ಪಿಜಿ ಪಾಳ್ಯ ಡೊಡ್ಡಕೆರೆ ಮಣ್ಣು ಮಾರಾಟದಿಂದ ಭ್ರಷ್ಟಾಚಾರ: ನಿಶಾಂತ್

KannadaprabhaNewsNetwork |  
Published : Oct 19, 2026, 01:30 AM IST
ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಡೆದಿರುವ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ  | Kannada Prabha

ಸಾರಾಂಶ

ತಾಲೂಕಿನ ಪಿಜಿ ಪಾಳ್ಯ ಗ್ರಾಮದ ದೊಡ್ಡಕೆರೆಯ ಮಣ್ಣನ್ನು ಅಭಿವೃದ್ಧಿ ಹೆಸರಿನಲ್ಲಿ ರೈತರಿಗೆ ಮಾರಾಟ ಮಾಡಿ ಹಣ ಪಡೆಯುತ್ತಿರುವುದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಿದೆ ಎಂದು ಬಿಜೆಪಿ ಮುಖಂಡ ನಿಶಾಂತ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಪಿಜಿ ಪಾಳ್ಯ ಗ್ರಾಮದ ದೊಡ್ಡಕೆರೆಯ ಮಣ್ಣನ್ನು ಅಭಿವೃದ್ಧಿ ಹೆಸರಿನಲ್ಲಿ ರೈತರಿಗೆ ಮಾರಾಟ ಮಾಡಿ ಹಣ ಪಡೆಯುತ್ತಿರುವುದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಿದೆ ಎಂದು ಬಿಜೆಪಿ ಮುಖಂಡ ನಿಶಾಂತ್ ಆರೋಪಿಸಿದರು.

ತಾಲೂಕಿನ ಪಿಜಿ ಪಾಳ್ಯ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಡೆದಿರುವ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾತನಾಡಿ, ಪಿಜಿ ಪಾಳ್ಯ ದೊಡ್ಡಕೆರೆಯನ್ನು ಶಾಸಕರು ಅಭಿವೃದ್ಧಿ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಕಾಮಗಾರಿಯನ್ನು ಪೂರ್ಣಗೊಳಿಸದೆ, ಕೇವಲ ಕಾಟಚಾರಕ್ಕೆ ಹೂಳು ತೆಗೆಸಿ, ತಡೆಗೋಡೆ ನಿರ್ಮಾಣ ಮಾಡದೆ ನೀರು ತುಂಬಿಸುತ್ತಿರುವುದು ಸರಿಯಲ್ಲ. ನಿಮ್ಮ ಮೂವರು ಬೆಂಬಲಿಗರು ಕೆರೆಯ ಮಣ್ಣನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದು ನಿಮಗೆ ತಿಳಿದಿಲ್ಲವೇ? ಕ್ಷೇತ್ರದ ವಿಚಾರ ಗಮನಿಸುವ ನೀವು, ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದ್ದರೂ ಏಕೆ ಸುಮ್ಮನಿದ್ದೀರಿ? ಈ ಹಣದಲ್ಲಿ ನಿಮಗೂ ಪಾಲು ಇದೆಯೇ? ಎಂದು ಪ್ರಶ್ನಿಸಿದರು.

ಕಾಮಗಾರಿಗೆ ದುಡಿದ ಕೂಲಿ ಕಾರ್ಮಿಕರಿಗೆ, ಟ್ರ್ಯಾಕ್ಟರ್ ಮಾಲೀಕರಿಗೆ ಇದುವರೆಗೂ ಕೂಲಿ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ನಾಯಕರೆಂದು ಬಿಂಬಿಸಿಕೊಳ್ಳುವ ನೀವು ಬಡವರ ಕಷ್ಟಕ್ಕೆ ಸ್ಪಂದಿಸಬೇಕಲ್ಲವೇ? ರೈತರಿಂದ ಪಡೆದ ಹಣವನ್ನು ಒಂದು ವಾರದೊಳಗೆ ಹಿಂದಿರುಗಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೆರೆಯ ಅಭಿವೃದ್ಧಿ ನೆಪದಲ್ಲಿ ಕೆರೆಯನ್ನು ಸರಿಯಾಗಿ ಅಭಿವೃದ್ಧಿಪಡಿಸದೆ ನೀರು ತುಂಬಿಸಲಾಗುತ್ತಿದೆ. ಮಳೆಗಾಲದಲ್ಲಿ ಅರಣ್ಯ ಪ್ರದೇಶದಿಂದ ಸರಾಗವಾಗಿ ನೀರು ಹರಿದು ಬರುತ್ತಿತ್ತು. ಅದನ್ನು ಸ್ವಚ್ಛಗೊಳಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಮಳೆಗಾಲದಲ್ಲಿ ಕೆರೆ ತುಂಬಿ ನೀರು ಹರಿದರೆ ಪಕ್ಕದ ರೈತರ ಜಮೀನುಗಳ ಪಾಡೇನು? ಎಂದರು.

ರೈತರಿಂದ ಪಡೆದ ಹಣದಲ್ಲಿ ಸರ್ಕಾರಕ್ಕೆ ರಾಯಲ್ಟಿ ಕಟ್ಟಿ, ಉಳಿದ ಹಣವನ್ನು ರೈತರಿಗೆ ವಾಪಸ್ ಕೊಡಬೇಕು. ನಿಮ್ಮ ಮೇಲೆ ಅಪಾರ ನಿರೀಕ್ಷೆ ಇಟ್ಟಿದ್ದೆವು. ಹಿಂದಿನ ಶಾಸಕರಂತೆ ಭ್ರಷ್ಟಾಚಾರ ಮಾಡುವುದಿಲ್ಲ ಎಂದುಕೊಂಡಿದ್ದೆವು. ಆದರೆ ನೀವು ಸಹ ಭ್ರಷ್ಟಾಚಾರದಲ್ಲಿ ತೊಡಗಿದ್ದೀರಿ ಎಂಬ ಅನುಮಾನ ಬರುತ್ತಿದೆ ಎಂದರು.

ಬಂಡಳ್ಳಿ ರಸ್ತೆ, ನಾಲ್ ರೋಡ್ ರಸ್ತೆ, ಚಿಕ್ಕಲೂರು ರಸ್ತೆಗೆ ಅನುದಾನವಿಲ್ಲದೆ ಕಾಮಗಾರಿ ಪೂರ್ಣಗೊಂಡಿಲ್ಲ. ಸಭೆ ಸಮಾರಂಭಗಳಲ್ಲಿ ಕ್ಷೇತ್ರದ ಜನರಿಗೆ ಮಂಕುಬೂದಿ ಎರಚುತ್ತಿದ್ದೀರಿ. ಇದಕ್ಕೆ ಆ ಭಾಗದ ರೈತರಿಂದಲೇ ಚಂದಾ ವಸೂಲಿ ಮಾಡಿರುವುದರ ಜೊತೆಗೆ ನಾವೂ ಸಹಕಾರ ನೀಡುತ್ತೇವೆ ಎಂದು ವ್ಯಂಗ್ಯವಾಡಿದರು.

ನಾವು ಸುಮ್ಮನೆ ಆರೋಪ ಮಾಡುತ್ತಿಲ್ಲ. ನಿಮ್ಮ ಬೆಂಬಲಿಗರಿಗೆ ನೀಡಿರುವ ಹಣಕ್ಕೆ ದಾಖಲೆಗಳಿವೆ, ಅಗತ್ಯ ಬಿದ್ದರೆ ಅದನ್ನು ಬಿಡುಗಡೆ ಮಾಡುತ್ತೇವೆ. ಒಟ್ಟಾರೆ ಒಂದು ವಾರದೊಳಗೆ ರೈತರ ಹಣ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಮಹದೇವ ಪ್ರಭು, ಶಿವಸ್ವಾಮಿ, ಶಿವಕುಮಾರ್, ಪರಶಿವಮೂರ್ತಿ, ಶಾಂತಪ್ಪ, ಗುರುಸಿದ್ದಪ್ಪ, ಸಿದ್ದರಾಜು, ಸಿದ್ದಲಿಂಗಸ್ವಾಮಿ, ಮಧು, ಶಿವಸ್ವಾಮಿ (ಮಾಸ್ಟರ್), ಕುಮಾರ್ (ಎಸ್.ವಿ.ಟಿ), ಮಧು (ಡಿ.ಜಿ.ಎಸ್), ಪ್ರಸಾದ್, ಮಾದಪ್ಪ, ಶಿವಸ್ವಾಮಿ (ಡಿ.ಸಿ), ಪ್ರಭುಸ್ವಾಮಿ, ಗುರುಸ್ವಾಮಿ, ಸಿದ್ದಪ್ಪಾಜಿ, ಬಸವರಾಜು, ಶಿವಮಲ್ಲು, ಪ್ರಭುದಾಸ್, ರಾಜು ಲೊಕ್ಕನಹಳ್ಳಿ, ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇರುವೆಯ ಹೆಜ್ಜೆ ಸಪ್ಪಳವನ್ನೂ ಆಲಿಸುವವನೇ ನಿಜ ಕವಿ
ಪಶು ಆಹಾರದಲ್ಲಿ ಮರಳು ಕಲಬೆರಕೆ: ರೈತರ ಆಕ್ರೋಶ