- ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಪ-2024 ಉದ್ಘಾಟಿಸಿ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಅಭಿಮತ
- - - ಕನ್ನಡಪ್ರಭ ವಾರ್ತೆ ದಾವಣಗೆರೆಕಾರ್ಯಾಂಗ, ನ್ಯಾಯಾಂಗಗಳಿಗೆ ಅನುಸಾರವಾಗಿ ಎಲ್ಲ ಸರ್ಕಾರಿ ಅಧಿಕಾರಿಗಳು, ನೌಕರರು ಕಾರ್ಯನಿರ್ವಹಿಸಬೇಕು. ಅಸಮರ್ಥತೆ ಇರುವ ಕಡೆ ಭ್ರಷ್ಟಾಚಾರ ಹುಟ್ಟುತ್ತದೆ. ಹಾಗಾಗಿ, ಪ್ರತಿಯೊಬ್ಬ ನಾಗರೀಕರನೂ ಆಸೆ, ಇತಿಮಿತಿಗಳ ಅರಿವಿನಿಂದ ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಬೇಕು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಹೇಳಿದರು.
ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಸಮಾಜಶಾಸ್ತ್ರ ವಿಭಾಗ ಮತ್ತು ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ಏರ್ಪಡಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಸಪ್ತಾಹ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ, ಪ್ರತಿಭಟಿಸುವ ಗುಣವನ್ನು ವಿದ್ಯಾರ್ಥಿಗಳು, ಯುವಜನರು ರೂಢಿಸಿಕೊಳ್ಳಬೇಕು ಎಂದರು.ಭ್ರಷ್ಟಾಚಾರ ಎಂಬುದು ಯಾವುದೇ ದೇಶಕ್ಕೆ ದೊಡ್ಡ ಕಂಟಕವಾಗಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಬೇರು ಸಮೇತ ಕಿತ್ತು ಹಾಕುವ ಸಂಕಲ್ಪ ಜನತೆ ಮಾಡಬೇಕು. ಜನಪ್ರತಿನಿಧಿಗಳು ಜನರ ಸೇವೆಗೆ ನಿಯುಕ್ತರಾಗಿರುತ್ತಾರೆ. ಶಿಷ್ಟಾಚಾರಕ್ಕೆ ಒಳಪಟ್ಟು ಸಾರ್ವಜನಿಕರ ಸೇವೆ ಮಾಡಬೇಕಾದುದು ಅಂತಹವರ ಕರ್ತವ್ಯವಾಗಿರುತ್ತದೆ. ಅದನ್ನು ಹೊರತುಪಡಿಸಿ, ಸ್ವಲಾಭಕ್ಕಾಗಿ ಹುದ್ದೆ, ಅಧಿಕಾರಗಳನ್ನು ಬಳಸಿಕೊಂಡರೆ ಅದು ಭ್ರಷ್ಟಾಚಾರವಾಗುತ್ತದೆ ಎಂದು ತಿಳಿಸಿದರು.
ಇಲಾಖೆಯಿಂದ ಭ್ರಷ್ಚಾಚಾರ ವಿರುದ್ಧ ಜಾಗೃತಿ, ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ನಿರಂತರವಾಗಿ ಭ್ರಷ್ಟಾಚಾರದ ತಡೆಗೆ ದಾಳಿ, ಕಾರ್ಯಾಚರಣೆ ಮಾಡುತ್ತಿದೆ. ಲಂಚ ಕೇಳಿದವರ ವಿರುದ್ಧ ಸಾರ್ವಜನಿಕರು ನಿರ್ಭೀತಿಯಿಂದ ದೂರು ದಾಖಲಿಸಬೇಕು. ಹಾಗಾದಾಗ ಮಾತ್ರ ಬದಲಾವಣೆ ಸಾಧ್ಯ. ಸರ್ಕಾರಿ ಅಧಿಕಾರಿ, ಸಿಬ್ಬಂದಿ ಲೋಕಾಯುಕ್ತರ ಗಾಳಕ್ಕೆ ಎಂಬುದಾಗಿ ಮಾಧ್ಯಮಗಳಲ್ಲೂ ವರದಿ ಆಗುತ್ತಿರುತ್ತವೆ. ಸಾರ್ವಜನಿಕರೂ ಇಲಾಖೆ ಜೊತೆ ಕೈ ಜೋಡಿಸಿ, ಭ್ರಷ್ಟಾಚಾರ ಬೇರು ಸಮೇತ ಕಿತ್ತು ಹಾಕಲು ಮುಂದಾಗಬೇಕು ಎಂದು ಎಂ.ಎಸ್. ಕೌಲಾಪುರೆ ಹೇಳಿದರು.ಕಾಲೇಜಿನ ವಿಭಾಗ ಮುಖ್ಯಸ್ಥ ಡಾ. ಆರ್.ರಾಘವೇಂದ್ರ, ಭ್ರಷ್ಟಾಚಾರ, ಲಂಚಗುಳಿತನ ಬಹುದೊಡ್ಡ ಸಾಮಾಜಿಕ, ರಾಜಕೀಯ ಸಮಸ್ಯೆಯಾಗಿದೆ. ಇದು ಎಲ್ಲ ರಾಷ್ಟ್ರಗಳಲ್ಲೂ ಇದೆ. ಅಷ್ಟೇ ಅಲ್ಲ, ಅಭಿವೃದ್ಧಿ ಹೊಂದಿರುವ ದೇಶಗಳಲ್ಲೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಇಂತಹ ಪಿಡುಗಿನ ವಿರುದ್ಧ ದೇಶದ ಸತ್ಪ್ರಜೆಗಳಾಗಿ ಪ್ರತಿಯೊಬ್ಬರೂ ಧ್ವನಿ ಎತ್ತುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಬೇಕು ಎಂದರು.
ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಕಲಾವತಿ, ಇನ್‌ಸ್ಪೆಕ್ಟರ್‌ಗಳಾದ ಸಿ.ಮಧುಸೂದನ್, ಪ್ರಭು ಬಿ. ಸೂರಿನ, ಪಿ.ಸರಳಾ, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಓ.ಪ್ರವೀಣಕುಮಾರ, ಡಾ. ಎಂ.ಮಂಜಪ್ಪ, ಪ್ರೊ. ಟಿ.ಆರ್. ರಂಗಸ್ವಾಮಿ, ಬೋಧಕರಾದ ಸುರೇಖಾ, ಪವಿತ್ರಾ, ಡಾ.ಕಾವ್ಯಾಶ್ರೀ, ಎಸ್.ಪರಮೇಶ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು. ವಿದ್ಯಾರ್ಥಿನಿ ಸುನೀತಾ ಆರಂಭದಲ್ಲಿ ಪ್ರಾರ್ಥಿಸಿದರು.- - -
ಬಾಕ್ಸ್-1 * ಲೋಕಾಯುಕ್ತ ವ್ಯವಸ್ಥೆ ಅರಿವು ಅಗತ್ಯ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಿ.ಮಧುಸೂದನ್ ಮಾತನಾಡಿ, ಲೋಕಾಯುಕ್ತ ವ್ಯವಸ್ಥೆ ಮತ್ತು ಅದರ ಸೇವೆಗಳು, ಕಾನೂನುಗಳ ಬಗ್ಗೆ ವಿವಿಧ ಆಯಾಮಗಳ ಬಗ್ಗೆ ವಿದ್ಯಾರ್ಥಿ, ಯುವಜನರು, ಸಾರ್ವಜನಿಕರು ಕನಿಷ್ಠ ಅರಿವು, ಮಾಹಿತಿಯನ್ನು ಹೊಂದಿರಬೇಕು. ಭ್ರಷ್ಟಾಚಾರವನ್ನು ತೊಡೆದು ಹಾಕುವಂಥ ಬದಲಾವಣೆ ಸಮಾಜಕ್ಕೆ ಇಂದು ಅತ್ಯಗತ್ಯವಾಗಿದೆ ಎಂದರು. ಸಾರ್ವಜನಿಕರ ಕೆಲಸ, ಕಾರ್ಯ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಡುವುದು ಅಲ್ಲಲ್ಲಿ ಕಂಡುಬರುತ್ತಿದೆ. ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಹೀಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟರೆ ನೇರವಾಗಿ ಲೋಕಾಯುಕ್ತ ಪೊಲೀಸ್ ಇಲಾಖೆ ಕಚೇರಿಗೆ ತೆರಳಿ, ದೂರು ದಾಖಲು ಮಾಡಬೇಕು. ಅಂತಹ ಭ್ರಷ್ಟಾಚಾರಿಗಳ ವಿರುದ್ಧ ಕ್ರಮಕ್ಕೆ ಲೋಕಾಯುಕ್ತ ಇಲಾಖೆ ಸದಾ ಸನ್ನದ್ದವಾಗಿರುತ್ತದೆ ಎಂದು ಸಲಹೆ ನೀಡಿದರು.- - -
ಬಾಕ್ಸ್-2 * ಭ್ರಷ್ಟಾಚಾರ ಬಹಿಷ್ಕಾರ ಸಂಕಲ್ಪ ಮುಖ್ಯ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯರಾದ ಪ್ರೊ. ಜಿ.ಸಿ. ನೀಲಾಂಬಿಕೆ ಮಾತನಾಡಿ, ಸಮೂಹ ಭ್ರಷ್ಟಾಚಾರ ಬಹಿಷ್ಕರಿಸುವ ಸಂಕಲ್ಪ ಮಾಡಿ, ಭವಿಷ್ಯದ ಭಾರತ ನಿರ್ಮಾಣಕ್ಕೆ ನೀವೆಲ್ಲಾ ಸಜ್ಜಾಗಬೇಕು. ದೇಶದ ಭವಿಷ್ಯವಾದ ವಿದ್ಯಾರ್ಥಿ, ಯುವಜನರೇ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆಯಬೇಕು. ಬದಲಾವಣೆ ಹೊರಗಿನಿಂದಲ್ಲ, ನಮ್ಮಿಂದ, ನಮ್ಮೊಳಗಿನಿಂದಲೇ ಆದಾಗ ದೇಶದ ಚಿತ್ರಣವೂ ಬದಲಾಗುತ್ತದೆ ಎಂದು ಹೇಳಿದರು.- - - -28ಕೆಡಿವಿಜಿ1, 2:
ದಾವಣಗೆರೆ ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಸಮಾಜಶಾಸ್ತ್ರ ವಿಭಾಗ ಮತ್ತು ಲೋಕಾಯುಕ್ತ ಇಲಾಖೆ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ-2024 ಅನ್ನು ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ಉದ್ಘಾಟಿಸಿದರು.