ಜಾತಿ ಸಮೀಕ್ಷೆಯಲ್ಲಿ ಲೋಪದೋಷ ಸರಿಪಡಿಸಿ

KannadaprabhaNewsNetwork |  
Published : Sep 30, 2025, 12:00 AM IST
ಪೊಟೋ೨೯ಸಿಪಿಟಿ೧: ನಗರದ ನೇಗಿಲಯೋಗಿ ಟ್ರಸ್ಟ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೆಂಕಟರಾಮೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಸಾಮಾಜಿಕ ಹಾಗೂ ಶೈಕ್ಷಣಿಕ (ಜಾತಿ) ಸಮೀಕ್ಷೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಸಮೀಕ್ಷೆಯನ್ನು ಸರಿಯಾಗಿ ನಡೆಸದಿದ್ದಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವೆಂಕಟರಾಮೇಗೌಡ ಎಚ್ಚರಿಕೆ ನೀಡಿದರು.

ಚನ್ನಪಟ್ಟಣ: ಸಾಮಾಜಿಕ ಹಾಗೂ ಶೈಕ್ಷಣಿಕ (ಜಾತಿ) ಸಮೀಕ್ಷೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಸಮೀಕ್ಷೆಯನ್ನು ಸರಿಯಾಗಿ ನಡೆಸದಿದ್ದಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವೆಂಕಟರಾಮೇಗೌಡ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ನಡೆಸುತ್ತಿರುವ ಗಣತಿದಾರರು ಗೊಂದಲ ಮೂಡಿಸುವುದನ್ನು ನಿಲ್ಲಿಸಬೇಕು. ಈಗಾಗಲೇ ರಾಜ್ಯ ಒಕ್ಕಲಿಗರ ಸಂಘದಿಂದ ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸಲು ಸೂಚಿಸಲಾಗಿದೆ. ಆದರೆ, ಗಣತಿದಾರರು ಜಾತಿ ಒಕ್ಕಲಿಗ ಎಂದು ಹೇಳಿದರೂ ಸಹ ಉಪಜಾತಿ ಕೇಳಿ, ಗೌಡರ ಎಂದು ಕೇಳಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆನ್‌ಲೈನ್ ಮುಖಾಂತರ ಸಮೀಕ್ಷೆ ನಡೆಸುತ್ತಿರುವ ಕಾರಣ ಗಣತಿದಾರರು ಏನು ನಮೂದಿಸುತ್ತಿದ್ದಾರೆ ಎಂದೇ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆ ಒಂದು ಕಾಲು ಕೋಟಿ ಇದೆ, ಆದರೆ, ಸರ್ಕಾರ ಅರವತ್ತು ಲಕ್ಷ ಜನಸಂಖ್ಯೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದಿಂದಲೂ ಸಮುದಾಯದ ಜನಸಂಖ್ಯೆ ಅರಿಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗುವುದು. ಸರ್ಕಾರ ಹಾಗೂ ನಮ್ಮ ಸಮೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬಂದರೆ, ಮುಂದೆ ನ್ಯಾಯಾಲಯಕ್ಕೆ ಹೋಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ಧರಣೀಶ್ ರಾಂಪುರ ಮಾತನಾಡಿ, ಗೌಡ ಎಂಬುದು ಜಾತಿ ಅಲ್ಲ ಅದು ಪದನಾಮ. ಆದರೆ, ಒಕ್ಕಲಿಗರು ಎಂದು ಹೇಳಿದ ಮೇಲೂ ಉಪಜಾತಿ ಹೆಸರಿನಲ್ಲಿ ಗೌಡರಾ ಎಂದು ಕೇಳಿ ಗೊಂದಲ ಮೂಡಿಸಲಾಗುತ್ತಿದೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿಎಂ ಸಿದ್ದರಾಮಯ್ಯನವರೇ ಸಮೀಕ್ಷೆ ವೇಳೆ ಕುರುಬರು ಎಂದು ಬರೆಯಿಸಿ ಎಂದು ಹೇಳಿದ್ದಾರೆ. ಆದರೆ, ನಮ್ಮ ಸಮುದಾಯದ ನಾಯಕರು ಜನರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸಮೀಕ್ಷೆಗೆ ಬಂದಾಗ ಎಲ್ಲರೂ ಒಕ್ಕಲಿಗರು ಎಂದೇ ಬರೆಯಿಸಿ ಎಂದು ಮನವಿ ಮಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಹರಿದಾಸ್ ಮಾತನಾಡಿ, ಸಮೀಕ್ಷೆಗೆ ನಮ್ಮ ಮನೆಗೆ ಬಂದ ವೇಳೆ ಒಕ್ಕಲಿಗ ಎಂದು ಹೇಳಿದರೂ ಗೌಡರ ಎಂದು ಕೇಳಿ ಅದನ್ನು ದಾಖಲಿಸಲು ಹೋದರು. ಈ ವೇಳೆ ನಮಗೂ ಗಣತಿದಾರರಿಗೆ ವಾದವಾಗಿ ಗೌಡ ಎಂದೇ ನಮೂದಿಸುವುದಾಗಿ ತಿಳಿಸಿದರು. ಇದಲ್ಲದೇ ನಮ್ಮ ಗ್ರಾಮವಾದ ಬೈರಾಪಟ್ಟಣದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಮನೆಗಳವರ ವಿವರ ದಾಖಲಿಸುವಾಗ ಗೌಡ ಎಂದೇ ನಮೂದಿಸಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಸಾಹಿತಿ ವಿಜಯ್ ರಾಂಪುರ, ತಿಪ್ರೇಗೌಡ, ವರದರಾಜು, ಎಲೇಕೇರಿ ಮಂಜುನಾಥ್, ಶಂಭುಗೌಡ ನಾಗವಾರ ಇತರರು ಇದ್ದರು.

ಪೊಟೋ೨೯ಸಿಪಿಟಿ೧: ಚನ್ನಪಟ್ಟಣದ ನೇಗಿಲಯೋಗಿ ಟ್ರಸ್ಟ್ ಕಚೇರಿಯಲ್ಲಿ ವೆಂಕಟರಾಮೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ