ಕುಲಸಚಿವರ ಅಮಾನತು ಮಾಡಿ ಸರ್ಕಾರಿ ಮಟ್ಟದಲ್ಲಿ ಸೂಕ್ತ ತನಿಖೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕುವೆಂಪು ವಿಶ್ವವಿದ್ಯಾಲಯದಲ್ಲಿನ ಭ್ರಷ್ಟಾಚಾರ ಹಾಗೂ ಅಸಮರ್ಪಕ ಆಡಳಿತ ನಿರ್ವಹಣೆ ಕೊನೆಗಾಣಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ರಾಕೇಶ್, ಭ್ರಷ್ಟಾಚಾರದಲ್ಲಿ ತೊಡಗಿರುವ ಕುಲಸಚಿವರನ್ನು ಅಮಾನತು ಮಾಡಿ ಸರ್ಕಾರದ ಮಟ್ಟದಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ವಿಶ್ವವಿದ್ಯಾಲಯ ಜ್ಞಾನ ಕೇಂದ್ರವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕು. ಆದರೆ, ಭ್ರಷ್ಟ ಅಧಿಕಾರಿಗಳ ಕೈಗೆ ಸಿಲುಕಿಕೊಂಡು ಸಮರ್ಪಕ ಆಡಳಿತವಿಲ್ಲದೇ ನಲುಗುತ್ತಿರುವುದು ವಿಷಾಧನೀಯ. ಹೀಗಾಗಿ ಭ್ರಷ್ಟಾಚಾರ ಬೇರು ಮಟ್ಟದಿಂದ ಕಿತ್ತು ಹಾಕಿ ಸಮರ್ಪಕ ಆಡಳಿತಕ್ಕಾಗಿ ಹೋರಾಟ ಅನಿವಾರ್ಯ ಎಂದು ಹೇಳಿದರು.
ದೂರ ಶಿಕ್ಷಣ ವಿಭಾಗದಲ್ಲಿ ಪ್ರವೇಶಾತಿ ಹಾಗೂ ಇನ್ನಿತರ ನಿರ್ವಹಣೆಯನ್ನು ಎಲ್.ಎಂ. ಎಸ್. ಮುಖಾಂತರ ಬೆಂಗಳೂರು ಸಂಸ್ಥೆಯೊಂದಿಗೆ ಬಾರೀ ವ್ಯಾಪಕ ಭ್ರಷ್ಟಾಚಾರದ ಕೂಗು ಕೇಳಿ ಬಂದರೂ ನಿರ್ಲಕ್ಷಿಸಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವಂತೆ ಒಪ್ಪಂದ ಮಾಡಿಕೊಂಡು ಲಕ್ಷಾಂತರ ರೂಪಾಯಿಗಳನ್ನು ನಷ್ಟ ಉಂಟು ಮಾಡುತ್ತಿದೆ ಎಂದು ಆರೋಪಿಸಿದರು.ಸುಮಾರು ₹50 ಲಕ್ಷ ಹಣಕಾಸು ಅವ್ಯವಹಾರ ನಡೆದಿರುವ ಬಗ್ಗೆ ಲೋಕಾಯುಕ್ತದಲ್ಲಿ ಕುಲಸಚಿವರ ವಿರುದ್ಧ ದೂರು ದಾಖಲಾಗಿದೆ. ಅಲ್ಲದೇ ಅಂಕ ಪಟ್ಟಿ ಮುದ್ರಣ ಕುರಿತ ವಿಷಯದಲ್ಲಿ ಸರ್ಕಾರದ ನಿರ್ದೇಶನಗಳನ್ನು ಬದಿಗೊತ್ತಿದೆ. ಖಾಸಗೀಯವರಿಗೆ ಗುತ್ತಿಗೆ ನೀಡುವ ವಿಚಾರದಲ್ಲಿ ಕೂಡ ಕುಲಸಚಿವರು, ಕುಲಪತಿ ಹಾಗೂ ಪರೀಕ್ಷಾಂಗ ಸಚಿವರ ವಿರುದ್ಧವೂ ದೂರು ದಾಖಲಾಗಿದೆ ಎಂದರು.
ರಸ್ತೆ ತಡೆಯಿಂದ ಹನುಮಂತಪ್ಪ ವೃತ್ತದಿಂದ ಬಸ್‌ನಿಲ್ದಾಣದವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಸಿದ್ಧಾರ್ಥ್, ಕಾರ್ಯಕರ್ತರಾದ ರೋಶನ್, ಪ್ರೇಕ್ಷಿತ್, ನಂದನ್, ವೃಷಭ, ಹರೀಶ್, ಮನು, ಸೂರ್ಯ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿಭಟನೆಯ ನಂತರ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.25 ಕೆಸಿಕೆಎಂ 3ಕುವೆಂಪು ವಿಶ್ವವಿದ್ಯಾನಿಲಯದ ಅಸಮರ್ಪಕ ಆಡಳಿತ ನಿರ್ವಹಣೆ ಕೊನೆಗಾಣಿಸಬೇಕೆಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.