ಯಲ್ಲಾಪುರ: ತಾಲೂಕಿನ ಉಮ್ಮಚಗಿ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಕಾರ ಸಂಘಟನೆಯಲ್ಲಿ "ಸೀತಾನುಸಂಧಾನ " ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ಮಕ್ಕಳ ಗೋಷ್ಠಿ ಅ. ೫ರಂದು ಬೆಳಗ್ಗೆ ೧೦ ಗಂಟೆಗೆ ಉಮ್ಮಚಗಿ ವ್ಯ.ಸೇ.ಸ. ಸಂಘದಲ್ಲಿ ನಡೆಯಲಿದೆ ಎಂದು ಅ.ಭಾ.ಸಾ.ಪ.ದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ದ ೨೦ ಮಕ್ಕಳು ವಿಷಯ ಮಂಡನೆ ಮಾಡುವರು. ಸ್ಥಳೀಯ ವ್ಯ.ಸೇ.ಸ. ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಉದ್ಘಾಟಿಸುವರು. ಅ.ಭಾ.ಸಾ.ಪ.ದ ರಾಜ್ಯ ಅಧ್ಯಕ್ಷ ಎಸ್.ಜಿ. ಕೋಟೆ, ಶ್ರೀಮಾತಾ ವೈ.ಶಿ. ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಜೋಶಿ ಮತ್ತು ರಘುನಂದನ ಭಟ್ಟ ಉಪಸ್ಥಿತರಿರುವರು. ಸಂಜೆ ತಾಳಮದ್ದಲೆ ಅರ್ಥಧಾರಿ, ಸಾಹಿತಿ ದಿವಾಕರ ಹೆಗಡೆ ಕೆರೆಹೊಂಡ ಸಮಾರೋಪ ಭಾಷಣ ಮಾಡುವರು ಎಂದು ವಿವರಿಸಿದರು.ಉಮ್ಮಚಗಿಯನ್ನು ರಾಜ್ಯಮಟ್ಟದ ಮಕ್ಕಳ ಕೇಂದ್ರವನ್ನಾಗಿಸುವ ಉದ್ದೇಶದಿಂದ ಈ ಗೋಷ್ಠಿ ೩ನೇ ವರ್ಷದ್ದು. ರಾಜ್ಯದಲ್ಲಿ ವಿವಿಧ ಸಂಘಟನೆಗಳಾದ ಮಕ್ಕಳ ಪ್ರಕಾರ, ಮಹಿಳಾ ಪ್ರಕಾರ, ವಿದ್ಯಾರ್ಥಿ ಪ್ರಕಾರ, ಪುಸ್ತಕ ಪ್ರಕಾರ ಹೀಗೆ ವಿವಿಧ ಸಂಘಟನೆಗಳ ಅಡಿಯಲ್ಲಿ ರಾಜ್ಯಾದ್ಯಂತ ೪೦೦ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನಡೆಸಿದ್ದೇವೆ. ಗೋಷ್ಠಿಗೆ ಬರುವ ೨೦ ಜಿಲ್ಲೆಯ ಮಕ್ಕಳು ಮತ್ತು ಪಾಲಕರಿಗೆ ಉಮ್ಮಚಗಿಯ ಸುತ್ತಮುತ್ತಲಿನ ಮನೆಗಳಲ್ಲಿಯೇ ವಾಸ್ತವ್ಯ ಕಲ್ಪಿಸಿದ್ದೇವೆ. ನಮ್ಮ ಮತ್ತು ರಾಜ್ಯದ ಬೇರೆ ಬೇರೆ ಜನರ ಸಂಸ್ಕೃತಿಯನ್ನು ಪರಸ್ಪರ ಹಂಚಿಕೊಳ್ಳುವ ಉದ್ದೇಶ ಇದಾಗಿದೆ ಎಂದು ವಿವರಿಸಿದರು.ಮಕ್ಕಳ ಪ್ರಕಾರದ ರಾಜ್ಯ ಪ್ರಮುಖರಾದ ಸುಜಾತಾ ಕಾಗಾರಕೊಡ್ಲು, ಅ.ಭಾ.ಸಾ.ಪ. ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ತಾಲೂಕು ಮುಖ್ಯಸ್ಥರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಉಪಸ್ಥಿತರಿದ್ದರು.