ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

KannadaprabhaNewsNetwork | Published : Nov 22, 2024 1:19 AM

ಸಾರಾಂಶ

ಆರೋಗ್ಯ ಇಲಾಖೆಯಲ್ಲಿ ಆಸ್ಪತ್ರೆಗಳ ದುರಸ್ತಿ ಹೆಸರಿನಲ್ಲಿ ಆರೋಗ್ಯಾಧಿಕಾರಿ ಹಾಗೂ ಸಿಇಒ ಸೇರಿ ಕೋಟ್ಯಂತರ ರುಪಾಯಿ ಹಣ ಲೂಟಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಪ್ರವೀಣ್ ಗೌಡ ಗಂಭೀರವಾಗಿ ಆರೋಪಿಸಿದರು. ಹೋಬಳಿ ಮಟ್ಟದ ಸಮುದಾಯ ಆರೋಗ್ಯ ಕೇಂದ್ರಗಳನ್ನು ದುರಸ್ತಿ ಪಡಿಸಲು ರಾಜ್ಯದ ವಿವಿಧ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಣ ಬಿಡುಗಡೆ ಮಾಡಲಾಗಿದೆ. ಅದರಂತೆ ಹಾಸನ ಜಿಲ್ಲೆಗೂ ಅತೀ ಹೆಚ್ಚು ಬಿಡುಗಡೆ ಮಾಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಆರೋಗ್ಯ ಇಲಾಖೆಯಲ್ಲಿ ಆಸ್ಪತ್ರೆಗಳ ದುರಸ್ತಿ ಹೆಸರಿನಲ್ಲಿ ಆರೋಗ್ಯಾಧಿಕಾರಿ ಹಾಗೂ ಸಿಇಒ ಸೇರಿ ಕೋಟ್ಯಂತರ ರುಪಾಯಿ ಹಣ ಲೂಟಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಪ್ರವೀಣ್ ಗೌಡ ಗಂಭೀರವಾಗಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತಾಡಿದ ಅವರು, ದುಸ್ಥಿತಿಯಲ್ಲಿ ಇರುವ ಗ್ರಾಮೀಣ ಭಾಗದ ಅಥವಾ ಹೋಬಳಿ ಮಟ್ಟದ ಸಮುದಾಯ ಆರೋಗ್ಯ ಕೇಂದ್ರಗಳನ್ನು ದುರಸ್ತಿ ಪಡಿಸಲು ರಾಜ್ಯದ ವಿವಿಧ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಣ ಬಿಡುಗಡೆ ಮಾಡಲಾಗಿದೆ. ಅದರಂತೆ ಹಾಸನ ಜಿಲ್ಲೆಗೂ ಅತೀ ಹೆಚ್ಚು ಬಿಡುಗಡೆ ಮಾಡಲಾಗಿದೆ ಎಂದರು.

ಹಾಸನ ಜಿಲ್ಲೆಗೆ 5,74,38,000 ಹಣ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಕೇವಲ ಆಸ್ಪತ್ರೆಗಳಿಗೆ ಸುಣ್ಣ ಬಣ್ಣ ಹೆಚ್ಚಿ ದುಪ್ಪಟ್ಟು ಬಿಲ್ ಹಾಕುವ ಜೊತೆಗೆ, ಹಣವನ್ನು ಲೂಟಿ ಮಾಡುವ ಕೆಲಸವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಾಮೀಲಾಗಿ ಮಾಡಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಅವರ ಪತ್ನಿ ಹೆಸರಿನಲ್ಲೇ ಇರುವ ಔಷಧಿ ವ್ಯಾಪಾರದ ಕೇಂದ್ರದಲ್ಲಿ ಆರೋಗ್ಯ ಇಲಾಖೆಗೆ ಅಗತ್ಯ ಇರುವ ಔಷಧಿಗಳನ್ನು ಖರೀದಿ ಮಾಡುವ ಮೂಲಕ ಕಾನೂನು ಮೀರಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬಿಡುಗಡೆ ಆಗಿರುವ ಹಣದ ಬಗ್ಗೆ ಲೆಕ್ಕ ಕೇಳಿದರೆ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬ ಸಬೂಬು ಹೇಳುವ ಮೂಲಕ ಹಗರಣದಿಂದ ನುಣುಚಿಕೊಳ್ಳುವ ಕೆಲಸವನ್ನು ಜಿಲ್ಲಾ ಆರೋಗ್ಯಾಧಿಕಾರಿ ಮಾಡುತ್ತಿದ್ದಾರೆ ಎಂದು ದೂರಿದರು.

ಕೂಡಲೇ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇದನ್ನು ತನಿಖೆ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ತೇಜೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಅಗಿಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಹಲವು ಆಸ್ಪತ್ರೆಗಳನ್ನು ದುರಸ್ತಿ ಮಾಡಲಾಗಿದೆ ಎಂದು ತೋರಿಸಿ ಹಣ ಲೂಟಿ ಮಾಡಿರುವ ಅಧಿಕಾರಿಗಳು ಆಸ್ಪತ್ರೆಗಳಿಗೆ ಕೇವಲ ಬಣ್ಣ ಬಳಿದು ಜನರ ಕಣ್ಣಿಗೆ ಮಣ್ಣು ಎರಚುವ ತಂತ್ರ ಮಾಡಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳು ಮಳೆಗಾಲದಲ್ಲಿ ಸೋರುತ್ತಿವೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ ಅವುಗಳ ಬಗ್ಗೆ ಕನಿಷ್ಠ ಕಾಳಜಿ ಇಲ್ಲದೆ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Share this article