ರಾಜ್ಯದ ಅಭಿವೃದ್ಧಿಗೆ ಭ್ರಷ್ಟಾಚಾರ ಮಾರಕ: ಎನ್.ಸಂತೋಷ್ ಹೆಗ್ಡೆ

KannadaprabhaNewsNetwork |  
Published : Jan 17, 2024, 01:52 AM ISTUpdated : Jan 17, 2024, 02:57 PM IST
Santhosh Hegde

ಸಾರಾಂಶ

ಮನುಷ್ಯರಲ್ಲಿ ಅತಿಯಾದ ದುರಾಸೆ ಹಾಗೂ ಸ್ವಾರ್ಥದಿಂದಾಗಿ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದೆ. ಭ್ರಷ್ಟಾಚಾರ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮನುಷ್ಯರಲ್ಲಿ ಅತಿಯಾದ ದುರಾಸೆ ಹಾಗೂ ಸ್ವಾರ್ಥದಿಂದಾಗಿ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದೆ. ಭ್ರಷ್ಟಾಚಾರ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಮಾರ್ಗೋನಹಳ್ಳಿಯ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ನಡೆಸಿ, ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಹಣ, ಆಸ್ತಿ, ಅಧಿಕಾರ ಹೊಂದಿರುವ ಜನರನ್ನು ಓಲೈಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ವಿಷಾದಿಸಿದರು.

ಸಾಕಷ್ಟು ಅನ್ಯಾಯ, ಅಕ್ರಮಗಳನ್ನು ಮಾಡಿ ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸಿ ಗೌರವಿಸುವುದು, ಜೈಕಾರ ಹಾಕುವುದು ಸಮಾಜದಲ್ಲಿ ಇಂದು ಸರ್ವೇ ಸಾಮಾನ್ಯವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಸಮಾಜದಲ್ಲಿ ಭ್ರಷ್ಟ ವ್ಯವಸ್ಥೆ ಬದಲಾವಣೆ ಆಗಬೇಕಾದರೆ ಯುವಜನರು ಹಾಗೂ ವಿದ್ಯಾರ್ಥಿಗಳು ದೃಢ ಸಂಕಲ್ಪ ಮಾಡಿ ಅನ್ಯಾಯ ಅಕ್ರಮಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ಆಗ ಮಾತ್ರ ನಾವು ಬದಲಾವಣೆ ನಿರೀಕ್ಷಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ದುರಾಸೆಯನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ವಯಂ ಪ್ರೇರಣೆಯಿಂದ ನಾವು ಬದಲಾಗಬೇಕು. ಅತಿಯಾದ ಆಸೆಗೆ ಬ್ರೇಕ್ ಹಾಕಿ ಸ್ವಾರ್ಥವನ್ನು ಬಿಟ್ಟು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು ಎಂದರು.

ಯುವಕರು ಮತ್ತು ವಿದ್ಯಾರ್ಥಿಗಳು ಮನಸ್ಸು ಮಾಡಿ ನಿಂತರೆ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವನ್ನು ಬೇರು ಸಮೇತವಾಗಿ ಕಿತ್ತುಹಾಕಿ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಹುದು. ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ನಾನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ರಾಜ್ಯಾದ್ಯಂತ ಸಂಚರಿಸಿ ಇಂತಹ ಕಾರ್ಯಕ್ರಮಗಳ ಮೂಲಕ ಯುವ ಸಮುದಾಯಕ್ಕೆ ಅರಿವು ಮೂಡಿಸುತ್ತಿದ್ದೇನೆ ಹೇಳಿದರು.

ದೇಶದ ಸನಾತನ ಹಿಂದೂ ಧರ್ಮದ ಖ್ಯಾತಿಯನ್ನು ವಿಶ್ವ ಮಟ್ಟದಲ್ಲಿ ಬೆಳಗಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಸಂದೇಶದಂತೆ ವಿದ್ಯಾರ್ಥಿಗಳು ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಗುರಿಸಾಧನೆ ಮಾಡಬೇಕು ಎಂದರು.

ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ತೊಂದರೆಗಳನ್ನು ಸಮರ್ಥವಾಗಿ ಎದುರಿಸಿ ಗುರಿಮುಟ್ಟಬೇಕು. ಬಾಲ್ಯದಿಂದಲೇ ತಮ್ಮ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸೇವೆ ಗುಣ ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಬದಲಾಗಬೇಕು ಎಂದರು.

ಲೋಕಾಯುಕ್ತ ಹುದ್ದೆ ನನ್ನ ಜೀವನದಲ್ಲಿ ಸಾರ್ಥಕತೆ ನೀಡಿದ ಹುದ್ದೆಯಾಗಿದೆ. ಇದರಿಂದ ನನಗೆ ಬಡಜನರ ಕಷ್ಟ ಸುಖ ತಿಳಿಯಲು, ನೊಂದ ಜನರಿಗೆ ಸಹಾಯ ಮಾಡಲು ಸಾಧ್ಯವಾಯಿತು. ಮುಖ್ಯಮಂತ್ರಿ, ಮಂತ್ರಿಗಳು ಹಾಗೂ ಶಾಸಕರ ಭ್ರಷ್ಟಾಚಾರವನ್ನು ಸಾಕ್ಷಿ ಸಮೇತ ಬಯಲು ಮಾಡಿ ಶಿಕ್ಷೆಗೆ ಒಳಪಡಿಸಿ ನೀಡಿ, ಜೈಲಿಗೆ ಕಳಿಸಿದ್ದು ನನಗೆ ತೃಪ್ತಿ ನೀಡಿದೆ ಎಂದರು.

ಶಾಲೆ ಪ್ರಾಂಶುಪಾಲ ಎಲ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಅವರಂತೆ ವಿದ್ಯಾರ್ಥಿಗಳು ಕೂಡ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಧೀಕ್ಷೆ ತೊಡಬೇಕು ಎಂದರು.

ತಾಲೂಕಿನ ಬೆಡದಹಳ್ಳಿ ಪಂಚಭೂತೇಶ್ವರ ಮಠದ ಪೀಠಾಧಿಪತಿ ಶ್ರೀರುದ್ರಮುನಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಪೋಷಕರು ಹಾಗೂ ಅತಿಥಿಗಳನ್ನು ರಂಜಿಸಿತು. ಪೋಷಕ ಶಿಕ್ಷಕ ಪರಿಷತ್ ಸದಸ್ಯರಾದ ಸತೀಶ್, ಯೋಗೇಶ್, ಮಹೇಶ್, ದೊರೆರಾಜು, ಜಯೇಶ್, ಕುಮಾರ್, ಶಂಕರ್, ನಿಲಯ ಪಾಲಕ ಪ್ರದೀಪ್, ಕಾಡುಮೆಣಸ ಚಂದ್ರು ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ