉಳಿವಿಗಾಗಿ 1943ರಲ್ಲಿ ಸ್ಥಾಪಿತಗೊಂಡ ಜಿಲ್ಲೆಯ ಸುರಪುರದ ರಂಗಂಪೇಟೆ- ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘಕ್ಕೀಗ 83ರ ಹರೆಯ. ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಅತ್ಯಂತ ಹಳೆಯ ಸಂಘಗಳಲ್ಲಿ ಒಂದಾದ ಇದು, ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ.
ಸುರಪುರದ ರಂಗಂಪೇಟೆ-ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘವು 2023ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ. 83 ವರ್ಷಗಳಷ್ಟು ಹಿಂದಿನ, ರಾಜ್ಯದ 2ನೇ ಅತ್ಯಂತ ಹಳೆಯದು. ಕನ್ನಡಪರ ಚಿಂತನೆಯುಳ್ಳ ಹಿರೀಕರ, ಬುದ್ಧಿಜೀವಿಗಳ ಹಾಗೂ ನಿಸ್ವಾರ್ಥ ಮನಸುಗಳ ಆಶಯದೊಂದಿಗೆ 5 ಏಪ್ರಿಲ್ 1943, ಯುಗಾದಿ ಹಬ್ಬದಂದು ರಂಗಂಪೇಟೆ-ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘ ಸ್ಥಾಪಿತವಾಯಿತು.
ದಿ.ಹೆಬ್ಬಾಳ ಶೇಷಶಾಸ್ತ್ರಿಗಳು, ದಿ.ಅಷ್ಟಾವಧಾನಿ, ನರಸಿಂಹ ಶಾಸ್ತ್ರಿಗಳು, ದಿ.ಮಣ್ಣೂರು ಜಯತೀರ್ಥಾಚಾರ್ಯರ ಮಾರ್ಗದರ್ಶನದಲ್ಲಿ, ದಿ.ಸಗರ ಕೃಷ್ಣಾಚಾರ್ಯ ಇನಾಂದಾರರು, ದಿ.ರುದ್ರಸ್ವಾಮಿಗಳು, ಬ೦ಡಿ ಗುರಾಚಾರ್ಯರು, ದಿ. ಶ್ರೀನಿವಾಸ ಜಹಾಗೀರದಾರರು, ದಿ.ಮಿರಿಯಾಲ, ಬುದ್ಧಿವಂತಶೆಟ್ಟರು, ಡಿ.ಡಿ.ಗೋವಿಂದಪ್ಪನವರು, ಬಿ.ಮುಮ್ಮುಡಿ ಶಿವಣ್ಣನವರು ಸಂಘದ ಸ್ಥಾಪನೆಯ ನಾಂದಿ ಹಾಡಿದರು.
ದಿ.ಬೋಡಾ ರಾಮಣ್ಣನವರು ಸ್ಥಾಪನಾ ಅಧ್ಯಕ್ಷರಾಗಿದ್ದರೆ, ದಿ.ಶ್ರೀನಿವಾಸಾಚಾರ್ಯ ಜಹಾಗೀರದಾರ್ ಕೊಳ್ಳೂರು ಉಪಾಧ್ಯಕ್ಷರಾಗಿ, ಡಿ.ರುದ್ರಸ್ವಾಮಿಗಳು ಕಾರ್ಯದರ್ಶಿಗಳಾಗಿ, ಸಾಹಿತ್ಯ ಸಂಘಕ್ಕೆ ಬುನಾದಿ ಹಾಕಿದರು. ಸತತ 42 ವರ್ಷ ಅಧ್ಯಕ್ಷರಾಗಿದ್ದ ದಿ.ಬೋಡಾ ರಾಮಣ್ಣ ಸಂಘದ ಬೆಳವಣಿಗೆಗೆ ಕಾರಣವಾದರೆ, ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ ಸಾಹಿತ್ಯಾಸಕ್ತರಾಗಿದ್ದ ದಿ. ಮಿರಿಯಾಲ ಬುದ್ಧಿವಂತ ಶೆಟ್ಟರ ಹಗರಲಿರುಳೂ ಸೇವೆ ರಂಗಂಪೇಟೆ- ತಿಮ್ಮಾಪುರ -ಸಾಹಿತ್ಯ ಸಂಘದ ಚಟುವಟಿಕೆಗಳಿಗೆ ಹೊಸ ಭಾಷ್ಯವನ್ನೇ ಬರೆಯಿತು.
ಸಂಶೋಧಕ ಸೀತಾರಾಮ ಜಹಾಗೀರದಾರರು ಹಾಗೂ ಸಾಹಸ, ಸಾಹಿತ್ಯ ಮತ್ತು ಸಾಂಸ್ಕೃತಿಕದಲ್ಲಿ ಛಾಪು ಮೂಡಿಸಿರುವ ಸುರಪುರ ಸಂಸ್ಥಾನದರಸರ ನೆರವು ಸಂಘದ ಬಲ ಹೆಚ್ಚಿಸಿತ್ತು. ಮಾಜಿ ಸಚಿವ ದಿ.ರಾಜಾ ಮದನಗೋಪಾಲ ನಾಯಕರ ಕೊಡುಗೆ ಸ್ಮರಣೀಯ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕ ಜೀವಂತವಾಗಿರಿಸಲು ಕಳೆದ 83 ವರ್ಷಗಳಿಂದ ವಿವಿಧ ಉತ್ಸವಗಳ ಮೂಲಕ, ಈ ಭಾಗದಲ್ಲಿ ನಾಡು-ನುಡಿಯ ಬೆಳವಣಿಗೆಗೆ ಕ್ರಿಯಾಶೀಲವಾಗಿರುವ ಸಾಹಿತ್ಯ ಸಂಘ ನಾಡಹಬ್ಬ, ವಾರ್ಷಿಕೋತ್ಸವ, ಉಪನ್ಯಾಸಮಾಲಿಕೆಗಳ ಮೂಲಕ ಜನಮನ ಸೆಳೆದಿದೆ.
ಸಾಹಿತ್ಯ ದಿಗ್ಗಜರ ಭೇಟಿ:
ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರರು ಸೇರಿದಂತೆ ನಾಡಿನ ದಿಗ್ಗಜ ಸಾಹಿತಿಗಳು, ಕಲಾವಿದರು, ಕವಿಗಳು, ಲೇಖಕರು, ರಾಜಕೀಯ ಮುತ್ಸದ್ಧಿಗಳು, ಅನೇಕ ಗಣ್ಯ ಮಾನ್ಯರು ಭೇಟಿ ನೀಡಿ, ಇಲ್ಲಿನ ಸಾಹಿತ್ಯದ ರಸದೌತಣ ಸವಿದಿದ್ದಾರೆ. ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಕಪಟಾಳ ಕೃಷ್ಣರಾಯರು, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು, ಸಿ.ಕೆ.ವೆಂಕಟರಾಮಯ್ಯ, ಮಾನ್ವಿ ನರಸಿಂಗರಾಯರು, ಎಂ.ಇನಾಮದಾರ, ಹೇಮಂತ ಕುಲಕರ್ಣಿ, ದ.ರಾ.ಬೇಂದ್ರೆ, ತೀ.ನಂ.ಶ್ರೀಕಂಠಯ್ಯ, ವಿ.ಸೀತಾರಾಮಯ್ಯ, ತಿ.ತಾ.ಶರ್ಮ, ಎಸ್.ಪಿ.ರಂಗಣ್ಣ, ಕೆ.ವಿ.ರಾಘವಾಚಾರ್ಯರು, ಬೀಚಿ, ಬೆಟಗೇರಿ ಕೃಷ್ಣಶರ್ಮರು, ಬುರ್ಲಿ ಬಿಂದುಮಾಧವರು, ಪ್ರಹ್ಲಾದ ನರೇಗಲ್, ಸುಮತೀಂದ್ರ ನಾಡಿಗ, ಆರ್.ವಾಯ್, ಧಾರವಾಡಕರ್, ಶಾಂತರಸರು, ಎಂ.ಜಿ.ಬಿರಾದಾರ, ಸಿದ್ದಯ್ಯ ಪುರಾಣಿಕ, ಜಗದೇವಿತಾಯಿ ಲಿಗಾಡೆ, ಮಂತ್ರಿಗಳಾಗಿದ್ದ ದಿ.ಚೆನ್ನಾರೆಡ್ಡಿ, ಸುಯತೀಂದ್ರ ನಾಡಿಗರು, ಚೆನ್ನವೀರ ಕಣವಿ, ಪಾಟೀಲ ಪುಟ್ಟಪ್ಪನವರು, ವಿ.ಕೃ.ಗೋಕಾಕ್, ಚಂದ್ರಶೇಖರ ಪಾಟೀಲ್ (ಚಂಪಾ), ಚಂದ್ರಶೇಖರ ಕಂಬಾರ, ಚೆನ್ನಣ್ಣ ವಾಲೀಕಾರ ಸೇರಿದಂತೆ ಸಾವಿರಕ್ಕೂ ಹೆಚ್ಚು ನಾಡಿನ ಸುಪ್ರಸಿದ್ಧ ಸಾಹಿತಿಗಳು ರಂಗಂಪೇಟೆ ತಿಮ್ಮಾಪುರದ ಕನ್ನಡ ಸಾಹಿತ್ಯ ಸಂಘದ ನಾಡಹಬ್ಬ ಉತ್ಸವಕ್ಕೆ ಆಗಮಿಸಿ, ಕನ್ನಡ ಸೇವೆ ಶ್ಲಾಘಿಸಿದ್ದಾರೆ. ಸ್ವಹಸ್ತಾಕ್ಷರಗಳಲ್ಲಿ ಇದರ ಕಂಪು ಹರಿಸಿದ್ದಾರೆ.
ರಂಗಂಪೇಟೆ ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘದ ಪಾತ್ರ ಅಮೋಘವಾಗಿದೆ
ರಂಗಂಪೇಟೆ ತಿಮ್ಮಾಪುರ ಕನ್ನಡ ಸಾಹಿತ್ಯ ಸಂಘದ ಪಾತ್ರ ಅಮೋಘವಾಗಿದೆ. ಸಾಹಿತ್ಯ, ಸಂಸ್ಕೃತಿ, ಕಥೆ, ಕವನ, ಉಪನ್ಯಾಸ. ಇನ್ನಿತರ ಚಟುವಟಿಕೆಗಳ ಮೂಲಕ ಕನ್ನಡದ ಕಂಪನ್ನು ಇಂದಿಗೂ ಬೀರುತ್ತಿದೆ. ರಂಗಂಪೇಟೆ ಕನ್ನಡ ಸಾಹಿತ್ಯ ಸಂಘಕ್ಕೆ ಬೋಡಾ ರಾಮಣ್ಣನವರು ಪ್ರಥಮ ಅಧ್ಯಕ್ಷರಾಗಿದ್ದರೆ, ಅಡಿವೆಪ್ಪ ಗೋಲಗೇರಿ, ಡಿ.ಗೋವಿಂದಪ್ಪ, ಎಂ.ಆರ್.ಬುದ್ಧಿವಂತಶೆಟ್ಟರು, ಡಾ। ಸುರೇಶ್ ಸಜ್ಜನ್ ನಂತರ ಇದೀಗ ಸೂಗೂರೇಶ ವಾರದ ಅಧ್ಯಕ್ಷರಾಗಿದ್ದಾರೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))