ಕನ್ನಡಪ್ರಭ ವಾರ್ತೆ ಇಳಕಲ್ಲ
ಕ್ಷೇತ್ರದ ಜನತೆಗೆ ಅನ್ಯಾಯವಾದರೆ ಆ ಕ್ಷೇತ್ರದ ಜನಪ್ರತಿನಿಧಿಯಾದ ಶಾಸಕರ ಬಳಿಗೆ ಹೋಗಿ ತಮಗಾದ ಅನ್ಯಾಯದ ಹೇಳಿಕೊಳ್ಳುವುದು ಪ್ರಜಾಪ್ರಭುತ್ವ ತತ್ವ. ಆದರೆ, ಹುನಗುಂದ ಕ್ಷೇತ್ರದಲ್ಲಿ ಶಾಸಕರ ಬಳಿ ಹೋದರೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಅರಿತು ಅನಾಮಧೇಯನೊಬ್ಬ ಮಾಜಿ ಶಾಸಕರಾದ ನನಗೆ ಪತ್ರ ಬರೆದು ಅಳಲು ತೋಡಿಕೊಂಡಿರುವುದು ಕ್ಷೇತ್ರದ ಶಾಸಕರ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ.ಪಾಟೀಲ ಆರೋಪಿಸಿದರು.ನಗರದ ತಮ್ಮ ನಿವಾಸದ ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ೯ರಂದು ಸಾರ್ವಜನಿಕರ ಕುಂದುಕೊರತೆ ಆಲಿಸಲು ಇಳಕಲ್ಲಗೆ ಲೋಕಾಯುಕ್ತರು ಬಂದಿದ್ದಾಗ ಅವರಿಗೆ ಉಪಚಾರ ಹಾಗೂ ತನಿಖೆಯಿಂದ ಬಚಾವಾಗಲು ಸ್ವತಃ ತಹಸೀಲ್ದಾರರು ಪ್ರತಿಯೊಬ್ಬ ಸಿಬ್ಬಂದಿಯಿಂದ ಹಣ ವಸೂಲಿ ಮಾಡಿದ್ದಾರೆ. ಈ ಕುರಿತು ತನಿಖೆ ನಡೆದಿದ್ದು, ಹಣ ಪಡೆದಿರುವ ವಿಷಯ ಹೇಳದಂತೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಜೊತೆಗೆ ಪ್ರಕರಣ ನಮ್ಮ ತಲೆಗೆ ಕಟ್ಟುವ ಪ್ರಯತ್ನ ನಡೆಸಿದ್ದಾರೆ. ಅಸಹಾಯಕರಾದ ನಮಗೆ ನ್ಯಾಯ ಕೊಡಿಸಿ ಎಂದು ನೌಕರರೊಬ್ಬರು ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದು ದೂರಿದರು.
ಲೋಕಾಯುಕ್ತರಿಗೆ ಉಪಚರಿಸಲು ಉಪಹಾರ, ಗೋಡಂಬಿ, ದ್ರಾಕ್ಷಿ, ತಂಪುಪಾನೀಯ ಸೇರಿದಂತೆ ಇತರೆ ಖರ್ಚಿಗೆ ತಹಸೀಲ್ದಾರ್ ಕಚೇರಿಯ ಪ್ರತಿಯೊಬ್ಬ ಸಿಬ್ಬಂದಿ ತಲಾ ₹೫೦೦ ಕೊಡಬೇಕು ಎಂದು ತಹಸೀಲ್ದಾರ ಸತೀಶ ಕೂಡಲಗಿ ಅವರು ಮೌಖಿಕವಾಗಿ ತಾಕೀತು ಮಾಡಿದ್ದರಿಂದ ನಾವೆಲ್ಲ ತಲಾ ₹೫೦೦ರಂತೆ ಎಂ.ಬಿ. ಗುಡ್ಡಿಮಠ ಅವರ ಹತ್ತಿರ ಕೊಟ್ಟಿದ್ದೆವು. ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಕಾರ್ಯಕ್ರಮ ಮುಗಿಸಿ ಕಚೇರಿಗೆ ಬಂದ ಬಳಿಕ ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಆಗಮಿಸಿ ಕಡತ ಪರಿಶೀಲನೆ ಮಾಡಿ ಹೋದರು ಎಂದರು. ನಂತರ ತಹಸೀಲ್ದಾರರು ಎಲ್ಲ ಸಿಬ್ಬಂದಿಯನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಲೋಕಾಯುಕ್ತರು ಹಣಕ್ಕೆ ಡಿಮಾಂಡ್ ಮಾಡಿದ್ದು, ಎಲ್ಲರೂ ತಲಾ ₹೧೫ ಸಾವಿರ ಕೊಡಬೇಕು. ಇಲ್ಲವಾದರೆ ನೀವು ಲೋಕಾಯುಕ್ತ ಬಲೆಗೆ ಬೀಳುತ್ತೀರಿ ಎಂದು ಹೆದರಿಸಿದ್ದು, ನಾವು ಸಾಧ್ಯವಾದಷ್ಟು ಹಣವನ್ನು ನೇರವಾಗಿ ತಹಸೀಲ್ದಾರರಿಗೆ ಕೊಟ್ಟೆವು. ನಮ್ಮ ಹೆಸರು, ಅಮೌಂಟ್ ಅನ್ನು ಕಾಗದದಲ್ಲಿ ಬರೆದುಕೊಂಡರು. ಆದರೆ ಈಗ ಲೋಕಾಯುಕ್ತರ ಹೆಸರಿನಲ್ಲಿ ಹಣ ತೆಗೆದುಕೊಂಡಿರುವುದರ ಬಗ್ಗೆ ತನಿಖೆ ನಡೆಯುತ್ತಿದ್ದು, ನನ್ನ ಹೆಸರು ಹೇಳದಂತೆ ತಹಸೀಲ್ದಾರರು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಹಣ ಪಡೆದಿರುವುದನ್ನು ಸಿಬ್ಬಂದಿ ತಲೆಗೆ ಕಟ್ಟಲು ಪ್ರಯತ್ನ ನಡೆದಿದೆ. ಈ ಸಂಬಂಧ ಎಂ.ಬಿ. ಗುಡ್ಡಿಮಠ ತಮ್ಮ ಹಸ್ತಾಕ್ಷರದಲ್ಲಿ ಬರೆದ ಹೆಸರು, ಹಾಗೂ ಲೋಕಾಯುಕ್ತರ ಹೆಸರಿನಲ್ಲಿ ಸಿಬ್ಬಂದಿಯಿಂದ ಪಡೆದ ಹಣದ ಬಗ್ಗೆ ತಹಸೀಲ್ದಾರ್ ಹಸ್ತಾಕ್ಷರದಲ್ಲಿ ಬರೆದ ಪೇಪರ್‌ನ ನಕಲು ಪ್ರತಿಗಳನ್ನು ಈ ಪತ್ರದ ಜೊತೆ ಕಳುಹಿಸಿದ್ದೇನೆ. ಅಸಹಾಯಕರಾದ ನಮಗೆ ನ್ಯಾಯ ಕೊಡಿಸಿ, ನಮ್ಮಂತಹ ನೊಂದ ಸರ್ಕಾರಿ ನೌಕರರ ಧ್ವನಿಯಾಗಿ ಎಂದು ಮನವಿ ಮಾಡಿದ್ದಾರೆ. ಇದೆಲ್ಲ ನೋಡಿದರೆ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಸ್ಪಷ್ಟವಾಗುತ್ತದೆ. ಈ ವಿಷಯವಾಗಿ ನಾನು ಲೋಕಾಯುಕ್ತರಿಗೆ ಡಿಸಿ ಹಾಗೂ ಎಸ್.ಪಿ ಅವರಿಗೆ ಪತ್ರಬರೆದು ನ್ಯಾಯ ಒದಗಿಸಲು ಒತ್ತಾಯಿಸುತ್ತೇನೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಲಕ್ಷ್ಮಣ ಗುರಂ, ಮಹಾಂತಗೌಡ ಪಾಟೀಲ ತೊಂಡಿಹಾಳ, ಶಿವನಗೌಡ ಪಾಟೀಲ, ಮಹಾಂತಪ್ಪ ಚನ್ನಿ, ಡಾ.ಮಹಾಂತೇಶ ಕಡಪಟ್ಟಿ, ಮಂಜುನಾಥ ಶೆಟ್ಟರ, ಆದಪ್ಪ ಮೇರನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.