ಚನ್ನಪಟ್ಟಣ: ರಾಮಾಯಣ ಮಹಾಕಾವ್ಯದ ಮೂಲಕ ವಿಶ್ವ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಈ ಆಧುನಿಕ ಕಾಲದಲ್ಲಿಯೂ ಪ್ರಾತಃಸ್ಮರಣೀಯರಾಗಿ ಜನಮಾನಸದಲ್ಲಿ ಆಸೀನರಾಗಿದ್ದಾರೆ ಎಂದು ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ಅಧ್ಯಕ್ಷ ರಾಂಪುರ ರಾಜಣ್ಣ ತಿಳಿಸಿದರು.
ಸಾಹಿತಿ ಡಾ. ವಿಜಯ್ ರಾಂಪುರ ಮಾತನಾಡಿ, ಹಿರಿಯ ಜೀವಗಳು ಮಕ್ಕಳಿಗೆ ಎಳವೆಯಲ್ಲಿಯೇ ನೈತಿಕ ಮೌಲ್ಯಗಳನ್ನು ತುಂಬಲು ರಾಮಾಯಣ ಮತ್ತು ಮಹಾಭಾರತದ ಉಪ ಕಥೆಗಳನ್ನು ಹೇಳುತ್ತಿದ್ದರು. ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರ ರಾಮಾಯಣ ಮಹಾಕಾವ್ಯದ ಮೂಲಕ ಪ್ರಭಾವಿತವಾಗಿವೆ. ಮಹಾ ಪರಿವರ್ತನೆ ಹೊಂದಿದ ಮಹರ್ಷಿ ವಾಲ್ಮೀಕಿಯ ಬದುಕು ಹಾಗೂ ೭ ಕಾಂಡಗಳು ಹಾಗೂ ೨೪ ಸಾವಿರ ಶ್ಲೋಕಗಳಿಂದ ಕೂಡಿರುವ ವಾಲ್ಮೀಕಿ ರಾಮಾಯಣ ಭಾರತೀಯ ಸಂಸ್ಕೃತಿಯ ಗೌರವವನ್ನು ಇಮ್ಮಡಿಗೊಳಿಸಿವೆ ಎಂದು ತಿಳಿಸಿದರು.
ಕವಿ ಅಬ್ಬೂರು ಶ್ರೀನಿವಾಸ್ ಮಾತನಾಡಿ, ಹಿಂದೂ ಧರ್ಮದ ಪವಿತ್ರ ಗ್ರಂಥವಾದ ರಾಮಾಯಣ ಮೌಲ್ಯಗಳ ಗಣಿ. ಇಲ್ಲಿ ಬರುವ ಕಥೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ. ರಾಮಾಯಣ ರಚನೆಯಾಗಿ ಸಾವಿರಾರು ವರ್ಷಗಳು ಕಳೆದರೂ ಇಂದಿಗೂ ತನ್ನ ಮೌಲ್ಯವನ್ನು ಉಳಿಸಿಕೊಂಡಿದೆ ಎಂದರು.ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಪುಟ್ಟಮಾದಯ್ಯ, ಖಜಾಂಚಿ ಪುಟ್ಟಸ್ವಾಮಿ, ಟ್ರಸ್ಟಿಗಳಾದ ಎಸ್. ಬಿ. ಕೃಷ್ಣ, ಎಂ. ಶ್ಯಾಮ್ ಸುಂದರ್, ಎಂ.ಎಸ್. ಚಂದ್ರಶೇಖರ್, ತಿಟ್ಟಮಾರನಹಳ್ಳಿ ಅನಿಲ್ ಕುಮಾರ್, ಉದ್ಯಮಿ ಯತೀಶ್ ಬಾಬು, ಶಿವಕುಮಾರ್, ಅರ್ಚಕರಾದ ನಾಗೇಂದ್ರ ತಿವಾರಿ, ನಾಗರಾಜ್ ಮುಂತಾದವರು ಹಾಜರಿದ್ದರು.