ಬೆಸ್ಕಾಂನಲ್ಲಿ ಭ್ರಷ್ಟ ಅಧಿಕಾರಿಗಳ ವಜಾಗೊಳಿಸಿ ಬಂಧಿಸಿ

KannadaprabhaNewsNetwork |  
Published : Oct 08, 2025, 01:00 AM IST
07 HRR. 07ಹರಿಹರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿಶ್ವ ಕರವೇ ಪದಾಧಿಕಾರಿಗಳು ಮಾತನಾಡಿದರು.  | Kannada Prabha

ಸಾರಾಂಶ

ನಗರದ ಬೆಸ್ಕಾಂ ವಿಭಾಗೀಯ ಕಚೇರಿ ಉಗ್ರಾಣದ ₹೩.೮೫ ಕೋಟಿ ಹಗರಣಕ್ಕೆ ಸಂಬಂಧಿತ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾ ಮಾಡಿ, ಬಂಧಿಸಬೇಕು. ಅಲ್ಲದೇ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ನಾಗರಾಜ್ ಭಂಡಾರಿ ಹರಿಹರದಲ್ಲಿ ಆಗ್ರಹಿಸಿದರು.

- ಆಸ್ತಿ ಮುಟ್ಟುಗೋಲಿಗೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ನಾಗರಾಜ್ ಭಂಡಾರಿ ಆಗ್ರಹ

- - -

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಬೆಸ್ಕಾಂ ವಿಭಾಗೀಯ ಕಚೇರಿ ಉಗ್ರಾಣದ ₹೩.೮೫ ಕೋಟಿ ಹಗರಣಕ್ಕೆ ಸಂಬಂಧಿತ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾ ಮಾಡಿ, ಬಂಧಿಸಬೇಕು. ಅಲ್ಲದೇ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ನಾಗರಾಜ್ ಭಂಡಾರಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ಇಇ ರವಿಕಿರಣ್ ಎಂಬವರು ಹಗರಣದ ಬಗ್ಗೆ ಸಹಾಯಕ ಉಗ್ರಾಣ ಪಾಲಕನಾಗಿದ್ದ (ಎ.ಎಸ್.ಕೆ) ಜಿ.ಎನ್.ಅರುಣ್ ಕುಮಾರ್ ಹಾಗೂ ಇತರರು ಈ ಹಗರಣಕ್ಕೆ ಸಂಬಂಧಿತ ಆರೋಪಿಗಳೆಂದು ಈಚೆಗೆ ನಗರ ಠಾಣೆಗೆ ದೂರು ನೀಡಿದ್ದಾರೆ. ಒಟ್ಟು ೩೯ ವಿಧದ ₹೩,೮೫,೬೯,೧೧೯ ಮೊತ್ತದ ಸಾಮಗ್ರಿಗಳು ಕಾಣೆಯಾಗಿರುವುದು ಕಂಡುಬಂದಿದೆ. ಕ್ರಿಮಿನಲ್ ವಿಶ್ವಾಸ ಘಾತುಕತನ, ಸಾರ್ವಜನಿಕ ನೌಕರನಾಗಿ ಸ್ವತ್ತಿನ ದುರುಪಯೋಗ, ಮೋಸ, ವಂಚನೆ ಮುಂತಾದ ಬಿಎನ್‌ಎಸ್ ಕಲಂಗಳಡಿ ದೂರು ದಾಖಲಾಗಿದೆ. ಈ ಹಗರಣದಲ್ಲಿ ಪಾಲು ಪಡೆದ ಬೆಸ್ಕಾಂ ಹಿರಿಯ ಅಧಿಕಾರಿಗಳು ಅಂತರ ಕಾಪಾಡಿ ಜಾಣತನ ಮೆರೆದಿದ್ದಾರೆ ಎಂದು ಆರೋಪಿಸಿದರು.

₹೩.೮೫ ಕೋಟಿ ಹಗರಣ ಮೇಲ್ನೋಟಕ್ಕೆ ಮೊತ್ತವಾಗಿ ಕಂಡರೂ ವಾಸ್ತವವಾಗಿ ಇದು ಏಳೆಂಟು ಕೋಟಿ ರು.ಗಳ ಹಗರಣವಾಗಿದೆ. ತಜ್ಞರನ್ನು ಒಳಗೊಂಡ ಬೆಸ್ಕಾಂ ವಿಜಿಲೆನ್ಸ್‌ನಿಂದಲೂ ಸಮಾನಾಂತರವಾಗಿ ಈ ಹಗರಣ ತನಿಖೆಯಾಗಬೇಕು. ಹಗರಣದ ಹಣದಿಂದ ಗೋವಾದ ಜೂಜಾಟ, ಮೋಜಿನ ಅಡ್ಡೆಗಳಾದ ಕೆಸಿನೋಗಳಿಗೆ ನಿಯಮಿತವಾಗಿ ಹೋಗಿಬರುತ್ತಿದ್ದ ಹರಿಹರದ ಬೆಸ್ಕಾಂ ಅಧಿಕಾರಿಗಳ್ಯಾರು? ಅವರ ಕುಟುಂಬ ಹಾಗೂ ಹತ್ತಿರದ ಬಂಧು, ಮಿತ್ರರ ಹೆಸರಲ್ಲಿ ಇರುವ ಆಸ್ತಿ, ಪಾಸ್ತಿಗಳೆಷ್ಟು ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದರು.

ಈ ಹಗರಣದ ವಿದ್ಯುತ್ ಸಾಮಗ್ರಿಗಳನ್ನು ಖರೀದಿಸಿದ ವಿದ್ಯುತ್ ಕೆಲಸ ಮಾಡುವ ಹೊರಗಿನ ಶಂಕಿತ ವ್ಯಕ್ತಿಗಳನ್ನೂ ಪತ್ತೆ ಹಚ್ಚಿ ಬಂಧಿಸಬೇಕು. ೨೦೨೪ರ ಮಳೆಗಾಲದಲ್ಲಿ ತಾಲೂಕಿನಲ್ಲಿ ಬೆಸ್ಕಾಂ ಸಾಮಗ್ರಿಗಳಿಗೆ ಮಳೆಗಾಳಿಯಿಂದ ₹೪ ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಉಪ ವಿಭಾಗ ಹಾಗೂ ವಿಭಾಗೀಯ ಕಚೇರಿಯ ಕೆಲವು ಅಧಿಕಾರಿಗಳು ಹಣ ಲೂಟಿ ಮಾಡಲು ತಯಾರಿಸಿದ್ದ ಅಂದಾಜು ಪಟ್ಟಿ ಹಾಗೂ ಹರಿಹರದ ಅಮರಾವತಿ ಬಳಿಯ ಖಾಸಗಿ ಲೇಔಟ್‌ನಲ್ಲಿ ಅಳವಡಿಸಿದ್ದ ೫ ಟಿ.ಸಿ.ಗಳ ಪೈಕಿ ೩ ಟಿ.ಸಿ.ಗಳು ಕಳವಾಗಿರುವ ದೂರಿನ ಬಗ್ಗೆ ಈವರೆಗೆ ಕ್ರಮ ಕೈಗೊಂಡಿಲ್ಲ. ಹಲವು ಕೋಟಿ ಹಗರಣ ನಡೆದರೂ ಬೆಸ್ಕಾಂ ಎಸ್.ಇ. ಹಾಗೂ ಸಿ.ಇ. ಮತ್ತು ಎಂಡಿ ಒಮ್ಮೆಯೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಅವರಿಗೂ ಇದರಲ್ಲಿ ಪಾಲು ಸಿಕ್ಕಿದೆಯೇ? ಈ ಬಗ್ಗೆಯೂ ತನಿಖೆಯಾಘಲಿ ಎಂದು ಒತ್ತಾಯಿಸಿದರು.

ನಗರಸಭಾ ಸದಸ್ಯ ಎಂ.ಬಿ.ಅಣ್ಣಪ್ಪ ಮಾತನಾಡಿ, ಬೆಸ್ಕಾಂ ಭ್ರಷ್ಟಾಚಾರ ಮುಕ್ತವಾದರೆ ವಿದ್ಯುತ್ ಯುನಿಟ್ ದರ ಅರ್ಧಕ್ಕೆ ಇಳಿಸಿದರೂ ಕಂಪನಿ ಲಾಭದಲ್ಲಿರುತ್ತದೆ. ಹಗರಣದ ರೂವಾರಿಗಳನ್ನು ಪತ್ತೆ ಮಾಡಿ, ಶಿಕ್ಷಿಸಲು ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಕರವೇ ಪದಾಧಿಕಾರಿಗಳಾದ ಜಿ.ವಿ.ಪ್ರವೀಣ್, ರಾಹುಲ್ ಮೆಹರವಾಡೆ, ನಿತಿನ್ ಮೆಹರವಾಡೆ, ತಿಪ್ಪಣ್ಣ, ರಿಷಬ್ ರಾಜ್ ಇದ್ದರು.

- - -

-07HRR.07:

ಹರಿಹರದಲ್ಲಿ ಮಂಗಳವಾರ ವಿಶ್ವ ಕರವೇ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ಬೆಸ್ಕಾಂ ಹಗರಣ ತನಿಖೆಗೆ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ