ವಾಲ್ಮೀಕಿ ಜಯಂತಿಯಲ್ಲಿ ಭಾಗಿಯಾದ ಶಾಸಕಿ ರೂಪಕಲಾ

KannadaprabhaNewsNetwork |  
Published : Oct 08, 2025, 01:00 AM IST
7ಕೆಜಿಎಫ್‌1 | Kannada Prabha

ಸಾರಾಂಶ

ನಾರದ ಮುನಿಗಳು ವಾಲ್ಮೀಕಿ ಕಣ್ಣು ತೆರೆಸುವಲ್ಲಿ ಸಫಲರಾಗುತ್ತಾರೆ. ವಾಲ್ಮೀಕಿ ರಾಮ- ಲಕ್ಷ್ಮಣರಿಗೆ ಮಾರ್ಗದರ್ಶಕರಾಗುತ್ತಾರೆ ಮತ್ತು ಶ್ರೀರಾಮನ ಕಷ್ಟ- ಸುಖಗಳನ್ನು ಕಂಡಂಥ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ಬರೆಯುತ್ತಾರೆ .

ಕನ್ನಡಪ್ರಭ ವಾರ್ತೆ ಕೆಜಿಎಫ್

ಜಗತ್ತಿಗೇ ಧರ್ಮದ ಬೆಳಕನ್ನು ಕಾಣಿಸಬೇಕೆಂಬ ಕನಸು ವಾಲ್ಮೀಕಿ ಮಹರ್ಷಿಯದ್ದಾಗಿತ್ತು, ಈ ಕಾರಣದಿಂದಲೇ ರಾಮಾಯಣ ಕೇವಲ ಕಾವ್ಯವಾಗಿ ಒದಗಲಿಲ್ಲ, ಅದು ಧರ್ಮದ ನಡೆ ನುಡಿಗಳ ಜಾಣ್ಮೆಯೂ ಆಯಿತು, ಧರ್ಮದ ಮೂರ್ತರೂಪವಾದ ರಾಮನ ನಡೆಯನ್ನು ಲೋಕಕ್ಕೆ ವಾಲ್ಮೀಕಿ ಮಹರ್ಷಿಗಳ ನುಡಿ ತಿಳಿಸಿಕೊಟ್ಟಿತು ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.

ಕೆಜಿಎಫ್ ತಾಲೂಕು ಆಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ, ವಾಲ್ಮೀಕಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು, ಲೋಕ ಕಾಪಾಡಬಲ್ಲ ಧರ್ಮದ ಮೂರ್ತರೂಪವಾಗಿ ಶ್ರೀರಾಮನು ವಾಲ್ಮೀಕಿಗೆ ಒದಗಿದ, ಅವರಿಗೆ ರಾಮನ ವ್ಯಕ್ತಿತ್ವ ಪ್ರತಿಫಲನವಾದದ್ದು ಕೂಡ ನೀರಿನಲ್ಲಿಯೇ, ನದಿಯ ಸ್ವಚ್ಛವಾದ ನೀರಿನಲ್ಲಿ ಅವರಿಗೆ ರಾಮನ ಚಾರಿತ್ರ್ಯದ ಮಹಾದರ್ಶನವಾಯಿತು, ಸಜ್ಜನರ ಮನಸ್ಸಿನಂತೆ ನೀರು ಕೂಡ ತಿಳಿಯಾಗಿದೆ ಎಂದು ಉದ್ಗರಿಸಿದಾಗ ಅದು ರಾಮನ ಮನಸ್ಸಿನ ಲಕ್ಷಣವೂ ಆಗಿತ್ತು, ಧರ್ಮದ ಲಕ್ಷಣವೂ ಆಗಿತ್ತು, ಎರಡೂ ಕೂಡಿಕೊಂಡು ರಾಮಾಯಣ ಎಂಬ ಮಹಾನದಿಯು ವಾಲ್ಮೀಕಿಗಳಲ್ಲಿ ಪ್ರವಹಿಸಿತು ಎಂದು ವಾಲ್ಮೀಕಿ ರಾಮಾಯಣ ಬರೆದ ದೃಷ್ಟಾಂತ ವಿವರಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರಾದ ನರಸಿಂಹಮೂರ್ತಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಸಣ್ಣ ಹುಡುಗನಾಗಿದ್ದಾಗ ಕಾಡಿನಲ್ಲಿ ತನ್ನ ತಂದೆ- ತಾಯಿಯೊಂದಿಗೆ ಹೋಗುತ್ತಿದ್ದ ವೇಳೆ ಕಳೆದು ಹೋಗುತ್ತಾರೆ. ಅವರನ್ನು ಕಾಡಿನ ವಾಸಿಗಳಾದ ಬೇಡರು ತಂದು ಸಾಕಿ ಸಲಹುತ್ತಾರೆ. ಆದರೆ ನಾರದ ಮುನಿಗಳು ವಾಲ್ಮೀಕಿ ಕಣ್ಣು ತೆರೆಸುವಲ್ಲಿ ಸಫಲರಾಗುತ್ತಾರೆ. ವಾಲ್ಮೀಕಿ ರಾಮ- ಲಕ್ಷ್ಮಣರಿಗೆ ಮಾರ್ಗದರ್ಶಕರಾಗುತ್ತಾರೆ ಮತ್ತು ಶ್ರೀರಾಮನ ಕಷ್ಟ- ಸುಖಗಳನ್ನು ಕಂಡಂಥ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ಬರೆಯುತ್ತಾರೆ ಎಂದರು.

ಅ.೨೭ರಂದು ಅದ್ಧೂರಿ ವಾಲ್ಮೀಕಿ ಜಯಂತಿ:

ಸಾಂಕೇತಿಕವಾಗಿ ವಾಲ್ಮೀಕಿ ಜಯಂತಿ ಸರ್ಕಾರಿ ಕಾರ‍್ಯಕ್ರಮವನ್ನು ತಾಲೂಕು ಆಡಳಿತ ಆಚರಿಸಿದ್ದು, ಅಕ್ಟೋಬರ್ ೨೭ರ ಸೋಮವಾರ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಮುದಾಯದ ಅಧ್ಯಕ್ಷ ರಮೇಶ್ ನಾಯಕ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಭರತ್ ಎಚ್.ಜೆ., ತಾಪಂ ಇಒ ವೆಂಕಟೇಶಪ್ಪ, ಸಮಾಜ ಕಲ್ಯಾಣ ಇಲಾಖೆಯ ಅಂಜಲಿ, ಬಿಇಒ ಅನಿತಾ, ನಗರಸಭೆ ಆಯುಕ್ತರಾದ ಆಂಜನೇಯಲು, ಶಿರಸ್ತೇದಾರ್ ಮಂಜುನಾಥ್, ಸಮುದಾಯದ ಅಧ್ಯಕ್ಷ ಶೇಟ್ಟಿ ಕುಂಟೆ ರಮೇಶ್, ಕಾರ‍್ಯದರ್ಶಿ ಸಂಪತ್‌ಕುಮಾರ್, ಜನಾರ್ದನ್ ನಾಯಕ, ಕೇಶವನಾಯಕ, ಮುನಿನಾರಾಯಣ ನಾಯಕ, ಮುರಳಿ ನಾಯಕ , ಸುರೇಶ ನಾಯಕ, ಮಂಜು ನಾಯಕ, ವೆಂಕಟಪತಿ ನಾಯಕ, ರವಿ ನಾಯಕ, ಅಭಿಷೇಕ ನಾಯಕ, ಶ್ರೀನಾಥ್‌ ನಾಯಕ ಹಾಗೂ ಇನ್ನಿತರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ