ಹೊನ್ನಾವರ: ತಾಲೂಕಿನ ಹಡಿನಬಾಳ ಗ್ರಾಪಂನಲ್ಲಿ ಲಕ್ಷಾಂತರ ರುಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗ್ರಾಮ ಆಡಳಿತ, ಜನರ ನಡುವೆ ಜಟಾಪಟಿಯಿಂದ ನಾಲ್ಕು ಬಾರಿ ಗ್ರಾಮಸಭೆ ನಡೆಸಬೇಕಾಯಿತು.
ಭ್ರಷ್ಟಾಚಾರ ನಡೆದಿರುವ ಬಗ್ಗೆ ದಾಖಲೆ ಇಟ್ಟುಕೊಂಡು ಯುವಕರ ತಂಡ ಗ್ರಾಮಸಭೆಯಲ್ಲಿ ಪ್ರಶ್ನೆಗಳ ಸುರಿಮಳೆಗೈದಿದೆ. ಯುವಕರ ಪ್ರಶ್ನೆಗೆ ಉತ್ತರಿಸಲು ಜನಪ್ರತಿನಿಧಿಗಳು ತಡಬಡಿಸಿದ್ದಾರೆ.ಸೆ. 11ರಂದು ನಡೆದ ಗ್ರಾಮಸಭೆ ರಾತ್ರಿಯಾದರೂ ಮುಗಿಯದೆ ಇದ್ದಾಗ, ಸೆ. 23ಕ್ಕೆ ಮುಂದೂಡಲಾಗಿತ್ತು. ಸೆ. 23ರಂದು ಸಭೆ ರಾತ್ರಿ 8 ಗಂಟೆ ವರೆಗೆ ನಡೆಯಿತು. ಜನರ ಆರೋಪಕ್ಕೆ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಸಮರ್ಪಕವಾಗಿ ಉತ್ತರ ಕೊಡದೆ ಮುಂದೂಡುತ್ತಲೆ ಇದ್ದರು. ಕೊನೆಗೂ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಸೆ. 25ರಂದು ನಾಲ್ಕನೇ ಬಾರಿಯೂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇಬ್ಬರು ಸದಸ್ಯರು ಸಭಾತ್ಯಾಗ ಮಾಡಿದ ಕಾರಣ ಸಾರ್ವಜನಿಕರು ಗ್ರಾಮಸಭೆಗೆ ಬಹಿಷ್ಕಾರ ಹಾಕಿ ನಡೆದರು.
ಗುರುವಾರ ನಡೆದ ಸಭೆಯಲ್ಲಿ ಗ್ರಾಮಸ್ಥರು ದಾಖಲೆ ಹಿಡಿದು ಕೇಳಿದ ಪ್ರಶ್ನೆಗೆ ಜನಪ್ರತಿನಿಧಿಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಒಬ್ಬಿಬ್ಬರು ಉತ್ತರ ಕೊಡಲು ಮುಂದಾದರು, ಸಮರ್ಪಕ ಉತ್ತರಕ್ಕೆ ಗ್ರಾಮಸ್ಥರು ಪಟ್ಟು ಹಿಡಿದರು. ದಾಖಲೆ ಜತೆ ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಮಸ್ಥರು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದಾಗ ಉಪಾಧ್ಯಕ್ಷರು, ಪಿಡಿಒ ಕಣ್ಣಲ್ಲಿ ನೀರು ಸುರಿಸಿದರು.ಅವ್ಯವಹಾರದ ಸರಮಾಲೆ: ಸೋಲಾರ್ ಲೈಟ್ ಖರೀದಿಯಲ್ಲಿ ಅವ್ಯವಹಾರ, ಕಸ ವಿಲೇವಾರಿ ಘಟಕ ನಿರ್ಮಾಣದಲ್ಲಿ ಅವ್ಯವಹಾರ ಸೇರಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು, ಪಂಚಾಯಿತಿ ಅನುದಾನದ ಜಮಾಬಂಧಿಯಲ್ಲಿ ವ್ಯತ್ಯಯ, ಕಾಮಗಾರಿ ಹೆಸರು ಬದಲಾಯಿಸಿ ಬಿಲ್ ಮಾಡಿರುವುದು, ನಿಗದಿತ ಕಾಮಗಾರಿ ಬಿಲ್‌ನ್ನು ಬೇರೆ ಕೆಲಸಕ್ಕೆ ಬಳಸಿದ್ದು, ನಾಲ್ಕು ಲಕ್ಷ ವೆಚ್ಚ ಭರಿಸಲಾಗಿದೆ ಎನ್ನಲಾಗಿರುವ ಕಸ ವಿಲೇವಾರಿ ಕಟ್ಟಡ, ಇನ್ನಿತರ ವಿಚಾರದಲ್ಲಿ ಸಾರ್ವಜನಿಕರು ಪಾರದರ್ಶಕವಾಗಿ ಕಾಮಗಾರಿ ನಡೆದಿಲ್ಲ ಎಂದು ಸಾಕ್ಷ್ಯ ಒದಗಿಸಿ ತನಿಖೆ ನಡೆಸಲು ಆಗ್ರಹಿಸಿದರು.
ಗ್ರಾಮಸ್ಥರಾದ ಪ್ರಶಾಂತ ಭಟ್ಟ ಮಾತನಾಡಿ, ನಮ್ಮ ಗ್ರಾಪಂನಲ್ಲಿ ಭ್ರಷ್ಟಾಚಾರ ಆಗಿದೆ. ನಮಗೆ ಇಲ್ಲಿಯೆ ನ್ಯಾಯ ಸಿಗಬೇಕು, ಉತ್ತರ ಕೊಡಬೇಕಾದ ಅಧ್ಯಕ್ಷ, ಉಪಾಧ್ಯಕ್ಷರು ಸಭಾತ್ಯಾಗ ಮಾಡಿದ್ದಾರೆ. ಅವರು ಮತ್ತು ಸಂಬಂಧಪಟ್ಟ ಅಧಿಕಾರಿಗಳೆ ನಮಗೆ ಉತ್ತರ ಕೊಡಬೇಕು. ಅಲ್ಲಿಯ ತನಕ ಗ್ರಾಮಸಭೆಗೆ ನಾವು ಸಹಕಾರ ಕೊಡುವುದಿಲ್ಲ ಎಂದರು.ಗ್ರಾಪಂ ಸದಸ್ಯ ಸಚಿನ್ ಶೇಟ್ ಮಾತನಾಡಿ, ನಾವು ಆರು ಸದಸ್ಯರು ಇಲ್ಲಿ ಇದ್ದೇವೆ. ನಾವು ಭ್ರಷ್ಟಾಚಾರದಲ್ಲಿ ಇಲ್ಲ. ಕಾಮಗಾರಿಯಲ್ಲಿ ಭ್ರಷ್ಟಾಚಾರ ಆಗಿರುವುದು ನಿಜ, ನಾವು ಕೂಡ ನಿಮ್ಮ ಜತೆ ಇರುತ್ತೇವೆ ಎಂದರು.
ಸಭೆಯಲ್ಲಿದ್ದ ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಪ್ರತಿಭಟನೆಗೆ ಕುಳಿತು ಧಿಕ್ಕಾರ ಕೂಗಿದರು. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿ ಗ್ರಾಮಸಭೆ ನಡೆಸಿ ಭ್ರಷ್ಟಾಚಾರದ ಬಗ್ಗೆ ಉತ್ತರ ಕೊಡಬೇಕು, ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಹಾಕುತ್ತೇವೆ ಎಂದರು.ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ಮಾಡಲಾಗುತ್ತದೆ. ಆದರೆ ಸಾರ್ವಜನಿಕರು ಲಿಖಿತ ರೂಪದಲ್ಲಿ ದೂರು ನೀಡಬೇಕು. ನಾವು ನಮ್ಮ ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಾಪಂ ಇಒ ಚೇತನ್ ಕುಮಾರ್ ಹೇಳಿದರು.