ವಿದೇಶಿ ವಸ್ತು ಮಾರಾಟ, ಖರೀದಿ ಬಿಡಿ: ವಿಶ್ವೇಶ್ವರ ಹೆಗಡೆ ಕಾಗೇರಿ

KannadaprabhaNewsNetwork |  
Published : Sep 27, 2025, 12:01 AM IST
ಫೋಟೋ ಸೆ.೨೬ ವೈ.ಎಲ್.ಪಿ. ೦೭ | Kannada Prabha

ಸಾರಾಂಶ

ಕೇಂದ್ರದ ಜಿಎಸ್‌ಟಿ ಮಂಡಳಿಯಲ್ಲಿ ದೇಶದ ಎಲ್ಲ ರಾಜ್ಯಗಳ ಹಣಕಾಸು ಮಂತ್ರಿಗಳು ಅನುಮೋದನೆ ನೀಡಿದ ಪರಿಣಾಮವೇ ೨ನೇ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ಜಾರಿ ತರುವುದಕ್ಕೆ ಸಾಧ್ಯವಾಗಿದೆ. ಇದರಿಂದ ಬಡವರು, ರೈತರು, ಮಧ್ಯಮವರ್ಗದವರಿಗೆ ಅತಿ ಹೆಚ್ಚು ಪ್ರಯೋಜನವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಯಲ್ಲಾಪುರ: ಸ್ವದೇಶಿ ಚಿಂತನೆಯಲ್ಲಿ ವಿದೇಶಿ ವಸ್ತುಗಳ ಮಾರಾಟ ಮತ್ತು ಖರೀದಿ ಎರಡನ್ನೂ ನಾವು ಬಿಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಜಿಎಸ್‌ಟಿ ಮಂಡಳಿಯಲ್ಲಿ ದೇಶದ ಎಲ್ಲ ರಾಜ್ಯಗಳ ಹಣಕಾಸು ಮಂತ್ರಿಗಳು ಅನುಮೋದನೆ ನೀಡಿದ ಪರಿಣಾಮವೇ ೨ನೇ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ಜಾರಿ ತರುವುದಕ್ಕೆ ಸಾಧ್ಯವಾಗಿದೆ. ಇದರಿಂದ ಬಡವರು, ರೈತರು, ಮಧ್ಯಮವರ್ಗದವರಿಗೆ ಅತಿ ಹೆಚ್ಚು ಪ್ರಯೋಜನವಾಗಲಿದೆ ಎಂದು ಹೇಳಿದರು.

ಅದಕ್ಕೂ ಮುನ್ನ ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಸುಜುಕಿ ಮತ್ತು ಹೀರೋ ದ್ವಿಚಕ್ರ ವಾಹನದ ಶೋರೂಂಗಳಿಗೆ ಭೇಟಿ ನೀಡಿ, ಗ್ರಾಹಕರಿಗೆ ವಾಹನಗಳನ್ನು ಹಸ್ತಾಂತರಿಸಿದರು. ಓಂಕಾರ ಕಿರಾಣಿ, ಪಟೇಲ್ ಫ್ಯಾಶನ್, ಸುರೇಶ ಮೆಡಿಕಲ್‌ಗೂ ಭೇಟಿ ನೀಡಿ, ಜಿಎಸ್‌ಟಿಯ ಪರಿಣಾಮ ಎಷ್ಟು ಆಗಿದೆ ಎಂಬುದರ ಮಾಹಿತಿ ನೀಡಿದರು.

ಜಿಎಸ್‌ಟಿಯನ್ನು ತರುತ್ತೇವೆಂದು ಹೇಳುತ್ತಲೇ ಕಾಂಗ್ರೆಸ್ ಹಲವು ವರ್ಷ ಕಳೆಯಿತು. ಕಂಡ ಕಂಡ ರೀತಿಯ ತೆರಿಗೆಗಳು ಗ್ರಾಹಕರಿಗೆ ಹೊರೆಯಾಗುತ್ತಿದ್ದವು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿತ್ವದಿಂದ "ಒಂದು ದೇಶ ಒಂದು ತೆರಿಗೆ " ವ್ಯವಸ್ಥೆ ಜಾರಿಗೆ ಬಂದಿತು. ಸರ್ಕಾರದ ಆಡಳಿತಾತ್ಮಕ ವೆಚ್ಚ ಕಡಿಮೆಯಾಯಿತು. ನಮ್ಮ ಪಕ್ಷದ ಸಿದ್ಧಾಂತದಂತೆ ವ್ಯವಸ್ಥೆ ನಿಂತ ನೀರಾಗಲು ಬಯಸುವುದಿಲ್ಲ. ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಕೂಡ ಒಪ್ಪಿದೆ, ಈಗ ರಾಜಕೀಯ ಕಾರಣಕ್ಕೆ ಅಪಪ್ರಚಾರ ಮಾಡುವುದು ಹಾಸ್ಯಾಸ್ಪದ ಎಂದು ಹೇಳಿದರು.

ನಮ್ಮ ಪಕ್ಷ ಸೇವಾ ಪಾಕ್ಷಿಕದಲ್ಲಿ ಸ್ವದೇಶಿ ವಸ್ತುಗಳ ಬಳಕೆ, ಚಿಂತನೆ ಪ್ರೋತ್ಸಾಹದ ಚಟುವಟಿಕೆ ಕುರಿತು ಕರಪತ್ರ ಹಂಚಿ ಸ್ವದೇಶಿ ಜಾಗೃತಿ ಮೂಡಿಸುತ್ತಿದೆ. ವಿದೇಶದ ಮೇಲಿನ ಅವಲಂಬನೆ ತಪ್ಪಿಸಬೇಕು. ಸ್ವದೇಶಿ ವಸ್ತುಗಳ ಬಳಕೆ ಮಾಡಬೇಕು. ಇದೇ ಮೋದಿ ಅವರ ಸಂಕಲ್ಪವಾಗಿದೆ ಎಂದು ಹೇಳಿದರು.

ದೇಶದಲ್ಲಿ ಅಭಿವೃದ್ಧಿಯ ಮತ್ತು ಭವಿಷ್ಯತ್ತಿನ ಚಿಂತನೆಯಿಂದ ತಂದ ಎಲ್ಲ ಕಾರ್ಯಗಳ ಕುರಿತು ರಾಜಕೀಯ ಕಾರಣಕ್ಕೆ ವಿರೋಧಿಸಿ ಕಾಂಗ್ರೆಸ್ ಅರಾಜಕತೆ ಸೃಷ್ಟಿಸುವ ಷಡ್ಯಂತ್ರ ಮಾಡುತ್ತಿದೆ. ಅಸ್ಥಿರತೆಯ ಮನೋಭಾವ ಬೆಳೆಸುತ್ತಿದ್ದಾರೆ. ಟೂಲ್‌ ಕಿಟ್‌ನ ಭಾಗ ಅಂತಾರಾಷ್ಟ್ರೀಯ ಷಡ್ಯಂತ್ರಕ್ಕೆ ರಾಹುಲ್ ಗಾಂಧಿ ಕೈಗೊಂಬೆ ಆಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲ, ಮುಖ್ಯರಸ್ತೆಗಳ ನಿರ್ವಹಣೆಯನ್ನೂ ಕೈಗೊಳ್ಳುತ್ತಿಲ್ಲ. ಜಾತಿ ಗಣತಿಯ ಮೂಲಕ ಅಶಾಂತಿ ಸೃಷ್ಟಿಸುವ ಯತ್ನ ಮಾಡುತ್ತಿದೆ. ಮುಖ್ಯಮಂತ್ರಿ ಆಳ್ವಿಕೆಗೆ ಅಯೋಗ್ಯರು. ರಾಜೀನಾಮೆ ನೀಡಬೇಕು. ಅಭಿವೃದ್ಧಿ ಪರ ಜನಪ್ರತಿನಿಧಿಗಳು ಸರ್ಕಾರದಿಂದ ಹೊರ ಬರಬೇಕು ಎಂದು ಆಗ್ರಹಿಸಿದರು.

ಸಹಕಾರಿ ಧುರೀಣ ಪ್ರಮೋದ ಹೆಗಡೆ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಉಮೇಶ ಭಾಗ್ವತ, ರವಿ ಕೈಟ್ಕರ್, ನಟರಾಜ ಗೌಡರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ