ಪುರಸಭೆಯಲ್ಲಿ ಭ್ರಷಾಚಾರ: ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Dec 03, 2025, 03:00 AM IST
 ಫೋಟೋ: 2ಜಿಎಲ್ಡಿ1- ಗುಳೇದಗುಡ್ಡದ ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆಯ ಮೇಲೆ ಬಿಜೆಪಿ ಕಾರ್ಯಕರ್ತರು ಪುರಸಭೆ ವಿರುದ್ಧ ಪ್ರತಿಭಟನೆ ಕೈಗೊಂಡು ಧರಣಿ ಸತ್ಯಾಗ್ರಹ ನಡೆಸಿದರು.  | Kannada Prabha

ಸಾರಾಂಶ

ಗುಳೇದಗುಡ್ಡ ಪುರಸಭೆಯಲ್ಲಿ ಸಿಬ್ಬಂದಿ ತ್ವರಿತ ಕಾರ್ಯಗಳಿಗೆ ದರಪಟ್ಟಿ ಪ್ರಕಾರ ಹಣ ಪಡೆಯದೆ, ಮನಬಂದಂತೆ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪುರಸಭೆ ಎದುರಿನ ಸಾರ್ವಜನಿಕರ ಕಟ್ಟೆಯ ಮೇಲೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪುರಸಭೆಯಲ್ಲಿ ಸಿಬ್ಬಂದಿ ತ್ವರಿತ ಕಾರ್ಯಗಳಿಗೆ ದರಪಟ್ಟಿ ಪ್ರಕಾರ ಹಣ ಪಡೆಯದೆ, ಮನಬಂದಂತೆ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪುರಸಭೆ ಎದುರಿನ ಸಾರ್ವಜನಿಕರ ಕಟ್ಟೆಯ ಮೇಲೆ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಪುರಸಭೆಯಲ್ಲಿ ಸಾಕಷ್ಟು ಅವ್ಯವಸ್ಥೆ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ. ಪ್ರತಿಯೊಂದೂ ಸೇವೆಗೂ ಪುರಸಭೆಯಲ್ಲಿ ಮಿತಿಮೀರಿ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ನಾಗರಿಕರು ರೋಸಿ ಹೋಗಿದ್ದಾರೆ. ಪಟ್ಟಣದಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಸಾರ್ವಜನಿಕರಿಗೆ ಪೂರೈಕೆಯಾಗುವ ಶುದ್ಧ ನೀರಿನ ಘಟಕ ಮೇಲ್ದರ್ಜೆಗೆ ಏರಿಸಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಡೆಗೆ ದರಪಟ್ಟಿ ಪ್ರದರ್ಶನ: ಪುರಸಭೆಯಲ್ಲಿ ಯಾವ ಸೇವೆಗೆ ಎಷ್ಟೆಷ್ಟು ಹೆಚ್ಚಿನ ಹಣ ಪಡೆಯುತ್ತಿದ್ದಾರೆಂಬ ದರಪಟ್ಟಿಯನ್ನು ಪುರಸಭೆ ಗೋಡೆಗೆ ತೂಗುಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ದರಪಟ್ಟಿ ಕೆಳಗೆ ಪುರಸಭೆ ಮುಖ್ಯಾಧಿಕಾರಿ ಎಂದು ಬರೆಯಲಾಗಿತ್ತು. ಇದನ್ನು ಕಂಡ ಮುಖ್ಯಾಧಿಕಾರಿ ಬೋರ್ಡ್‌ ತೆಗೆಯಿಸಲು ಮುಂದಾದಾಗ ಬಿಜೆಪಿ ಕಾರ್ಯಕರ್ತರು ಮತ್ತು ಮುಖ್ಯಾಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಿಯಮಾನುಸಾರದ ದರ ಪಟ್ಟಿ ಹಾಕಿ ನಂತರ ಈ ಬೋರ್ಡ್‌ ತೆಗೆಯುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಸಿಬ್ಬಂದಿ ಅಮಾನತ್ತಿಗೆ ಒತ್ತಾಯ :

ಹೆಚ್ಚಿಗೆ ಹಣ ವಸೂಲಿ ಮಾಡಿದ ಸಿಬ್ಬಂದಿ ಮೇಲೆ ಆರೋಪ ಪಟ್ಟಿಯನ್ನೇ ಪ್ರತಿಭಟನಾಕಾರರು ತೆರೆದಿಟ್ಟರು. ಕೆಲ ಸಿಬ್ಬಂದಿ ಫೋನ್ ಪೇ, ಇನ್ನೂ ಕೆಲವರು ನಗದು ಪಡೆದಿದ್ದಾರೆ. ಇವರ ಮೇಲೆ ಕ್ರಮವಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಪ್ಪಿತಸ್ಥರ ಮೇಲೆ ಕ್ರಮದ ಭರವಸೆ:

ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದ ಸಿಬ್ಬಂದಿ ಮೇಲೆ ಕಾನೂನು ಕ್ರಮಕ್ಕೆ ಮೇಲಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು. ಸಾರ್ವಜನಿಕ ಕೆಲಸದ ದರಪಟ್ಟಿ ಪ್ರಕಟಪಡಿಸಲು 4-5 ಗಂಟೆಗಳ ಸಮಯಾವಕಾಶ ಮುಖ್ಯಾಧಿಕಾರಿಗಳು ಕೇಳಿದರು.

ಪುರಸಭೆ ಅಭಿಯಂತರ ಎಂ.ಜಿ. ಕಿತ್ತಲಿ, ಮ್ಯಾನೇಜರ್‌ ಮುದ್ದೇಬಿಹಾಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ವೆಂಕಟೇಶ ಹುಣಸಿಮರದ, ಸುರೇಶ ಇಂಜನೇರಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತಸಾ ದೊಂಗಡೆ, ಕಮಲಕಿಶೋರ ಮಾಲಪಾಣಿ, ಭಾಗ್ಯಾ ಉದ್ನೂರ, ಅಶೋಕ ಹೆಗಡಿ, ಶ್ರೀಕಾಂತ ಭಾವಿ, ಪ್ರಶಾಂತ ಜವಳಿ, ಬಸವರಾಜ ಯರಗಾ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ