ಚಿತ್ರದುರ್ಗ: ಲಂಚ ಸ್ವೀಕಾರ ಪ್ರಕರಣಗಳು ಬಹುಬೇಗ ಇತ್ಯರ್ಥ್ಯಗೊಂಡು ಶಿಕ್ಷೆಯಾದರೆ ಇದು ಬೇರೆಯವರಿಗೆ ಎಚ್ಚರಿಕೆ ಗಂಟೆಯಾಗಿ ಭ್ರಷ್ಚಾಚಾರ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಅಭಿಪ್ರಾಯಪಟ್ಟರು. ಲೋಕಾಯುಕ್ತ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಜೊತೆಗೆ ಉತ್ತಮ ಆಡಳಿತ ನೀಡಲು ತಂತ್ರಜ್ಞಾನ ಸಹಕಾರಿಯಾಗಿದೆ ಎಂದರು.
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, ಲೋಕಾಯುಕ್ತ ಕಾಯ್ದೆ ಹಾಗೂ ಸರ್ಕಾರಿ ನೌಕರರ ನಡವಳಿಕೆ ಹಾಗೂ ನಿಯಮಗಳ ಕುರಿತು ನೌಕರರಲ್ಲಿ ಜಾಗೃತಿ ಮೂಡಿಸುಬೇಕು. ಜೊತೆಗೆ, ನೈತಿಕ ಮೌಲ್ಯಗಳನ್ನು ಸಹ ಅಳವಡಿಸಿಕೊಳ್ಳುವಂತೆ ನೌಕರರಿಗೆ ಪ್ರೇರೆಪಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ ನೈತಿಕತೆ ಹಾಗೂ ಮಾನವೀಯ ಗುಣಗಳನ್ನು ಅಧಿಕಾರಿ ಹಾಗೂ ನೌಕರರು ಅಳವಡಿಸಿಕೊಳ್ಳಬೇಕು. ಸರ್ಕಾರ ಕಾಲ ಕಾಲಕ್ಕೆ ನೌಕರರಿಗೆ ವೇತನ ಆಯೋಗಳನ್ನು ನೀಡುವ ಮೂಲಕ ಸಾಕಷ್ಟು ಆರ್ಥಿಕ ಸೌಲಭ್ಯಗಳನ್ನು ನೀಡಿದೆ. ಸಾರ್ವಜನಿಕರನ್ನು ಕಚೇರಿ ಅಲೆದಾಡಿಸದೇ ನಿಗದಿತ ಸಮಯದಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಶೇ.70ರಷ್ಟು ಸರ್ಕಾರಿ ನೌಕರರು ಕೆಳವರ್ಗ ಹಾಗೂ ಬಡತನದಿಂದ ಬಂದವರು. ಇದನ್ನು ಮನದಲ್ಲಿಟ್ಟುಕೊಂಡು ರೈತರು ಹಾಗೂ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಕೆಲಸದಲ್ಲಿ ತೃಪ್ತಿ ಹೊಂದುವ ಜೊತೆಗೆ, ಮಾನವೀಯತೆ ಹಾಗೂ ಕರುಣೆಯಿಂದ ಸಾರ್ವಜನಿಕರ ಸೇವೆ ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಮ್, ಯಾವುದೇ ಪೂರ್ವಾಗ್ರಹ ಪೀಡಿತವಾಗಿ ಲೋಕಾಯುಕ್ತ ಸಂಸ್ಥೆ ಅಧಿಕಾರಿ ಹಾಗೂ ನೌಕರರ ವಿರುದ್ಧ ಕಾರ್ಯಾಚರಣೆ ನಡೆಸುವುದಿಲ್ಲ. ಆಪಾದನೆ ಕೇಳಿಬಂದ ಅಧಿಕಾರಿ ಹಾಗೂ ನೌಕರರ ಸಂಪೂರ್ಣ ವಿವರಗಳನ್ನು ಸಂಗ್ರಹಿಸುವುದರೊಂದಿಗೆ, ಅವರ ಮೇಲೆ ಬಹುದಿನಗಳ ಕಾಲ ನಿಗಾ ಇರಿಸಲಾಗುತ್ತದೆ. ಕೇಳಿ ಬಂದ ಆಪಾದನೆ ನೂರರಷ್ಟು ಸತ್ಯವಾಗಿದ್ದು, ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುವುದು, ವಿಳಂಬ ಮಾಡಿರುವುದರ ಬಗ್ಗೆ ಸಾಕ್ಷ್ಯಾಧಾರಗಳು ಪೂರಕವಾಗಿದ್ದಾಗ ಮಾತ್ರವೇ ಪರಿಶೀಲನೆ ನಡೆಸಿ, ಲೋಕಾಯುಕ್ತ ಎಡಿಜಿಪಿ ಅವರ ಅನುಮತಿಯ ಮೇರೆಗೆ ದಾಳಿ ನಡೆಸಲಾಗುತ್ತದೆ. ಇದರಲ್ಲಿ ಯಾವುದೇ ದುರುದ್ದೇಶ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.ಉಪ ಅರಣ್ಯಸಂರಕ್ಷಕ ರಾಜಣ್ಣ ಮಾತನಾಡಿದರು.
ಲೋಕಾಯುಕ್ತ ಉಪಾಧೀಕ್ಷಕ ಮೃತ್ಯುಂಜಯ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು.