-ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅಭಿಮತ । ಯಾದಗಿರಿಯಲ್ಲಿ ಛತ್ರಪತಿ ಶಿವಾಜಿ ಅವರ ಜಯಂತ್ಯುತ್ಸವದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

-----

ಕನ್ನಡಪ್ರಭ ವಾರ್ತೆ ಯಾದಗಿರಿಛತ್ರಪತಿ ಶಿವಾಜಿ ಅವರ ಸ್ವರಾಜ್ಯದ ಹೋರಾಟ, ತ್ಯಾಗ, ಬಲಿದಾನವು ಯುವಜನಾಂಗಕ್ಕೆ ಸ್ಫೂರ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೇಳಿದರು.

ನಗರದ ಭವಾನಿ ಮಂದಿರದಲ್ಲಿ ಗುರುವಾರ ಛತ್ರಪತಿ ಶಿವಾಜಿ ಅವರ ಜಯಂತ್ಯುತ್ಸವ ಅಂಗವಾಗಿ, ಶಿವಾಜಿ ಅವರ ಭಾವಚಿತ್ರಕ್ಕೆ. ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಅವರು ಮಾತನಾಡುತ್ತಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಮರಾಠಿಗರಿಗೆ ದೈವಿಸ್ವರೂಪಿಯಾಗಿದ್ದಾರೆ. ಸ್ವರಾಜ್ಯಕ್ಕಾಗಿ ಅವರ ಹೋರಾಟ, ಪರಾಕ್ರಮ, ತ್ಯಾಗ ಬಲಿದಾನ ಯುವಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಛತ್ರಪತಿ ಶಿವಾಜಿ ಅವರ ಮೊಘಲ್ ದೊರೆ ಔರಂಗಜೇಬ್ ಜೊತೆಗಿನ ಸಂಘರ್ಷ, ಅಫ್ಘಾನಿಸ್ತಾನದಿಂದ ಪೇಶಾವರವರೆಗೆ ಮರಾಠಾ ಸಾಮ್ರಾಜ್ಯದ ವಿಸ್ತಾರ ನಮಗೆಲ್ಲರಿಗೆ ಗರ್ವದ ವಿಷಯವಾಗಿದೆ. ಶಿವಾಜಿ ಅವರು ಎಲ್ಲ ಸಮಾಜಕ್ಕೆ ಗೌರವ ನೀಡಿದ್ದರು. ಅವರ ಸೇನೆಯಲ್ಲಿ ಮುಸ್ಲಿಮರೂ ಇದ್ದರು ಎಂದ ಅವರು, ಇಂದು ಈ ಮಹಾನಾಯಕನ ಜಯಂತಿಗೆ ಸರ್ಕಾರ ಅನುವು ಮಾಡಿಕೊಟ್ಟಿರುವುದು ಎಲ್ಲರಿಗೂ ಐತಿಹಾಸಿಕ ದಿನವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಾಠಾ ಸಮಾಜದವರೂ ಎಲ್ಲರೊಂದಿಗೆ ಬೆರೆತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿ ಕೊಡುಗೆ ನೀಡಿ ಎಂದು ಅವರು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪಾರ್ವತಿ ಊದೂರ ಅವರು, ತಾಯಿ ಜೀಜಾಬಾಯಿ ಅವರಿಂದ ಸಂಸ್ಕಾರ ಪಡೆದ ಶಿವಾಜಿ ಧೈರ್ಯ ,ಸ್ಥೈರ್ಯ, ದೇಶಾಭಿಮಾನ,ಮಹಿಳೆಯರಿಗೆ ಗೌರವ ಗುಣ ಬೆಳೆಸಿಕೊಂಡಿದ್ದರು.ಗೇರಿಲ್ಲಾ ಯುದ್ಧ ನೀತಿಯ ಮೂಲಕ ಸ್ವಧರ್ಮ ರಕ್ಷಣೆ ಹಾಗೂ ಪರಕಿಯರಿಂದ ದಾಳಿಯನ್ನು ತಡೆದರು. ಅನ್ಯಧರ್ಮ, ಪರಸ್ತ್ರೀಯರ, ರೈತರ ಬಗ್ಗೆ ಗೌರವಾದರ ಹೊಂದಿದ್ದ ಶಿವಾಜಿ ಮೂರನೇ ಒಂದು ಭಾಗದಷ್ಟು ಮುಸ್ಲಿಂ ಸೈನಿಕರನ್ನು ಹೊಂದಿರುವುದು ವಿಶೇಷವಾಗಿತ್ತು. ದೇಶದ ಗಡಿ ರಕ್ಷಣೆ,ಸನಾತನ ಸಂಸ್ಕೃತಿ ರಕ್ಷಣೆ, ಸ್ವರಾಜ್ಯಕ್ಕಾಗಿ ಹೋರಾಟ, ದೇಶ, ನ್ಯಾಯಕ್ಕಾಗಿ ಅವರ ಹೋರಾಟ ಸ್ಮರಣೀಯ ವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಾಯತ್ರಿ ಧವಳೆ ಶಿವಾಜಿ ಕುರಿತು ಘೋಷವಾಕ್ಯ ಹೇಳಿದರು. ಮಹಿಳೆಯರಿಂದ ಶಿವಾಜಿ ಕುರಿತು ತೊಟ್ಟಿಲು ತೂಗುವ ಕಾರ್ಯಕ್ರಮ ನಡೆಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್‌ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಮರಾಠಾ ಸಮಾಜದ ಜಿಲ್ಲಾಧ್ಯಕ್ಷ ರಾಜಕುಮಾರ್ ಢವಳೆ, ದಿಲೀಪ್ ಜಾಧವ್,ಗಣೇಶ್ ಬಾಪಕರ್ ಇದ್ದರು.

-

19ವೈಡಿಆರ್7 : ಯಾದಗಿರಿಯ ಭವಾನಿ ಮಂದಿರದಲ್ಲಿ ಗುರುವಾರ ಛತ್ರಪತಿ ಶಿವಾಜಿ ಅವರ ಜಯಂತ್ಯುತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹರ್ಷಲ್‌ ಭೋಯರ್ ಮಾತನಾಡಿದರು.

-

19ವೈಡಿಆರ್8 : ಯಾದಗಿರಿಯ ಭವಾನಿ ಮಂದಿರದಲ್ಲಿ ಗುರುವಾರ ಛತ್ರಪತಿ ಶಿವಾಜಿ ಅವರ ಜಯಂತ್ಯುತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಶಿವಾಜಿ ಕುರಿತು ತೊಟ್ಟಿಲು ತೂಗುವ ಕಾರ್ಯಕ್ರಮ ನಡೆಯಿತು.