ಭ್ರಷ್ಟಾಚಾರ ನಿರ್ಮೂಲನೆ, ಕಾರ್ಯಾಚರಣೆ ಸಮಿತಿ ಕೊಡಗು ಘಟಕ ಉದ್ಘಾಟನೆಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತ ಅಭಿವೃದ್ಧಿಗೆ ಭ್ರಷ್ಟಾಚಾರ ತಡೆ:
ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶ ಎಂಬ ಪಟ್ಟಿಗೆ ಸೇರಬೇಕೆಂಬ ಹಂಬಲ ಹೊಂದಿದೆ. ಆದರೆ ಭ್ರಷ್ಟಾಚಾರ ದೇಶದ ದೊಡ್ಡ ಸಮಸ್ಯೆಯಾಗಿದ್ದು, ಇದು ನಿರ್ಮೂಲನೆಯಾಗದಿದ್ದರೆ ಅಭಿವೃದ್ಧಿ ಅಸಾಧ್ಯ. ಮನುಷ್ಯನ ಯೋಗ್ಯತೆಯನ್ನು ಹಣದಿಂದ ಅಳೆಯುವುದರಿಂದ ಇಂದು ಹಣ ಸಂಪಾದನೆ ಒಂದೇ ಗುರಿಯಾಗಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವವರೇ ಭ್ರಷ್ಟಾಚಾರದಲ್ಲಿ ಮುಳುಗಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.ದಕ್ಷಿಣ ಭಾರತ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಸ್.ಭದ್ರಶೆಟ್ಟಿ, ಕೊಡಗು ಘಟಕದ ನೂತನ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಕೊಡಗು ಧೈರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾದ ಜಿಲ್ಲೆ. ಇಲ್ಲಿನ ಜನ ಜಾಗೃತರಾಗಿದ್ದು, ಭ್ರಷ್ಟಾಚಾರ ಸೇರಿದಂತೆ ಯಾವುದೇ ತಪ್ಪುಗಳನ್ನು ಪ್ರಶ್ನಿಸುವ ಗುಣವನ್ನು ಹೊಂದಿದ್ದಾರೆ ಎಂದು ಬಣ್ಣಿಸಿದರು.ಪ್ರತಿಯೊಬ್ಬ ಮನುಷ್ಯ ಶುದ್ಧ ಹಸ್ತ, ಶುದ್ಧ ಮಾತು ಮತ್ತು ಶುದ್ಧ ಸಂಬಂಧವನ್ನು ಹೊಂದಿರಬೇಕು. ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು, ನಿಷ್ಠೆಯಿಂದ ಕೆಲಸ ಮಾಡಬೇಕು, ಕಾರ್ಯಕರ್ತರು ಒಗ್ಗಟ್ಟಾಗಿರಬೇಕು. ಇದರಿಂದ ಸಮಾಜದ ಉದ್ಧಾರವಾಗುತ್ತದೆ. ಯಾವ ಕೆಲಸವನ್ನು ಮಾಡಬೇಕಾದರೂ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಎಲ್ಲಿ ಜಾಗೃತಿ ಇದೆಯೋ ಅಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಅನ್ಯಾಯಕ್ಕೆ ಒಳಗಾದವರನ್ನು ಹುಡುಕಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು ಎಂದು ಹೇಳಿದರು. ಶೀಘ್ರ ರಾಜ್ಯಮಟ್ಟದ ಸಮಾವೇಶ:
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ಮಾತನಾಡಿ, ಮತದಾನದ ಸಂದರ್ಭ ಯಾರೂ ಭ್ರಷ್ಟಚಾರಕ್ಕೆ ಒಳಗಾಗಬಾರದು. ನಮ್ಮ ಮನಸನ್ನು ಶುದ್ಧವಾಗಿಟ್ಟುಕೊಂಡು ಭ್ರಷ್ಟ ವ್ಯವಸ್ಥೆಯಿಂದ ಮುಕ್ತರಾಗಬೇಕು. ಪ್ರತಿಯೊಬ್ಬರು ಭ್ರಷ್ಟಾಚಾರ ನಿರ್ಮೂಲನೆಯ ಉದ್ದೇಶವನ್ನು ತಿಳಿದುಕೊಳ್ಳಬೇಕು. ಕಾರ್ಯಾಚರಣೆ ಯಾವುದೇ ಇರಲಿ ನಾವು ಮೊದಲು ಸಂಘಟಿತರಾಗಬೇಕು. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡೆದುಕೊಳ್ಳಬೇಕು. ಸದ್ಯದಲ್ಲೇ ರಾಜ್ಯಮಟ್ಟದ ಸಮಾವೇಶ ಮಾಡಲು ನಿರ್ಧರಿಸಿದ್ದು, ಜಿಲ್ಲಾಮಟ್ಟದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು, ತಾಲೂಕು ಮಟ್ಟದಲ್ಲಿ ಪದಾಧಿಕಾರಿಗಳನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧೀಕ್ಷಕ ಚೊಕ್ಕಾಡಿ ಅಪ್ಪಯ್ಯ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ಸಂಘಟನೆಯ ಕಾರ್ಯಾಚರಣೆಗೆ ಸ್ಥಳೀಯ ಅಧಿಕಾರಿಗಳ ಸಹಕಾರ ಅಗತ್ಯ. ಸಮಿತಿಗೆ ಮಹಿಳೆಯರನ್ನು ಹೆಚ್ಚಾಗಿ ಸೇರಿಸಿಕೊಳ್ಳುವಂತಾಗಬೇಕು ಎಂದರು. ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ವಿ.ಕುಂಬಾರ ಮಾತನಾಡಿ, ಕೇಂದ್ರ ಸರ್ಕಾರದ ನೀತಿ ಆಯೋಗದಡಿ 2011 ನವೆಂಬರ್ 20ರಂದು ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ, ಇಂಡಿಯಾ ಸ್ಥಾಪನೆಯಾಗಿದ್ದು, ಇಂದು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.ಈ ಸಂಸ್ಥೆಯಲ್ಲಿ 1800ಕ್ಕಿಂತಲೂ ಹೆಚ್ಚು ಸದಸ್ಯರಿದ್ದು, ಕರ್ನಾಟಕದಲ್ಲಿ 200 ಪದಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಮಿತಿಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಕೇಂದ್ರ ಸಮಿತಿಯಲ್ಲಿ 49 ಸದಸ್ಯರಿದ್ದಾರೆ. ಈ ಸಂಸ್ಥೆ ಅಪರಾಧ ಮತ್ತು ಅಪರಾಧಿಗಳಿಂದ ಮುಕ್ತ ಸಮಾಜ ನಿರ್ಮಾಣ, ನಾಗರಿಕರಿಗೆ ಕಾನೂನಿನ ಪ್ರಕಾರ ಅಧಿಕಾರ ಮತ್ತು ಉಚಿತ ನ್ಯಾಯ ಕೊಡಿಸುವುದು, ಸಾರ್ವಜನಿಕರ ಮನಸ್ಸಿನಿಂದ ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸಿ ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವುದು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವುದು, ಪರಿಸರ ಮಾಲಿನ್ಯವನ್ನು ತಡೆಯುವುದು, ತಿನ್ನುವ ಪದಾರ್ಥಗಳಲ್ಲಿ ಕಲಬೆರೆಕೆ ಮಾಡುವುದನ್ನು ನಿಲ್ಲಿಸುವುದು, ಸರ್ಕಾರಿ ಯೋಜನೆಯನ್ನು ಸಾರ್ವಜನಿಕರಿಗೆ ಒದಗಿಸುವುದು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಜನಹಿತ ಮತ್ತು ರಾಷ್ಟ್ರಹಿತಕ್ಕಾಗಿ ಕಾರ್ಯನಿರ್ವಹಿಸಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎಸ್.ಮಹೇಶ್, ರಾಷ್ಟ್ರದ ಅಭ್ಯುದಯಕ್ಕಾಗಿ ಭ್ರಷ್ಟಾಚಾರವನ್ನು ನಿಮೂರ್ಲನೆ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕು ಮತ್ತು ನ್ಯಾಯಕ್ಕಾಗಿ ಹೋರಾಡಬೇಕು ಎಂದು ಹೇಳಿದರು.ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಮೈಸೂರು ವಿಭಾಗ ಅಧ್ಯಕ್ಷ ಎಸ್.ಗುರುಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯದ ನಾಯಕರು, ವಿವಿಧ ಜಿಲ್ಲೆಯ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಗಣೇಶ್ ಪ್ರಾರ್ಥಿಸಿದರು. ಪಿ.ಎಸ್.ಜನಾರ್ದನ್ ಸ್ವಾಗತಿಸಿದರು. ಅಂತೋಣಿ ಡಿಸೋಜಾ ನಿರೂಪಿಸಿದರು. ಎಚ್.ಎನ್.ಸುಬ್ರಮಣ್ಯ ವಂದಿಸಿದರು.ಸಮಿತಿ ವತಿಯಿಂದ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.